ದೇಶ

ಎಸ್​ಐಆರ್ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ; ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ | Amit Shah

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳು ನಿರೂಪಣೆ ಹರಡುತ್ತಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ವಾಗ್ದಾಳಿ ನಡೆಸಿದ್ದು, ಒಳನುಸುಳುಕೋರರನ್ನು ಹೊರದಬ್ಬುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಡೆಹ್ರಾಡೂನ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳು ನಿರೂಪಣೆ ಹರಡುತ್ತಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ವಾಗ್ದಾಳಿ ನಡೆಸಿದ್ದು, ಒಳನುಸುಳುಕೋರರನ್ನು ಹೊರದಬ್ಬುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ಶುಕ್ರವಾರ(ನ. 06) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್, ರಾಹುಲ್ ಗಾಂಧಿ ಮತ್ತು ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್ ಮೇಲೆ ವಾಗ್ದಾಳಿ ಕಿಡಿಕಾರಿದ್ದಾರೆ.

ರಾವತ್ ಅವರನ್ನು ಟೀಕಿಸಿದ ಶಾ, ಶುಕ್ರವಾರದಂದು ಶಾಲೆಗಳಿಗೆ ರಜೆ ಘೋಷಿಸಲು ಕಾಂಗ್ರೆಸ್ ನಾಯಕರೇ ಕಾರಣ. ರಾವತ್ ಅವರೊಂದಿಗೆ ಸಂಬಂಧ ಹೊಂದಿರುವ 'ಸ್ಟಿಂಗ್ ಆಪರೇಷನ್' ಒಂದನ್ನು ಉಲ್ಲೇಖಿಸಿದ ಅವರು, ಸಚಿವಾಲಯದಲ್ಲಿ ಏನೆಲ್ಲಾ ನಡೆಯುತ್ತಿತ್ತು ಎಂಬುದನ್ನು ಜನರು ನೋಡಿದ್ದಾರೆ ಎಂದು ಟೀಕಿಸಿದ್ದಾರೆ.

ಇನ್ನೂ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರನ್ನು ಶ್ಲಾಘಿಸಿದ ಶಾ, ರಾಜ್ಯದ ಹೂಡಿಕೆ ಯೋಜನೆಗಳನ್ನು ಅವರ ಆಡಳಿತಾತ್ಮಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಉಲ್ಲೇಖಿಸಿದರು. ಧಾಮಿ ಅವರು 1 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ನಿಗದಿಪಡಿಸಿದಾಗ, ತಮಗೆ ಆರಂಭದಲ್ಲಿ ಸಂಶಯವಿತ್ತು. ಆದರೆ, ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತನಾಡಿದ ಬಳಿಕ ಯೋಜನೆಯನ್ನು ವಿವರಿಸಿ, ಆ ಗುರಿಯನ್ನು ಖಚಿತಪಡಿಸಿದಾಗ ತಮ್ಮಲ್ಲಿದ್ದ ಸಂಶಯಗಳು ದೂರವಾದವು ಎಂದಿದ್ದಾರೆ.

ಯುವಕರು ಕೈಗಾರಿಕಾ ಅಭಿವೃದ್ಧಿಯನ್ನು ಬಯಸುತ್ತಾರೆ ಎಂದ ಅವರು, ಉತ್ತರಾಖಂಡದ ಪರ್ವತಗಳ ನೀರು ಮತ್ತು ಅಲ್ಲಿನ ಯುವಜನರು ಆ ಬೆಟ್ಟ ಪ್ರದೇಶಗಳಿಗೆ ನೆರವಾಗುವುದಿಲ್ಲ ಎಂಬ ಮಾತಿನೊಂದಿಗೆ ಈ ರಾಜ್ಯವು ಬಹಳ ಹಿಂದಿನಿಂದಲೂ ಗುರುತಿಸಿಕೊಂಡಿದೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಹಾಗೂ ವಲಸೆಯನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಈಗ ರಾಜ್ಯ ಹೂಡಿಕೆಗಳತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).