Mohan Bhagwat | ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್
ನವದೆಹಲಿ: ಭಾರತವು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದನ್ನು ಸಹಿಸದ ಕೆಲವು ಆಂತರಿಕ ಮತ್ತು ಬಾಹ್ಯ ಶಕ್ತಿಗಳು, ದೇಶವನ್ನು ದುರ್ಬಲಗೊಳಿಸಲು ವ್ಯವಸ್ಥಿತವಾಗಿ ಸುಳ್ಳು ವರದಿ ಹಾಗೂ ಅಪಪ್ರಚಾರಗಳನ್ನು ಹರಡುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಮಹಾರಾಣಾ ಪ್ರತಾಪ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್ ಅವರು, ದೇಶದ ಏಳಿಗೆಯನ್ನು ವಿರೋಧಿಸುವವರ ಬಳಿ ಅಪಾರ ಹಣಬಲ, ಜನಬಲ ಮತ್ತು ಅಧಿಕಾರವಿದ್ದರೂ, ಭಾರತವು ತನ್ನ ಸಾಂಸ್ಕೃತಿಕ ಮೌಲ್ಯಗಳ ಆಧಾರದ ಮೇಲೆ ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ. ಬಲಿಷ್ಠ ಭಾರತದ ಉದಯವು ಕೇವಲ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವದ ಕಲ್ಯಾಣಕ್ಕೆ ಅತ್ಯಂತ ಅನಿವಾರ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇತಿಹಾಸವು ಗುಲಾಮಗಿರಿಯ ಕಥೆಯಲ್ಲ, ನಿರಂತರ ಹೋರಾಟದ ಸಾಕ್ಷಿ!
ಭಾರತದ ಭವ್ಯ ಇತಿಹಾಸವನ್ನು ಸ್ಮರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥರು, ನಮ್ಮ ಇತಿಹಾಸವು ಗುಲಾಮಗಿರಿಯ ಕಥೆಯಲ್ಲ, ಬದಲಿಗೆ ನಮ್ಮನ್ನು ಗುಲಾಮರನ್ನಾಗಿ ಮಾಡಲು ಬಂದವರ ವಿರುದ್ಧ ನಡೆಸಿದ ನಿರಂತರ ಹೋರಾಟದ ಸಾಕ್ಷಿಯಾಗಿದೆ ಎಂದಿದ್ದಾರೆ. ಐತಿಹಾಸಿಕ ಹಲ್ದಿಘಾಟಿ ಯುದ್ಧದ 350ನೇ ವರ್ಷದ ಕುರಿತು ಮಾತನಾಡಿದ ಅವರು, ಮಹಾರಾಣಾ ಪ್ರತಾಪ್ ಅವರ ಹೋರಾಟವು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಇರಲಿಲ್ಲ. ಅದು ಧರ್ಮ, ಸಂಸ್ಕೃತಿ ಮತ್ತು ನಾಡಿನ ಸ್ವಾಭಿಮಾನದ ರಕ್ಷಣೆಗಾಗಿ ನಡೆದ ಜನಾಂದೋಲನವಾಗಿತ್ತು. ಕಷ್ಟದ ಕಾಲದಲ್ಲೂ ಹೇಗೆ ಧೀರತನದಿಂದ ಮುನ್ನುಗ್ಗಬೇಕು ಎಂಬುದನ್ನು ಮಹಾರಾಣಾ ಪ್ರತಾಪ್ ಅವರ ಜೀವನ ನಮಗೆ ಕಲಿಸಿಕೊಡುತ್ತದೆ ಎಂದು ತಿಳಿಸಿದ್ದಾರೆ.
ಮೊಘಲ್ ಇತಿಹಾಸಕಾರರ ದಾಖಲೆಗಳಲ್ಲೇ ಹಲ್ದಿಘಾಟಿ ಯುದ್ಧದಲ್ಲಿ ಭಾರತೀಯ ಸೈನಿಕರ ಪರಾಕ್ರಮಕ್ಕೆ ಹೆದರಿ ಮೊಘಲರು ಮೊದಲ ದಾಳಿಯಲ್ಲೇ ಮೈಲುಗಟ್ಟಲೆ ದೂರ ಓಡಿಹೋಗಿದ್ದ ಉಲ್ಲೇಖಗಳಿವೆ ಎಂದು ನೆನಪಿಸಿದ ಭಾಗವತ್ ಅವರು, ಭಾರತದ ಸಮಾಜವು ವಿದೇಶಿ ಆಕ್ರಮಣಕಾರರನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ದೇಶದ ಶಕ್ತಿಯು ಕೇವಲ ಸಂಪನ್ಮೂಲಗಳಲ್ಲಲ್ಲ, ಬದಲಿಗೆ ಇಲ್ಲಿನ ನೈತಿಕ ಚಾರಿತ್ರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳಲ್ಲಿದೆ ಎಂದರು. ಮುಂಬರುವ ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು, ಮೇವಾರದ ಜನತೆ ಮಹಾರಾಣಾ ಪ್ರತಾಪ್ ಬೆನ್ನಿಗೆ ನಿಂತಂತೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಏಕತೆ ಎಂದರೆ ಎಲ್ಲರೂ ಒಂದೇ ತರ ಇರುವುದಲ್ಲ, ಬದಲಿಗೆ ಪರಸ್ಪರ ಗೌರವ ಮತ್ತು ಸಾಮರಸ್ಯದಿಂದ ಬಾಳುವುದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಸಲಹೆ ನೀಡಿದ್ದಾರೆ(ಏಜೆನ್ಸೀಸ್).