ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್ 
ದೇಶ

ನಕಲಿ ಪ್ಯಾನ್ ಕಾರ್ಡ್ ಕೇಸ್: ಮತ್ತೆ ಜೈಲು ಸೇರಿದ ಎಸ್​ಪಿ ನಾಯಕ ಅಜಂ ಖಾನ್​: 7 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​| Azam Khan

ರಾಂಪುರ: ನಕಲಿ ಪ್ಯಾನ್ ಕಾರ್ಡ್‌ ಬಳಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್ ಅವರನ್ನು ರಾಂಪುರದ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ದೋಷಿ ಎಂದು ತೀರ್ಪು ನೀಡಿದ್ದು, 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆ ಎರಡು ತಿಂಗಳ ಹಿಂದೆ ಬಿಡುಡಗೆಯಾಗಿದ್ದ ಅಜಂ ಖಾನ್(Azam Khan) ಮತ್ತು ಅವರ ಮಗನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಸುಮಾರು ಎರಡು ವರ್ಷ ಜೈಲಿನಲ್ಲಿದ್ದ ಅಜಂ ಖಾನ್ ಇತ್ತೀಚೆಗೆ ಸೀತಾಪುರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಸ್ವತಃ ಎಸ್​ಪಿ ನಾಯಕ ಅಖಿಲೇಶ್​ ಯಾದವ್ ಅಜಂ ಖಾನ್ ಮನೆಗೆ ಭೇಟಿ ನೀಡಿ ಕುಶಲೋಪಕಾರಿ ವಿಚಾರಿಸಿದ್ದರು.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2019ರಲ್ಲಿ ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ, ಅಜಂ ಖಾನ್ ಮತ್ತು ಅವರ ಪುತ್ರನ ವಿರುದ್ಧ ನಕಲಿ ಪ್ಯಾನ್ ಕಾರ್ಡ್ ಬಳಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಪುತ್ರ ಅಬ್ದುಲ್ಲಾ ಅವರ ಶಾಲಾ ದಾಖಲೆಗಳಿಗೆ ಸಂಬಂಧಿಸಿದ ಮೊದಲ ಪ್ಯಾನ್ ಕಾರ್ಡ್ 1993 ಜನವರಿ 1ರ ದಿನಾಂಕವನ್ನು ಹೊಂದಿತ್ತು. ಅದನ್ನು ಬ್ಯಾಂಕಿಂಗ್ ಮತ್ತು ಆದಾಯ ತೆರಿಗೆ ಸಲ್ಲಿಕೆಗಾಗಿ ಬಳಸಲಾಗಿತ್ತು ಎನ್ನಲಾಗಿದೆ. 1990 ಸೆಪ್ಟೆಂಬರ್ 30ರಂದು ಹುಟ್ಟಿದ ದಿನಾಂಕವನ್ನು ತೋರಿಸುವ ಎರಡನೇ ಪ್ಯಾನ್ ಕಾರ್ಡ್ ಅನ್ನು 2017ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಸುವಾರ್ ಸ್ಥಾನದಿಂದ ಸ್ಪರ್ಧಿಸಲು ವಯಸ್ಸಿನ ಪ್ರಕಾರ ಅರ್ಹರು ಎಂದು ತೋರಿಸಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಅಜಂ ಖಾನ್ ವಿರುದ್ಧ ಚುನಾವಣಾ ಲಾಭಕ್ಕಾಗಿ ತನ್ನ ಮಗನಿಗೆ ಸುಳ್ಳು ದಾಖಲೆಗಳನ್ನು ಒದಗಿಸಲು ಸಹಾಯ ಮಾಡಿದ ಆರೋಪವನ್ನು ಹೊರಿಸಲಾಗಿದೆ. ನ್ಯಾಯಾಲಯವು ಇಬ್ಬರನ್ನೂ ನಕಲಿ ದಾಖಲೆಗಳ ಸೃಷ್ಟಿ, ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ನಕಲಿ ದಾಖಲೆಗಳನ್ನು ಬಳಸಿದ ಆರೋಪದ ಮೇಲೆ ಇಬ್ಬರಿಗೆ ಶಿಕ್ಷೆ ವಿಧಿಸಿದೆ.
ಅಜಂ ಖಾನ್​ ಅವರ ವಿರುದ್ಧ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಅಧಿಕಾರದ ಅಹಂಕಾರದಲ್ಲಿ ಒಂದು ದಿನ ಅನ್ಯಾಯ ಮತ್ತು ದಬ್ಬಾಳಿಕೆಯ ಮಿತಿಗಳನ್ನು ದಾಟುವವರು ಪ್ರಕೃತಿಯ ತೀರ್ಪಿನ ಹಿಡಿತದಲ್ಲಿ ಸಿಲುಕಿಕೊಂಡು ಕೆಟ್ಟ ಅಂತ್ಯದತ್ತ ಸಾಗುತ್ತಾರೆ. ಎಲ್ಲರೂ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಂಪುರದಿಂದ 10 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕರಾಗಿರುವ ಅಜಮ್ ಖಾನ್, ಉತ್ತರ ಪ್ರದೇಶದ ಅತ್ಯಂತ ಪ್ರಭಾವಿ ಮುಸ್ಲಿಂ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಪಶ್ಚಿಮ ಯುಪಿಯಲ್ಲಿ ಮುಸ್ಲಿಂ ಮತಬ್ಯಾಂಕ್ ಮೇಲೆ ತಮ್ಮ ಬಲವಾದ ಹಿಡಿತವನ್ನು ಹೊಂದಿರುವ ಅವರು ರಾಜ್ಯ ಕ್ಯಾಬಿನೆಟ್ ಸಚಿವರಾಗಿ ಹಲವು ಅವಧಿಗೆ ಕೆಲಸ ಮಾಡಿದ್ದಾರೆ (ಏಜೆನ್ಸೀಸ್).