Fake Income Tax Officers 
ದೇಶ

ಐಟಿ ಅಧಿಕಾರಿಗಳ ಹೆಸರಲ್ಲಿ ವಂಚನೆ; ಲಕ್ಷ ಲಕ್ಷ ಪೀಕುತ್ತಿದ್ದ ಖತರ್ನಾಕ್​ ಗ್ಯಾಂಗ್​ನ್ನು ಪೊಲೀಸರಿಗೊಪ್ಪಿಸಿದ ಯುಪಿ ವ್ಯಾಪಾರಿಗಳು!..Fake Income Tax officers

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದಲ್ಲಿ ನಕಲಿ ಐಟಿ ಅಧಿಕಾರಿಗಳ ವೇಷದಲ್ಲಿ ವಂಚನೆ
  • ವ್ಯಾಪಾರಿಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ಹಣ ವಸೂಲಿ ಮಾಡುತ್ತಿದ್ದ ವಂಚಕರು
  • ಐಷಾರಾಮಿ ಕಾರು, ನಕಲಿ ಐಡಿ ಕಾರ್ಡ್‌, ನಗದು ವಶಕ್ಕೆ ಪಡೆದುಕೊಂಡ ಘಾಜಿಪುರ ಪೊಲೀಸರು
ಘಾಜಿಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಸುಲಭವಾಗಿ ಹಣ ಸಂಪಾದಿಸುವ ನಿಟ್ಟಿನಲ್ಲಿ, ಸೈಬರ್​, ಡಿಜಿಟಲ್​ ಅರೆಸ್ಟ್, ಅಮಾಯಕರಿಗೆ ಮೋಸ ಮಾಡುವ ಜಾಡನ್ನು ವಂಚಕರು ಹಿಡಿದಿದ್ದಾರೆ. ಸದ್ಯ ಉತ್ತರ ಪ್ರದೇಶದಲ್ಲಿ ಖದೀಮರ ಗುಂಪೊಂದು ಐಟಿ ಅಧಿಕಾರಿಗಳ ವೇಷದಲ್ಲಿ (Fake Income Tax Officers) ಅಂಗಡಿ ಮಾಲೀಕರಿಗೆ ವಂಚನೆ ಮಾಡಲು ಬಂದು ಪೊಲೀಸರ ಬಳಿ ತಗ್ಲಾಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಘಾಜಿಪುರದ ಸಮೀಪವಿರುವ ಶಾದಿಯಾಬಾದ್​ ಮಾರ್ಕೆಟ್​ನಲ್ಲಿ ಈ ಘಟನೆ ನಡೆದಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡು ವಂಚಿಸುತ್ತಿದ್ದ ಗ್ಯಾಂಗ್​ ಅನ್ನು ಇಲ್ಲಿನ ಅಂಗಡಿ ಮಾಲೀಕರೇ ಪೊಲೀಸರಿಗೆ ದೂರು ನೀಡಿ, ಜೈಲಿಗೆ ತಳ್ಳುವಂತೆ ಮಾಡಿದ್ದಾರೆ. ಗ್ಯಾಂಗ್​​ ನಾಯಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ಶಾದಿಯಾಬಾದ್​ ಮತ್ತು ಸೈದ್​ಪುರ ಮಾರ್ಕೆಟ್​ನಲ್ಲಿ ನಿತ್ಯವು ಗ್ಯಾಂಗ್​ವೊಂದು ಐಟಿ ಅಧಕಾರಿಗಳು ಎಂದು ಹೇಳಿಕೊಂಡು ಹಣ ಸುಲಿಗೆ ಮಾಡುತ್ತಿದೆ ಎನ್ನುವ ಆರೋಪಗಳು, ದೂರು ಕೇಳಿಬಂದಿತ್ತು. ಪ್ರತಿ ನಿತ್ಯವು ಮಾರ್ಕೆಟ್​ಗೆ ತೆರಳುವ ಗ್ಯಾಗ್​. ತಾವು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಂದು ಬಿಂಬಿಸಲು ಸರ್ಕಾರದ ಲಾಂಛನವಿರುವ ಐಷಾರಾಮಿ ಕಾರ್​ನಲ್ಲಿ ಎಂಟ್ರಿ ಕೊಡುತ್ತಿದ್ದರು ಎನ್ನಲಾಗಿದೆ. ಆ ಬಳಿಕ ಅಂಗಡಿಗಳ ಮೇಲೆ ದಾಳಿ ನಡೆಸಿ, ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಿದೆ ಎಂದು ವ್ಯಾಪಾರಿಗಳನ್ನು ಹೆದರಿಸಿ, 'ಸೆಟಲ್ಮೆಂಟ್' ಮಾಡಿಕೊಳ್ಳುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡುತ್ತಿದ್ದರು.
ಈ ಬಗ್ಗೆ ಶಾದಿಯಾಬಾದ್​ ಮಾರುಕಟ್ಟೆಯಲ್ಲಿದ್ದ ಮಾಲೀಕರು ಕೈಗಾರಿಕಾ ವ್ಯಾಪಾರ ಮಂಡಳಿ ಅಧ್ಯಕ್ಷ ಇಕ್ರಮುಲ್​​ ಹಕ್​ ಎಂಬುವವರಿಗೆ ದೂರು ನೀಡಿದರು. ಅವರು ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರ ಜೊತೆ ಸಂವಹನ ನಡೆಸಿದಾಗ ಇವರು ನಕಲಿ ಅಧಿಕಾರಿಗಳು ಎನ್ನುವ ಅಸಲಿ ಬಣ್ಣ ಬೆಳಕಿಗೆ ಬಂದಿದೆ.
ಇನ್ನು ಮತ್ತೆ ಇದೇ ಗ್ಯಾಂಗ್​​ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದ್ದನ್ನು ಕಾದಿದ್ದ ಇಕ್ರಮುಲ್​​ ಹಕ್​ ಖಚಿತ ಮಾಹಿತಿ ಪಡೆದು ಶಾದಿಯಾಬಾದ್ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ಕೊಟ್ಟರು. ಬೇರೊಂದು ಅಂಗಡಿಯಲ್ಲಿ ಹಣ ಪೀಕುತ್ತಿದ್ದಾಗಲೇ ಪೊಲೀಸರು ಎಂಟ್ರಿಕೊಟ್ಟು ವಂಚಕರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

ಏನೆಲ್ಲ ಜಪ್ತಿ ಮಾಡಿಕೊಳ್ಳಲಾಗಿದೆ?

ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ವಂಚಿಸುತ್ತಿದ್ದವರ ಬಳಿ ಪೊಲೀಸರು ಐಷಾರಾಮಿ ಕಾರು, ನಕಲಿ ಗುರುತಿನ ಚೀಟಿಗಳು, ಮೊಬೈಲ್ ಫೋನ್‌ಗಳು ಮತ್ತು ಹಣವನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ, (ಏಜೆನ್ಸೀಸ್​).