ಅಶೋಕ್ ಖರತ್​​ 
ದೇಶ

ನಕಲಿ ದೇವಮಾನವನ ಕಾಮಕಾಂಡ; ಆರೋಪಿ ಅಶೋಕ್ ಖರತ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ | Ashok Kharat

ಮುಂಬೈ: ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಮೂಡಿಸಿರುವ ನೂರಾರು ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಕಲಿ ದೇವಮಾನವ ಮತ್ತು ಜ್ಯೋತಿಷಿ ಅಶೋಕ್ ಖರತ್​​ನನ್ನು ಬುಧವಾರ(ಏ. 01) ನಾಸಿಕ್ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
150 ಕ್ಕೂ ಹೆಚ್ಚು ಮಹಿಳೆಯರ ಜೀವನವನ್ನು ಸುಧಾರಿಸುವ ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳನ್ನು ಮಾಟಮಂತ್ರದ ಮೂಲಕ ಪರಿಹರಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ನಾಸಿಕ್ ಪೊಲೀಸರು ಅಶೋಕ್ ಖರತ್ ಅವರನ್ನು ಬಂಧಿಸಿದ್ದರು. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಐಪಿಎಸ್ ಅಧಿಕಾರಿ ತೇಜಸ್ವಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
ಖರತ್ ಅವರ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಹಲವು ಪ್ರಮುಖ ಆಸ್ತಿಗಳಿವೆ ಎನ್ನಲಾಗಿದ್ದು, ಮಂಗಳವಾರ(ಮಾ. 31) ಅಶೋಕ್ ಖರತ್ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದು, ಪತ್ನಿ ತಲೆಮರೆಸಿಕೊಂಡಿದ್ದಾರೆ. ಮಗಳ ವಿರುದ್ಧವೂ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಸೋಮವಾರ ಎಸ್‌ಐಟಿ ತಂಡವು ನಾಸಿಕ್‌ನಲ್ಲಿರುವ ಆರೋಪಿ ಖರತ್ ಕಚೇರಿಗೆ ಭೇಟಿ ನೀಡಿ ಎರಡು ಲ್ಯಾಪ್‌ಟಾಪ್‌ಗಳು ಮತ್ತು ಒಂದು ಮೊಬೈಲ್ ಅನ್ನು ವಶಪಡಿಸಿಕೊಂಡಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ನಕಲಿ ದೇವಮಾನವನು 150ಕ್ಕೂ ಹೆಚ್ಚು ಮಹಿಳೆಯರ ಜೀವನವನ್ನು ಸುಧಾರಿಸುವ ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿ ಸಮಸ್ಯೆಗಳನ್ನು ಪರಿಹರಿಸುವ ನೆಪದಲ್ಲಿ ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಕಂಡುಕೊಂಡಿದೆ.
ಎಸ್​ಐಟಿ ಪೊಲೀಸರು ಖರತ್ ಅವರ ಕಚೇರಿ ಮತ್ತು ಆಸ್ತಿಗಳನ್ನು ಸೀಲ್ ಮಾಡಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಆರೋಪಿಯ ಹಣದ ವಹಿವಾಟಿನ ಜಾಡು ಕೂಡ ತನಿಖೆ ನಡೆಸುತ್ತಿದ್ದು, ಹಾಗೆಯೇ ಆರೋಪಿಯ ಮೊಬೈಲ್​ನಿಂದ ಪಡೆದ ದತ್ತಾಂಶ ಪಡೆದಿದ್ದಾರೆ. ಆ ಮಾಹಿತಿ ಪ್ರಕಾರ ಮಹಿಳೆಯರು ಸೇರಿದಂತೆ ಉನ್ನತ ವ್ಯಕ್ತಿಗಳನ್ನು ಸಂಪರ್ಕಿಸಲು ವಿಭಿನ್ನ ಮೊಬೈಲ್‌ಗಳನ್ನು ಬಳಸುತ್ತಿದ್ದರು ಎಂಬುದು ತಿಳಿದು ಬಂದಿದೆ.
ಇನ್ನೂ ನಕಲಿ ದೇವಮಾನವ ಮಹಿಳೆಯರಿಗೆ ನೀಡಲಾಗುವ ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿ ಸ್ಪೈಕ್ ಮಾಡುತ್ತಿದ್ದನು. ನಂತರ ಅವರನ್ನು ಕೆಲವೊಮ್ಮೆ ಸಂಮೋಹನಗೊಳಿಸಿದ ನಂತರ ಶೋಷಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಇನ್ನೂ ನಕಲಿ ದೇವಮಾನವನ ಕೃತ್ಯದಿಂದ ಮಹಾರಾಷ್ಟ್ರ ರಾಜಕೀಯದಲ್ಲೂ ಕೂಡ ಬಿರುಗಾಳಿ ಎಬ್ಬಿಸಿದ್ದು, ಆಡಳಿತರೂಢ ಬಿಜೆಪಿಗೆ ಮುಜುಗರ ತರಿಸಿದೆ. ಇನ್ನೂ ಆರೋಪಿ ಖರತ್ ಜೊತೆ ಸಂಪರ್ಕ ಇಟ್ಟುಕೊಂಡ ಹಿನ್ನೆಲೆ ಎನ್​ಸಿಪಿ ಶಾಸಕಿ ರೂಪಾಲಿ ಚಕಂಕರ್ ಅವರು, ಮಹಾರಾಷ್ಟ್ರ ಮಹಿಳಾ ಆಯೋಗ ಮತ್ತು ಎನ್​ಸಿಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ (ಏಜೆನ್ಸೀಸ್).