- ನೋಯ್ಡಾದ ಅಮಿತಿ ಮತ್ತು ಶಿವ್ ನಾಡರ್ ಸೇರಿದಂತೆ ಒಂಬತ್ತು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ
- ದೆಹಲಿ, ಗುರುಗ್ರಾಮ್ ನಂತರ ಈಗ ನೋಯ್ಡಾದ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ
ನೋಯ್ಡಾ : ಶುಕ್ರವಾರ (ಡಿ.19) ನೋಯ್ಡಾದ ಅಮಿತಿ ಮತ್ತು ಶಿವ್ ನಾಡರ್ ಸೇರಿದಂತೆ ಒಂಬತ್ತು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threats) ಇಮೇಲ್‌ಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದರು.ನಂತರ ಶಾಲಾ ಆವರಣದಲ್ಲಿ ಶೋಧ ನಡೆಸಿದ ನಂತರ ಬಂದಿರುವ ಬೆದರಿಕೆಗಳು ಸುಳ್ಳು ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ. ಮಾಹಿತಿ ಬಂದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಮತ್ತು ವಿಧ್ವಂಸಕ ವಿರೋಧಿ ತಂಡಗಳು ಶಾಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದವು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ರಾಜೀವ್ ನಾರಾಯಣ್ ಮಿಶ್ರಾ ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಇತರ ಜನದಟ್ಟಣೆಯ ಸ್ಥಳಗಳು ಸೇರಿದಂತೆ ಶಾಲೆಗಳ ಸಮೀಪವಿರುವ ಪ್ರದೇಶಗಳಲ್ಲಿ ಸಿಬ್ಬಂದಿ ಶೋಧ ನಡೆಸಿದ್ದಾರೆ ಎಂದು ಎಸಿಪಿ ಹೇಳಿದರು. ಪ್ರಾಥಮಿಕ ತನಿಖೆಯಲ್ಲಿ ಇಮೇಲ್‌ಗಳು ಹುಸಿ ಸಂದೇಶಗಳು ಎಂದು ಕಂಡುಬಂದಿದೆ. ಸಂಪೂರ್ಣ ಜಾಗರೂಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸಿಪಿ ಮಿಶ್ರಾ ಹೇಳಿದರು.
ದೆಹಲಿ ಸುತ್ತಮುತ್ತ ಹೆಚ್ಚಾದ ಹುಸಿ ಬೆದರಿಕೆ
ದೆಹಲಿಯಾದ್ಯಂತ ಅನೇಕ ಶಾಲೆಗಳಿಗೆ ಇಮೇಲ್‌ನಲ್ಲಿ ಬಾಂಬ್ ಬೆದರಿಕೆ ಬಂದ ಒಂದು ವಾರದ ನಂತರ ಇದು ಬಂದಿದೆ. ಡಿಸೆಂಬರ್ 10 ರಂದು ಬೆಳಿಗ್ಗೆ ಈ ಮೇಲ್‌ಗಳು ಬಂದಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಫೋಟದ ಬೆದರಿಕೆ ಹಾಕಲಾಗಿತ್ತು. ದೆಹಲಿಯ ಶಿಕ್ಷಣ ಸಂಸ್ಥೆಗಳ ಜೊತೆಗೆ, ಗುರುಗ್ರಾಮ್‌ನ ಒಂದು ಶಾಲೆಗೆ ಬಾಂಬ್ ಬೆದರಿಕೆ ಸಹ ಬಂದಿತ್ತು. ದೆಹಲಿಯಲ್ಲಿ, ಮಾಡರ್ನ್ ಸ್ಕೂಲ್, ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಸಂಸ್ಕೃತಿ ಸ್ಕೂಲ್, ಲವ್ಲಿ ಪಬ್ಲಿಕ್ ಸ್ಕೂಲ್, ಅಹ್ಲ್ಕಾನ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಇಂಡಿಯನ್ ಸ್ಕೂಲ್ ಸೇರಿದಂತೆ ಇತರವುಗಳಿಗೆ ಬೆದರಿಕೆ ಮೇಲ್‌ಗಳು ಬಂದಿದ್ದವು. ಗುರುಗ್ರಾಮ್‌ನ ಡಿಎಲ್‌ಎಫ್ ಮತ್ತು ಶ್ರೀ ರಾಮ್ ಸೀನಿಯರ್ ಸೆಕೆಂಡರಿ ಸ್ಕೂಲ್‌ಗೆ ಸಹ ಬೆದರಿಕೆ ಮೇಲ್‌ಗಳು ಬಂದಿದ್ದವು. ಬೆದರಿಕೆ ಬಂದ ನಂತರ ಶಾಲೆಯಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಶಾಲೆಗಳಲ್ಲಿ ಹುಡುಕಾಟಗಳು ಪೂರ್ಣಗೊಂಡ ನಂತರ, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ, ನಂತರ ಇದೊಂದು ಹುಸಿ ಬೆದರಿಕೆ ಎಂದು ಘೋಷಿಸಲಾಯಿತು.(ಏಜನ್ಸೀಸ್).