ಫೇಕ್​ ಆಧಾರ್​, ವೋಟರ್​ ಐಡಿ! ಭಾರತದಲ್ಲಿ 20 ವರ್ಷ ವಾಸವಿದ್ದ ವಿದೇಶಿ ಮಹಿಳೆ ನೇಪಾಳ ಗಡಿಯಲ್ಲಿ ವಶಕ್ಕೆ | Fake Aadhaar  
ದೇಶ

ಫೇಕ್​ ಆಧಾರ್​, ವೋಟರ್​ ಐಡಿ! ಭಾರತದಲ್ಲಿ 20 ವರ್ಷ ವಾಸವಿದ್ದ ವಿದೇಶಿ ಮಹಿಳೆ ನೇಪಾಳ ಗಡಿಯಲ್ಲಿ ವಶಕ್ಕೆ | Fake Aadhaar

ನವದೆಹಲಿ: ಕೋಲ್ಕತ್ತದಲ್ಲಿ ಬೌದ್ಧ ಕೇಂದ್ರವೊಂದರ ಅಧ್ಯಕ್ಷೆಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬಳ ಅಸಲಿ ಗುರುತು ಭಾರತ-ನೇಪಾಳ ಗಡಿಯಲ್ಲಿ ನಡೆದ ತಪಾಸಣೆ ವೇಳೆ ಬಯಲಾಗಿದ್ದು, ಭಾರತೀಯ ಪ್ರಜೆ ಎಂದು ಗುರುತಿಸಿಕೊಳ್ಳಲು ಮತದಾರರ ಗುರುತಿನ ಚೀಟಿ, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನೇ ನಕಲು ಮಾಡಿಕೊಂಡಿದ್ದ ಮಹಿಳೆಯು ಮೂಲತಃ ಇಂಡೋನೇಷ್ಯಾದವಳು ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ವಾಸ್ತವದಲ್ಲಿ ಇಂಡೋನೇಷ್ಯಾ ಪ್ರಜೆಯಾಗಿರುವ ಈಕೆ, ಸುಮಾರು ಎರಡು ದಶಕಗಳಿಂದ ನಕಲಿ ಗುರುತಿನೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಳು ಎಂಬ ಆರೋಪವೂ ಕೇಳಿಬಂದಿದೆ. ಬಹುಮುಖ್ಯ ಭಾರತೀಯ ಗುರುತಿನ ದಾಖಲೆಗಳನ್ನು ಬಳಸಿಕೊಂಡು 2005ರಿಂದ ಭಾರತದಲ್ಲಿ ವಾಸಿಸುತ್ತಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 10ರಂದು ರಾತ್ರಿ ಸುಮಾರು 7.30ಕ್ಕೆ ನೇಪಾಳದ ಲುಂಬಿನಿಗೆ ತೆರಳಲು ಸೋನೌಲಿ ವಲಸೆ ಕಚೇರಿಗೆ ಬಂದಿದ್ದ ಮಹಿಳೆ, ಭಾರತೀಯ ಮತದಾರರ ಗುರುತಿನ ಚೀಟಿಯನ್ನು ಅಧಿಕಾರಿಗಳಿಗೆ ತೋರಿಸಿದ್ದಳು. ಆದರೆ, ಆಕೆಯ ಇಂಡೋನೇಷ್ಯಾ ಪಾಸ್‌ಪೋರ್ಟ್‌ನಲ್ಲಿದ್ದ ಹೆಸರು ಮತ್ತು ಜನ್ಮದಿನಾಂಕಕ್ಕೂ, ಮತದಾರರ ಗುರುತಿನ ಚೀಟಿಯಲ್ಲಿದ್ದ ವಿವರಗಳಿಗೂ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆಕೆಯ ಅಸಲಿಯತ್ತು ಬೆಳಕಿಗೆ ಬಂದಿದೆ.

ಪಾಸ್‌ಪೋರ್ಟ್‌ನಲ್ಲಿ ರೋಹಾನಾ ಎಂಬ ಹೆಸರು ದಾಖಲಾಗಿದ್ದು, ಭಾರತೀಯ ದಾಖಲೆಗಳಲ್ಲಿ ಬೇರೆ ಹೆಸರು ಹಾಗೂ ಜನ್ಮದಿನಾಂಕ ನಮೂದಿಸಲಾಗಿದೆ ಎಂದು ವರದಿಯಾಗಿದೆ. ಆಕೆಯಿಂದ ಭಾರತೀಯ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ, ಕೋಲ್ಕತದ ಟ್ಯಾಂಗ್ರಾ ಪ್ರದೇಶದಲ್ಲಿ ವಿಳಾಸ ಹೊಂದಿದ್ದ ಆಕೆ, ಎನ್‌ಜಿಒವೊಂದರ ಮೂಲಕ ಬೌದ್ಧ ಕೇಂದ್ರವನ್ನು ನಡೆಸುತ್ತಿದ್ದು, ಅದರ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಚೀನಾಕ್ಕೆ ತೆರಳುವ ಬೌದ್ಧ ಸನ್ಯಾಸಿಗಳಿಗೆ ತಾಂತ್ರಿಕ ನೆರವು ಒದಗಿಸುವ ಸಂಸ್ಥೆಯ ಅಧ್ಯಕ್ಷೆ ಎಂದು ಆಕೆ ಪರಿಚಯಿಸಿಕೊಂಡಿದ್ದಳು ಎನ್ನಲಾಗಿದೆ.

ಮಹಿಳೆ ಭಾರತೀಯ ದಾಖಲೆಗಳನ್ನು ಹೇಗೆ ಪಡೆದುಕೊಂಡಳು? ಇದಕ್ಕೆ ಯಾರಾದರೂ ನೆರವು ನೀಡಿದ್ದಾರೆಯೇ ಮತ್ತು ಈ ಪ್ರಕರಣದಲ್ಲಿ ಇತರರ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೆಲವು ವರದಿಗಳಲ್ಲಿ ಗೂಢಚರ್ಯೆಯ ಸಾಧ್ಯತೆಯ ಬಗ್ಗೆಯೂ ಉಲ್ಲೇಖವಾಗಿದ್ದರೂ, ಈವರೆಗೆ ಅದಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯವನ್ನು ಅಧಿಕಾರಿಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಈ ಆರೋಪಗಳು ಸಹ ಇನ್ನೂ ಸಾಬೀತಾಗಿಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).