Factors 
ದೇಶ

ಒಂದು ಕುಲವೇ ನಾಶವಾಗಿ ಹೋಗಲು ಕಾರಣವಾದ ಅಂಶಗಳು!

1.ಮನೆಯ ಮಕ್ಕಳು ಅಧರ್ವಿುಗಳಾಗಿ, ಅನ್ಯಾಯ- ಅತ್ಯಾಚಾರದ ಮಾರ್ಗದಲ್ಲಿ ಸಾಗುತ್ತಿದ್ದರೂ, ಅದೆಲ್ಲವನ್ನು ನೋಡಿಯೂ ನೋಡದವರಂತೆ, ಕೇಳಿಯೂ ಕೇಳದವರಂತೆ ಇದ್ದು ವ್ಯತಿರಿಕ್ತವಾಗಿ, ಹೆತ್ತವರು ಅವರಿಗೆ ಪ್ರೋತ್ಸಾಹ ಪ್ರಚೋದನೆಗಳನ್ನೇ ಕೊಟ್ಟರೆ, ಆ ಮನೆ ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ. ನೀನು ನಿನ್ನ ಮಗ ದುರ್ಯೂೕಧನ ಅಹಂಕಾರ-ದರ್ಪದಿಂದ, ಅಧಿಕಾರದ ದುರಾಸೆಯಿಂದ, ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದರೂ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದರೂ, ಕುರುಡು ಮೋಹಕ್ಕೆ ಬಲಿಯಾದ ನೀನು ಅವನಿಗೆ ಬುದ್ಧಿವಾದ ಹೇಳಲೇ ಇಲ್ಲ. ಅವನನ್ನು ಸರಿದಾರಿಗೆ ತರಲೇ ಇಲ್ಲ. ಈ ಕಾರಣದಿಂದಲೇ ನಿಮ್ಮ ಕುಲ ಇಂದು ನಾಶವಾಗಿದೆ.
2. ಯಾವ ಮನೆಯಲ್ಲಿ ಸುಮಂಗಲಿಯರು ಕಣ್ಣೀರಿಡುತ್ತಾರೋ ಆ ಮನೆ ಎಂದೂ ಉದ್ಧಾರವಾಗದು ಎಂಬುದು ಶಾಸ್ತ್ರ ಲಿಖಿತ ಮಾತು. ಪಾಂಡವರ ವಿರುದ್ಧ ಸೇಡು ಮತ್ತು ದ್ವೇಷದ ಜ್ವಾಲೆಯಿಂದ ಉರಿಯುತ್ತಿದ್ದ ನಿನ್ನ ಮಗ ದ್ಯೂತದಲ್ಲಿ ದ್ರೌಪದಿಯನ್ನು ಗೆದ್ದು ಕೊಂಡ ಬಳಿಕ, ತುಂಬಿದ ಸಭೆಯಲ್ಲಿ ವಸ್ತ್ರಾಪಹರಣಕ್ಕೆ ಆದೇಶ ನೀಡುತ್ತಾನೆ. ಅಂತೆಯೇ ದುಶ್ಶಾಸನನೂ ಅವಳ ಮಾನಾಪಹರಣಕ್ಕೆ ಉದ್ಯುಕ್ತನಾಗುತ್ತಾನೆ. ಇದನ್ನು ತಿಳಿದ ನೀನೂ ಮಾತ್ರವಲ್ಲದೆ ಹಿರಿಯರೆಲ್ಲರೂ ಮೌನವಾಗಿದ್ದಿರಿ. ನೀವ್ಯಾರೂ ಈ ಅಸಭ್ಯ, ಅಮಾನವೀಯ ವರ್ತನೆಯನ್ನು ತಡೆಯಲಿಲ್ಲ. ಕುಲವಧು, ದ್ರೌಪದಿಯ ಕಣ್ಣುಗಳಿಂದ ಸುರಿದ ಕಣ್ಣೀರು, ಬರೇ ನೀರಾಗಿರಲಿಲ್ಲ. ನಿಮ್ಮ ಕುಲವನ್ನೇ ನಾಶಪಡಿಸಲು ಮುಂದಾದ ಜ್ವಾಲಾರಸವಾಗಿತ್ತು.
3. ಗುರು ಹಿರಿಯರ ಅನುಭವದ ಮಾತುಗಳನ್ನು ಕೇಳದಿದ್ದರೂ, ನಾವು ಜೀವನದಲ್ಲಿ ನಾಶದತ್ತ ಸಾಗಿದಂತೆ, ನೀವ್ಯಾರೂ ಭೀಷ್ಮ ಪಿತಾಮಹ, ವಿದುರ, ದ್ರೋಣಾಚಾರ್ಯರಂತಹ ಹಿರಿಯರ ಮಾತುಗಳನ್ನು ಕೇಳಲೇ ಇಲ್ಲ. ಅವೆಲ್ಲವನ್ನೂ ತಿರಸ್ಕರಿಸಿದಿರಿ. ಧಿಕ್ಕರಿಸಿದಿರಿ, ಪರಿಣಾಮ ಸರ್ವನಾಶ.
4. ನಮ್ಮ ಜೀವ-ಜೀವನಕ್ಕೆ ಕಾರಣೀಭೂತನಾದ ಭಗವಂತನನ್ನೇ ಮರೆತರೂ, ನಾಶ ಕಟ್ಟಿಟ್ಟ ಬುತ್ತಿ, ಧೃತರಾಷ್ಟ್ರನೇ ನಿಮಗೆ ಎಲ್ಲಾ ಬಲವೂ ಇತ್ತು. ಆದರೆ ದೈವ ಬಲವೊಂದು ಇರಲಿಲ್ಲ; ಪಾಂಡವರಿಗೆ ಹೆಚ್ಚೇನು ಬಲವಿಲ್ಲದಿದ್ದರೂ, ದೈವ ಬಲ ಇತ್ತು. ದುರ್ಯೂೕಧನನಿಗೆ ಶ್ರೀಕೃಷ್ಣನು ಪರಮಾತ್ಮನೆಂದು ತಿಳಿದಿದ್ದರೂ, ಅದನ್ನು ಆತ ಒಪ್ಪಲಿಲ್ಲ. ಅವನನ್ನು ಗೌರವಿಸಲಿಲ್ಲ. ಬದಲಾಗಿ ಸಂಧಾನಕ್ಕೆಂದು ತನ್ನ ಆಸ್ಥಾನವನ್ನು ಪ್ರವೇಶಿಸುತ್ತಿದ್ದಂತೆ, ಎಲ್ಲರೂ ಎದ್ದು ನಿಂತು ತಲೆ ಬಾಗಿ ನಮಸ್ಕರಿಸಿದರೂ, ದುರಹಂಕಾರಿ ದುರ್ಯೂೕಧನನು ಮಾತ್ರ ತಾನು ಕೂತಿದ್ದ ಸಿಂಹಾಸನದಿಂದ ಎದ್ದೇಳಲಿಲ್ಲ. ಭಗವಂತನ ಅನುಗ್ರಹವಿಲ್ಲದವರು ಜಯಶೀಲರಾಗುವುದಾದರೂ ಹೇಗೆ ನೀನೇ ಹೇಳು? ದೇವರು ಕೈ ಬಿಟ್ಟವರನ್ನು, ಯಾರು ಕೈ ಹಿಡಿದರೂ ಮೇಲೆತ್ತಲಾಗದು. ಅಂತೆಯೇ ದೇವರು ಕೈ ಹಿಡಿದವರನ್ನು ಯಾರೂ ಕೆಳಕ್ಕೆ ತಳ್ಳಲಾಗದು. ಈ ಎಲ್ಲಾ ಕಾರಣಗಳಿಂದ ನಿಮ್ಮ ಕುಲ ನಾಶವಾಯಿತು.
ಹೌದು. ಇದು ಮಹಾಭಾರತದ ಕತೆ ಯಾದರೂ, ನಮಗೆಲ್ಲರಿಗೂ ಅನ್ವಯವಾಗುವ ನೀತಿ ಸಂದೇಶವನ್ನು ಹೊಂದಿದೆ. ಮನೆ ಮಕ್ಕಳು ತಪ್ಪು ಮಾಡಿದಾಗ, ತಪ್ಪು ದಾರಿಯಲ್ಲಿ ನಡೆದಾಗ, ಅವರನ್ನು ಆಗಿಂದಾಗಲೇ ತಿದ್ದಿ ಸರಿದಾರಿಯಲ್ಲಿ ಮುನ್ನಡೆಸಬೇಕಾದುದು ಹೆತ್ತವರ ಆದ್ಯ ಕರ್ತವ್ಯ. ಮಕ್ಕಳ ಮೇಲಿನ ಕುರುಡು ಮೋಹಕ್ಕೆ ಬಲಿಯಾಗಿ, ಅವರನ್ನು ಹಾಗೆಯೇ ಬೆಳೆಯಬಿಟ್ಟರೆ, ಅವರು ಹಾಳಾಗಿ ಹೋಗುವುದು ಖಚಿತ. ಅದನ್ನು ಕಣ್ಣಾರೆ ನೋಡುವ ದುಸ್ಥಿತಿ ನಮ್ಮದಾದೀತು. ಆದುದರಿಂದ ಮಕ್ಕಳ ಮೇಲೆ ಮೋಹ ಇರಲಿ; ಕುರುಡು ಮೋಹ ಬೇಡ. ಅಂತೆಯೇ ಯಾರಿಗಾದರೂ ಕಣ್ಣೀರು ಬರಿಸುವುದು ಮೃಗತ್ವ-ಕಣ್ಣೀರು ಒರೆಸುವುದು ಮನುಷ್ಯತ್ವ. ಕಣ್ಣೀರೇ ಬಾರದಂತೆ ನೋಡಿಕೊಳ್ಳುವುದು ದೈವತ್ವ. ಮನೆಯೊಳಗೆ ಸ್ತ್ರೀಯರೆಂದರೆ, ಗೃಹಲಕ್ಷ್ಮಿಯರು.
ಮನೆಯ ನಂದಾದೀಪಗಳು. ಅವರು ತ್ಯಾಗದ, ತಾಳ್ಮೆಯ ಸಂಕೇತವೂ ಹೌದು. ಎಲ್ಲರನ್ನೂ ಎಲ್ಲವನ್ನೂ ಸಹಿಸಿಕೊಂಡು ದುಡಿಯುವ ಜೀವಿಗಳು. ಅವರೇನಾದರೂ ಕಣ್ಣೀರು ಸುರಿಸುವಂತಾದರೆ, ಅಂತಹ ಮನೆ ಉದ್ಧಾರವಾಗಲು ಸಾಧ್ಯವೇ ಇಲ್ಲ. ಈ ಸತ್ಯವನ್ನರಿತೇ ಶಾಸ್ತ್ರಗಳು ಹೇಳುತ್ತವೆ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾಃ’ ಆದುದರಿಂದ ಸ್ತ್ರೀಯರಿಗೆ ಕೊಡಬೇಕಾದ ಗೌರವ ಪ್ರಶ್ನಾತೀತ. ಇನ್ನು ಜೀವನದಲ್ಲಿ ಏನು ಮಾಡಬೇಕೆ ನ್ನುವುದು ಎಷ್ಟು ಮುಖ್ಯವೋ; ಏನು ಮಾಡಬಾರದೆಂಬ ತಿಳುವಳಿಕೆಯೂ ಅಷ್ಟೇ ಮುಖ್ಯ. ಇದನ್ನು ತಿಳಿ ಹೇಳುವವರು ಹಿತೈಷಿಗಳಾದ ನಮ್ಮ ಗುರು ಹಿರಿಯರು. ಅವರ ಮಾತು ಗಳನ್ನು ಉಪೇಕ್ಷಿಸಬಾರದು. ಅಂತೆಯೇ ಯಾರ ಕೃಪಾಕಟಾಕ್ಷದಿಂದ ನಮ್ಮ ಜೀವ-ಜೀವನ ಸಾಗುತ್ತಿದೆಯೋ, ಅವನನ್ನು ನೆನೆಯದೆ, ಪೂಜಿಸದೆ ಕಡೆಗಣಿಸಿದ್ದೇ ಆದರೆ, ನಮ್ಮಂತ್ಯ ಕಾಲವು ಸಮೀಪಿಸಿದಂತೆ. ಆದುದರಿಂದ ಸದಾ ಭಗವಂತನ ಸ್ಮರಣೆ ಇರಲಿ. ನಾವು ಕೇಳದೆಯೇ ಆತ ನಮಗೆ ಏನೆಲ್ಲ ಕೊಟ್ಟ! ಎಷ್ಟೆಲ್ಲ ಕೊಟ್ಟ! ಆ ದೈವ ಋಣಕ್ಕೆ ನಾವು ಚಿರ ಋಣಿಯಾಗಿರಬೇಕಲ್ಲವೇ!?