Tamil Nadu Elections | ಸಮೀಕ್ಷೆಗಳ ಬಗ್ಗೆ ಸ್ಟಾಲಿನ್ ಕೂಲ್..ಗೆಲುವಿನ ವಿಶ್ವಾಸದಲ್ಲಿ ಟಿವಿಕೆ ಮತ್ತು ಎಐಎಡಿಎಂಕೆ!
Tamil Nadu Elections: ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ವಿವಿಧ ಎಕ್ಸಿಟ್ ಪೋಲ್‌ಗಳು ಪ್ರಕಟವಾಗಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಈ ಸಮೀಕ್ಷೆಗಳ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಚೆನ್ನೈನಲ್ಲಿ ನಡೆದ ಮೇ ದಿನದ ಸಭೆಯಲ್ಲಿ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಎಕ್ಸಿಟ್ ಪೋಲ್‌ಗಳ ಅಂಕಿಅಂಶಗಳನ್ನು ಅವಲಂಬಿಸದೆ, ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮಕ್ಕೆ ಮೇ 4ರಂದು ಖಂಡಿತವಾಗಿಯೂ ಉತ್ತಮ ಪ್ರತಿಫಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸ್ಟಾಲಿನ್, ಯಾವುದೇ ಸಮೀಕ್ಷೆಗಿಂತಲೂ ತಮಗೆ ಪಕ್ಷದ ನಾಡಿಮಿಡಿತದ ಅರಿವಿದೆ ಮತ್ತು ಮುಂಬರುವ ದಿನಗಳಲ್ಲಿ ಶುಭ ಸುದ್ದಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಎಕ್ಸಿಟ್ ಪೋಲ್‌ಗಳು ತಮಿಳುನಾಡಿನಲ್ಲಿ ಭಾರಿ ಗೊಂದಲ ಸೃಷ್ಟಿಸಿದ್ದು, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು 98 ರಿಂದ 120 ಸ್ಥಾನಗಳನ್ನು ಗೆದ್ದು ಚೊಚ್ಚಲ ಪ್ರಯತ್ನದಲ್ಲೇ ಅಧಿಕಾರ ಹಿಡಿಯಲಿದೆ ಎಂದು ಅಚ್ಚರಿಯ ಭವಿಷ್ಯ ನುಡಿದಿದೆ. ಆದರೆ, ಪೀಪಲ್ಸ್ ಪಲ್ಸ್ ಮತ್ತು ಚಾಣಕ್ಯ ಸಮೀಕ್ಷೆಗಳು ಆಡಳಿತಾರೂಢ ಡಿಎಂಕೆ ಪಕ್ಷವು 125ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಿವೆ. ಇತ್ತ ಜೆವಿಸಿ–ಟೈಮ್ಸ್ ನೌ ಮಾತ್ರ ಎಐಎಡಿಎಂಕೆ ಮರಳಿ ಅಧಿಕಾರ ಹಿಡಿಯಲಿದೆ ಎಂಬ ಮುನ್ಸೂಚನೆ ನೀಡುವ ಮೂಲಕ ಸಮೀಕ್ಷೆಗಳ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗಿದೆ.
ವಿಭಿನ್ನವಾಗಿ ಬಂದಿರುವ ಈ ಎಕ್ಸಿಟ್ ಪೋಲ್‌ಗಳನ್ನು ಆಯಾ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ತಿರಸ್ಕರಿಸಿದ್ದು, ಎಐಎಡಿಎಂಕೆ ಪಕ್ಷವು ತಮ್ಮನ್ನು ಯಾವಾಗಲೂ ಕಡಿಮೆ ಅಂದಾಜು ಮಾಡಲಾಗುತ್ತಿದ್ದು, ತಾವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿದೆ. ಡಿಎಂಕೆ ಮತ್ತು ಟಿವಿಕೆ ಪಕ್ಷಗಳು ಕೂಡ ಸಮೀಕ್ಷೆಗಳಿಗಿಂತ ತಳಮಟ್ಟದ ವಾಸ್ತವವೇ ಬೇರೆಯಿದೆ ಎಂದು ಪ್ರತಿಪಾದಿಸಿದ್ದು, ಒಟ್ಟಾರೆಯಾಗಿ, ಮೇ 4ರ ಫಲಿತಾಂಶದ ದಿನದಂದು ಮಾತ್ರವೇ ತಮಿಳುನಾಡಿನ ಈ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ(ಏಜೆನ್ಸೀಸ್).