ಮೆಟಾ ಸಂಸ್ಥೆಯ ಸೇವೆಗಳಲ್ಲಿ ವ್ಯತ್ಯಯ
- ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಡೌನ್
- ಜಾಗತಿಕವಾಗಿ ತೊಂದರೆ ಅನುಭವಿಸಿದ ಬಳಕೆದಾರರು
ನವದೆಹಲಿ: ಮೆಟಾ ಸಂಸ್ಥೆಯ ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಜಾಗತಿಕವಾಗಿ ಬಳಕೆದಾರರು ಪರದಾಡಿದ್ದಾರೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಓಪನ್ ಮಾಡುವಲ್ಲಿ ಅಡಚಣೆ ಉಂಟಾಗಿದ್ದು, ಇದು ನೆಟ್ವರ್ಕ್ ಅಥವಾ ಟೆಕ್ನಿಕಲ್ ಸಮಸ್ಯೆಯೇ ಎಂಬ ಗೊಂದಲ ಕೆಲ ಸಮಯ ಬಳಕೆದಾರರಲ್ಲಿ ಕಾಡಿತು. ಸಂಜೆಯಿಂದ ಸರ್ವರ್‌ಗಳು ಇದ್ದಕ್ಕಿದ್ದಂತೆ ಡೌನ್ ಆಗಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಲಕ್ಷಾಂತರ ಬಳಕೆದಾರರು ತೊಂದರೆ ಅನುಭವಿಸಿದರು.
ಭಾರತ ಸೇರಿ ಹಲವಾರು ದೇಶಗಳ ಬಳಕೆದಾರರಿಗೆ ಈ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸಮಸ್ಯೆ ಮಧ್ಯಾಹ್ನದಿಂದಲೂ ಇದೆ ಎನ್ನಲಾಗಿದೆ. ಆ್ಯಪ್ಗಳನ್ನು ತೆರೆಯುವಲ್ಲಿ ಅಥವಾ ಬಳಸುವಲ್ಲಿ ಬಳಕೆದಾರರು ಸಾಕಷ್ಟು ಸಮಯ ಕಾಯುವಂತಾಯಿತು. ಇದು ಪೋಸ್ಟ್ ಮತ್ತು ವ್ಯೂವ್ ಸಮಸ್ಯೆಯನ್ನು ಸೃಷ್ಟಿಸಿತು. ಈ ಕುರಿತಂತೆ ಮೆಟಾಗೆ ಅನೇಕ ಕಂಪನಿಗಳು ಇಮೇಲ್ ಮಾಡಿವೆ ಎಂದು ವರದಿಯಾಗಿದೆ,(ಏಜೆನ್ಸೀಸ್).