Congress Merger: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ (NCP-SP) ಪಕ್ಷಗಳು ಮತ್ತೆ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲಿವೆಯೇ..? ಟಿಎಂಸಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಈ ಹಿಂದೆ ಕಾಂಗ್ರೆಸ್‌ನಿಂದಲೇ ಹೊರಬಂದು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದ್ದ ನಾಯಕರು ಮತ್ತೆ ಮಾತೃಪಕ್ಷಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಈ ವಿಲೀನದ ಮಾತುಕತೆಗಳನ್ನು ಆಧಾರರಹಿತ ವದಂತಿ ಎಂದು ತಳ್ಳಿಹಾಕಿದ್ದಾರೆ. ಆದರೆ, ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮಾತ್ರ ಇದೊಂದು ದೊಡ್ಡ ರಾಜಕೀಯ ಹೆಜ್ಜೆಗೆ ಮುನ್ನುಡಿಯಾಗುವ ಸುಳಿವು ನೀಡಿದ್ದಾರೆ. ಸಮಾನ ಮನಸ್ಕ ಪಕ್ಷಗಳು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿವೆ. ಶರದ್ ಪವಾರ್ ಮತ್ತು ಮಮತಾ ಬ್ಯಾನರ್ಜಿ ಕಾಂಗ್ರೆಸ್ ಜೊತೆ ವಿಲೀನಗೊಳ್ಳುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರೆ ಎಂದು ಪಟೋಲೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದು ಕೇವಲ ಚುನಾವಣಾ ಮೈತ್ರಿಯಲ್ಲ, ಬದಲಿಗೆ ಸಂಪೂರ್ಣವಾಗಿ ಒಂದಾಗುವ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನಾ ಪಟೋಲೆ ಹೇಳಿದ್ದೇನು..?
ಎನ್‌ಸಿಪಿ ವಿಲೀನದ ಬಗ್ಗೆ ಶರದ್ ಪವಾರ್ ಅವರು ಈ ಹಿಂದೆಯೇ ಪ್ರಸ್ತಾವನೆ ಇಟ್ಟಿದ್ದರು, ಆದರೆ ಕೆಲವು ಕಾರಣಗಳಿಂದ ಅದು ತಡವಾಗಿತ್ತು ಎಂದು ಪಟೋಲೆ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತು ವಿರೋಧ ಪಕ್ಷಗಳ ಮತಗಳು ವಿಭಜನೆಯಾಗುವುದನ್ನು ತಡೆಯಲು ಜಾತ್ಯತೀತ ಸಿದ್ಧಾಂತ ಹೊಂದಿರುವ ಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಜಯ್ ರಾವತ್ ಮತ್ತು ಅಶೋಕ್ ಗೆಹ್ಲೋಟ್ ಬೆಂಬಲ
ಕಾಂಗ್ರೆಸ್‌ನಿಂದ ಇಬ್ಭಾಗವಾಗಿರುವ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳನ್ನು ಮತ್ತೆ ಒಟ್ಟುಗೂಡಿಸುವ ಜವಾಬ್ದಾರಿಯನ್ನು ಶರದ್ ಪವಾರ್ ಅವರೇ ವಹಿಸಿಕೊಳ್ಳಬೇಕು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ, ಇದೊಂದು ಉತ್ತಮ ಪ್ರಸ್ತಾವನೆ, ಮುಂದೆ ಏನಾಗುತ್ತದೋ ಕಾದು ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ಇತ್ತ ಹಿರಿಯ ಕೈ ನಾಯಕ ಅಶೋಕ್ ಗೆಹ್ಲೋಟ್ ಕೂಡ, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ವಿಲೀನವಾಗಿ ರಾಹುಲ್ ಗಾಂಧಿ ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರೇ ಇಂಡಿಯಾ ಮೈತ್ರಿಕೂಟದ ಸುಪ್ರೀಂ ನಾಯಕ ಎಂಬ ಸಂದೇಶ ದೇಶಕ್ಕೆ ರವಾನೆಯಾದರೆ, ಮತದಾನದ ಶೈಲಿಯೇ ಬದಲಾಗಲಿದೆ ಎಂದು ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಳೆಯ ಇತಿಹಾಸ ಮತ್ತು ಇಂದಿನ ಸವಾಲು
ಇತಿಹಾಸವನ್ನು ಕೆದಕಿದರೆ ಮಮತಾ ಬ್ಯಾನರ್ಜಿ 1998ರಲ್ಲಿ ಮತ್ತು ಶರದ್ ಪವಾರ್ 1999ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಪಕ್ಷಗಳನ್ನು ಸ್ಥಾಪಿಸಿದ್ದರು. ವಿಶೇಷವೆಂದರೆ, ಇಂದು ಇಬ್ಬರೂ ನಾಯಕರು ತಮ್ಮ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷವು ಕಳೆದ ವರ್ಷ ಅಜಿತ್ ಪವಾರ್ ಬಂಡಾಯದಿಂದಾಗಿ ಎನ್ಡಿಎ ಪಾಳಯದಲ್ಲಿದ್ದರೆ, ಇತ್ತ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೂಡ ಆಂತರಿಕ ಭಿನ್ನಮತದಿಂದ ನಲುಗುತ್ತಿದೆ.
ಕಾಂಗ್ರೆಸ್ ನಿಲುವೇನು..?
ಇತ್ತೀಚೆಗೆ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಮತ್ತು ಅಭಿಷೇಕ್ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ವಿಲೀನದ ಸುದ್ದಿಗಳಿಗೆ ರೆಕ್ಕೆಪುಕ್ಕ ಬಂದಿದೆ. ಮೂಲಗಳ ಪ್ರಕಾರ, ವಿರೋಧ ಪಕ್ಷಗಳ ಒಕ್ಕೂಟದಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ತಮ್ಮ ಬೆಂಬಲವಿದೆ ಎಂದು ಟಿಎಂಸಿ ತಿಳಿಸಿದೆ. ಆದರೆ, ವಿಲೀನದ ಕುರಿತು ಯಾವುದೇ ಪ್ರಸ್ತಾವನೆ ಇದ್ದರೂ ಅದನ್ನು ಟಿಎಂಸಿ ಕಡೆಯಿಂದಲೇ ಮೊದಲು ಅಧಿಕೃತವಾಗಿ ಇಡಬೇಕು, ಕಾಂಗ್ರೆಸ್ ಈ ಬಗ್ಗೆ ಯಾವುದೇ ಆತುರ ತೋರುತ್ತಿಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ(ಏಜೆನ್ಸೀಸ್).