AIADMK Manifesto | ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಪಣತೊಟ್ಟಿರುವ ಎಐಎಡಿಎಂಕೆ (AIADMK) ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಇಂದು ಭರವಸೆಗಳ ಮಹಾಪೂರವನ್ನೇ (AIADMK Manifesto) ಹರಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳು, ಮೀನುಗಾರರು, ನೇಕಾರರು, ಸಣ್ಣ ವ್ಯಾಪಾರಿಗಳನ್ನು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳನ್ನು ಗುರಿಯಾಗಿಸಿಕೊಂಡು ಘೋಷಿಸಿರುವ ಈ ಪ್ರಣಾಳಿಕೆ ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿವೆ.
ರಾಜ್ಯದ ಪ್ರತಿ ಕುಟುಂಬಕ್ಕೂ 10,000 ರೂ.ಗಳ ಪರಿಹಾರ ನೆರವು ನೀಡಲಾಗುವುದು ಎಂದಿರುವ ಪಳನಿಸ್ವಾಮಿ, ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವ ಮತ್ತು ಉದ್ಯೋಗಕ್ಕಾಗಿ ಕಾಯುತ್ತಿರುವ ಪದವೀಧರರಿಗೆ ಮಾಸಿಕ 2,000 ರೂ.ಗಳ ಸಹಾಯಧನ, ಪ್ರೌಢಶಾಲಾ ಹಂತದವರೆಗೆ ಅಧ್ಯಯನ ಮಾಡಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವವರಿಗೆ ತಿಂಗಳಿಗೆ 1,000 ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.
ಮೀನುಗಾರರ ಸಹಾಯಧನ 12,000 ರೂ.ಗೆ ಹೆಚ್ಚಳ
ವಾರ್ಷಿಕ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರರಿಗೆ ಹೆಚ್ಚಿನ ಬೆಂಬಲ ನೀಡುವುದಾಗಿ ಪಳನಿಸ್ವಾಮಿ ಘೋಷಿಸಿದ್ದು, ಪ್ರಸ್ತುತ 8,000 ರೂ.ಗಳಿರುವ ಪರಿಹಾರ ಮೊತ್ತವನ್ನು 12,000 ರೂ.ಗಳಿಗೆ ಹೆಚ್ಚಿಸಲಾಗುವುದು. ಪ್ರತಿ ವರ್ಷ ಥಾಯ್ ಪೊಂಗಲ್ ಸಮಯದಲ್ಲಿ ವಿತರಿಸಲಾಗುವ ಪೊಂಗಲ್ ಉಡುಗೊರೆ ಹ್ಯಾಂಪರ್ ಜೊತೆಗೆ, ಹೆಚ್ಚುವರಿಯಾಗಿ 1,000 ರೂ.ಗಳನ್ನು ಸಹ ನೀಡುವುದಾಗಿ ತಿಳಿಸಿದ್ದಾರೆ.
ಕೈಮಗ್ಗ ನೇಕಾರರಿಗೆ ಉಚಿತ ವಿದ್ಯುತ್ ಮಿತಿಯನ್ನು 300 ಯೂನಿಟ್‌ಗಳಿಂದ 450 ಯೂನಿಟ್‌ಗಳಿಗೆ, ವಿದ್ಯುತ್ ಮಗ್ಗ ನೇಕಾರರಿಗೆ ಉಚಿತ ವಿದ್ಯುತ್ ಮಿತಿಯನ್ನು 1,000 ಯೂನಿಟ್‌ಗಳಿಂದ 1,400 ಯೂನಿಟ್‌ಗಳಿಗೆ ಹೆಚ್ಚಿಸಲಾಗುವುದು ಎಂದು ಎಐಎಡಿಎಂಕೆ ನಾಯಕರು ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಪುಟ್ಪಾತ್ ಮೇಲೆ ಅಂಗಡಿಗಳನ್ನು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಪಳನಿಸ್ವಾಮಿ ಘೋಷಿಸಿದ್ದಾರೆ(ಏಜೆನ್ಸೀಸ್).