ಮದುವೆಯಾಗುವಂತೆ 21 ವರ್ಷದ ಯುವಕನ ಹಿಂದೆ ಬಿದ್ದ 51ರ ಮಹಿಳೆ... ಮುಂದೆ ನಡೆದಿದ್ದು ಘನ ಘೋರ ಕೃತ್ಯ! Extra Marital Affairs
- ಮದುವೆಯಾಗುವಂತೆ ಪೀಡಿಸುತ್ತಿದ್ದ 52 ವರ್ಷದ ಮಹಿಳೆಯನ್ನು ಹತ್ಯೆಗೈದ 21ರ ಯುವಕ
- ಕೊಲೆ ಮಾಡಿದ ದೇಹವನ್ನು ಕಲ್ಲಿಗೆ ಕಟ್ಟಿ ಕ್ವಾರಿಯ ನೀರಿನ ಹೊಂಡದಲ್ಲಿ ಎಸೆದ ಕಿರಾತಕ
- ತಮಿಳುನಾಡಿನ ತಿರುಪ್ಪುವನಂ ಬಳಿ ನಡೆದ ಆಘಾತಕಾರಿ ಘಟನೆ
Extra Marital Affairs : ಮದುವೆಯಾಗುವಂತೆ ಪೀಡಿಸುತ್ತಿದ್ದ 52 ವರ್ಷದ ಮಹಿಳೆಯನ್ನು 21 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದು, ಆಕೆಯ ದೇಹವನ್ನು ಕಲ್ಲಿಗೆ ಕಟ್ಟಿ ಕ್ವಾರಿಯ ನೀರಿನ ಹೊಂಡದಲ್ಲಿ ಎಸೆದ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪ್ಪುವನಂ ಬಳಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಸರಸ್ವತಿ ಎಂದು ಗುರುತಿಸಲಾಗಿದೆ. ಈಕೆ ಕಟ್ಟಡ ನಿರ್ಮಾಣದ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಈ ಪ್ರಕರಣದಲ್ಲಿ ಸರವಣಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 11 ರಂದು ಕೆಲಸಕ್ಕೆ ಹೋಗಿದ್ದ ಸರಸ್ವತಿ, ಮರಳಿ ಮನೆಗೆ ಬಾರಲಿಲ್ಲ. ಎಷ್ಟೇ ಹುಡುಕಾಡಿದರೂ ಪತ್ತೆಯಾಗದಿದ್ದಾಗ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸರಸ್ವತಿಯ ಫೋನ್ ಕರೆಗಳನ್ನು ಆಧರಿಸಿ ತನಿಖೆಯನ್ನು ಆರಂಭಿಸಿದರು.
ತನಿಖೆಯ ಸಮಯದಲ್ಲಿ, ಸರಸ್ವತಿ ಮತ್ತು ಕೂಡಕೋವಿಲ್ ಮೂಲದ ಸರವಣಕುಮಾರ್ ನಡುವೆ ನಿರಂತರವಾಗಿ ಫೋನ್ ಮೂಲಕ ಮಾತುಕತೆ ನಡೆದಿರುವುದು ಗೊತ್ತಾಯಿತು. ಬಳಿಕ ಆತನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೆಲಸದ ಸ್ಥಳದಲ್ಲಿ ಮಾತ್ರ ಸರಸ್ವತಿಯನ್ನು ನೋಡಿದ್ದಾಗಿ ಮತ್ತು ಅದಕ್ಕಿಂತ ಹೆಚ್ಚಿನ ವೈಯಕ್ತಿಕ ಸಂಬಂಧವಿಲ್ಲ ಎಂದು ಆರಂಭದಲ್ಲಿ ಹೇಳಿದ್ದ.
ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ಸರಸ್ವತಿ ಮತ್ತು ಸರವಣಕುಮಾರ್ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕಾಲಾನಂತರದಲ್ಲಿ ಅವರಿಬ್ಬರು ತುಂಬಾ ಹತ್ತಿರವಾಗಿದ್ದರು ಎಂಬ ಸಂಗತಿ ತಿಳಿಯಿತು. ಬಳಿಕ ಆರೋಪಿ ಸರವಣನನ್ನು ಮತ್ತೆ ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ನಡೆದಿದ್ದೆಲ್ಲವನ್ನು ಬಾಯ್ಬಿಟ್ಟಿದ್ದಾನೆ.
ಸರವಣ ಮತ್ತು ಸರಸ್ವತಿ ನಡುವೆ ವಿವಾಹೇತರ ಸಂಬಂಧವಿತ್ತು. ಹೀಗಾಗಿ, ತನ್ನನ್ನು ಮದುವೆ ಆಗುವಂತೆ ಸರಸ್ವತಿ ಪೀಡಿಸುತ್ತಿದ್ದಳು. ಆದರೆ, ಅವರಿಬ್ಬರಿ ನಡುವೆ ಬರೋಬ್ಬರಿ 30 ವರ್ಷ ವಯಸ್ಸಿನ ಅಂತರವಿದ್ದ ಕಾರಣ ಸರವಣ ಮದುವೆಗೆ ಹಿಂದೇಟು ಹಾಕುತ್ತಿದ್ದ. ಆದರೆ, ಸರಸ್ವತಿ ನಿರಂತರವಾಗಿ ಒತ್ತಡ ಹೇರಿದ್ದರಿಂದ ಆಕೆಯನ್ನು ಸರವಣ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ಅಂದಹಾಗೆ, ಘಟನೆ ನಡೆದ ದಿನ ಸರವಣಕುಮಾರ್, ಸರಸ್ವತಿಯನ್ನು ತನ್ನ ಮೋಟಾರ್ ಸೈಕಲ್‌ನಲ್ಲಿ ಉಲಕ್ಕಣಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದನು. ಅಲ್ಲಿ, ಮದುವೆಗೆ ಸಂಬಂಧಿಸಿದಂತೆ ಅವರ ನಡುವೆ ಉಂಟಾದ ವಿವಾದ ಕೊಲೆಯಲ್ಲಿ ಅಂತ್ಯವಾಯಿತು. ಬಳಿಕ ಆಕೆಯ ಮೃತದೇಹವನ್ನು ಒಂದು ಚೀಲಕ್ಕೆ ಕಟ್ಟಿ, ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ಎಸೆದಿದ್ದ. ಆತನ ವಿಚಾರಣೆ ಬಳಿಕ ಶವದ ಮಾಹಿತಿ ದೊರೆತಿದ್ದು, ಅದನ್ನು ವಶಕ್ಕೆ ಪಡೆಯಲಾಗಿದ್ದು, ಸರವಣಕುಮಾರ್ನನ್ನು ಬಂಧಿಸಲಾಗಿದೆ, (ಏಜೆನ್ಸೀಸ್).