- ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಕರಿನೆರಳು
- ಸುಮಾರು 30 ಪಾಕಿಸ್ತಾನಿ ಭಯೋತ್ಪಾದಕರು ಒಳನುಸಳಿರುವ ಮಾಹಿತಿ
- ಭಾರತೀಯ ಸೇನೆಯಿಂದ ಮುಂದುವರೆದ ಕಾರ್ಯಾಚರಣೆ
ಜಮ್ಮು- ಕಾಶ್ಮೀರ: ಇತ್ತೀಚಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಿರಂತರ ಭಯೋತ್ಪಾದಕ ಬೆದರಿಕೆಗಳನ್ನು ಎದುರಿಸುವಂತಾಗಿದ್ದು, ಗುಪ್ತಚರ ಮಾಹಿತಿಯ ಪ್ರಕಾರ ಜಮ್ಮು ಪ್ರದೇಶದಲ್ಲಿ 30 ಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಹಿನ್ನಲೆಯಲ್ಲಿ ಭಾರತೀಯ ಸೇನೆ (Indian Army) ನಿರಂತರ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಜಮ್ಮು - ಕಾಶ್ಮೀರದಲ್ಲಿ ಭಾರತೀಯ ಸೇನೆಯು ಚಳಿಗಾಲದ 40 ದಿನಗಳ ಕಠಿಣ ಪರಿಸ್ಥಿತಿಯಾದ ಚಿಲ್ಲೈ ಕಲಾನ್ ಸಮಯದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು, ಕಠಿಣ ಹವಾಮಾನ ಪರಿಸ್ಥಿತಿಯ ಲಾಭವನ್ನು ಪಾಕಿಸ್ತಾನಿ ಭಯೋತ್ಪಾದಕರು ತೆಗೆದುಕೊಳ್ಳದಂತೆ ತಡೆಯುತ್ತಿದೆ.
ಭಾರತೀಯ ಸೈನ್ಯದ ನಿರಂತರ ಕಾರ್ಯಾಚರಣೆಗಳಿಂದ ಒತ್ತಡಕ್ಕೆ ಒಳಗಾಗಿರುವ ಭಯೋತ್ಪಾದಕರು ಕಿಶ್ತ್ವಾರ್ ಮತ್ತು ದೋಡಾದಲ್ಲಿನ ಎತ್ತರದ ಮತ್ತು ಮಧ್ಯ ಪರ್ವತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ರಕ್ಷಣಾ ಮತ್ತು ಗುಪ್ತಚರ ಮೂಲಗಳು ತಿಳಿಸಿವೆ. ಅಲ್ಲಿ ನಾಗರಿಕರ ಉಪಸ್ಥಿತಿ ಕಡಿಮೆಯಿದ್ದು, ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿಯಿದೆ.
ಇದರ ನಡುವೆ ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಯಲು, ಸೇನೆ, ಬಿಎಸ್‌ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಳೆದ 10 ದಿನಗಳಿಂದ ಗಡಿ ಪ್ರದೇಶಗಳ 80 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಟ್ಟವಾದ ಮಂಜು, ತೀವ್ರ ಶೀತ ಮತ್ತು ಕಷ್ಟಕರವಾದ ಭೂಪ್ರದೇಶವನ್ನು ಬಳಸಿಕೊಂಡು ಭಯೋತ್ಪಾದಕ ಗುಂಪುಗಳು ಒಳನುಸುಳುವಿಕೆಗೆ ಪ್ರಯತ್ನಿಸಬಹುದು ಎಂದು ಗುಪ್ತಚರ ಮಾಹಿತಿಗಳು ಸೂಚಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಆಪರೇಷನ್ ಸಿಂಧೂರ್ ನಂತರ ನಷ್ಟಗಳನ್ನು ಅನುಭವಿಸಿದರೂ, ಜಮ್ಮು ಪ್ರದೇಶದ ಎದುರು ಸುಮಾರು 72 ಭಯೋತ್ಪಾದಕ ಲಾಂಚ್ ಪ್ಯಾಡ್ಗಳನ್ನು ಪಾಕಿಸ್ತಾನ ಪುನಃ ಸಕ್ರಿಯಗೊಳಿಸಿದೆ ಎಂದು ಗಡಿ ಭದ್ರತಾ ಪಡೆ ಹೇಳಿಕೊಂಡಿದೆ. ಇವುಗಳಲ್ಲಿ, 12 ಲಾಂಚ್ ಪ್ಯಾಡ್ಗಳು ಸಿಯಾಲ್‌ಕೋಟ್ ಮತ್ತು ಜಫರ್ವಾಲ್ ವಲಯಗಳಲ್ಲಿನ ಅಂತರರಾಷ್ಟ್ರೀಯ ಗಡಿಯ ಬಳಿ ಇವೆ, ಆದರೆ ಸುಮಾರು 60 ಲಾಂಚ್ ಪ್ಯಾಡ್ಗಳು ನಿಯಂತ್ರಣ ರೇಖೆ (LoC) ಯ ಉದ್ದಕ್ಕೂ ಸಕ್ರಿಯವಾಗಿವೆ ಎಂದು ವರದಿಯಾಗಿದೆ.
ಮುಂದಿನ ವಾರಗಳಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಇನ್ನೂ ಹೆಚ್ಚಾಗಬಹುದೆಂದು ಭದ್ರತಾ ಸಂಸ್ಥೆಗಳು ಎಚ್ಚರಿಸಿದ್ದು, ಎಲ್‌ಒಸಿ ಉದ್ದಕ್ಕೂ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಭಯೋತ್ಪಾದಕರು ಗಡಿಯನ್ನು ಸಮೀಪಿಸದಂತೆ ತಡೆಯಲು ಎಲ್ಲಾ ವಲಯಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ,(ಏಜನ್ಸೀಸ್).