ಪೊಲೀಸ್ ಠಾಣೆಯಲ್ಲೇ ಸ್ಫೋಟಕ ಬ್ಲಾಸ್ಟ್ 
ದೇಶ

ಪೊಲೀಸ್ ಠಾಣೆಯಲ್ಲೇ ಸ್ಫೋಟಕ ಬ್ಲಾಸ್ಟ್​: 9 ಜನರು ಮೃತ, 30 ಮಂದಿಗೆ ಗಾಯ!

ಶ್ರೀನಗರ: ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಲಾಗಿದ್ದ ಸ್ಫೋಟಕಗಳ ಬೃಹತ್ ರಾಶಿ ಸ್ಫೋಟಗೊಂಡು 9 ಜನರು ಮೃತಪಟ್ಟಿದ್ದು, 30 ಜನರು ಗಾಯಗೊಂಡ ಘಟನೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ ಇದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸ್ಫೋಟಕಗಳನ್ನು ಪರಿಶೀಲಿಸುತ್ತಿದ್ದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದಲ್ಲಿ ಶ್ರೀನಗರ ಆಡಳಿತದ ಇಬ್ಬರು ಅಧಿಕಾರಿಗಳು ಸೇರಿದಂತೆ ನಯಬ್ ತಹಶೀಲ್ದಾರ್ ಕೂಡ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಭಾರತೀಯ ಸೇನೆಯ 92 ಬೇಸ್ ಆಸ್ಪತ್ರೆ ಮತ್ತು ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆ (SKIMS) ಗೆ ಸಾಗಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವೈಟ್-ಕಾಲರ್ ಭಯೋತ್ಪಾದನಾ ಬೆಳಕಿಗೆ

ಪ್ರದೇಶದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಪೋಸ್ಟರ್‌ಗಳನ್ನು ಹರಡಿದ್ದರ ಪ್ರಕರಣವನ್ನು ನೌಗಮ್ ಪೊಲೀಸ್ ಠಾಣೆ ಭೇದಿಸಿತ್ತು. ಈ ಪೋಸ್ಟರ್‌ಗಳು ಉಗ್ರಗಾಮಿಗಳಾಗಿ ವೃತ್ತಿಪರರು ಭಾಗಿಯಾಗಿರುವ ಭಯೋತ್ಪಾದಕ ಮಾಡ್ಯೂಲ್ ಅನ್ನು ಬಹಿರಂಗಗೊಳಿಸಿದೆ. ಈ ಪ್ರಕರಣ ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲು ಮತ್ತು ಹಲವಾರು ಭಯೋತ್ಪಾದಕ ವೈದ್ಯರನ್ನು ಬಂಧಿಸಲು ಕಾರಣವಾಯಿತು.
ಪೋಸ್ಟರ್‌ಗಳ ತನಿಖೆಯಲ್ಲಿ "ಪಾಕಿಸ್ತಾನ ಮತ್ತು ಇತರ ದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿರುವ ಮೂಲಭೂತವಾದಿ ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ವೈಟ್-ಕಾಲರ್ ಭಯೋತ್ಪಾದನಾ ವ್ಯವಸ್ಥೆ" ಬೆಳಕಿಗೆ ಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ(ಏಜೆನ್ಸೀಸ್​).