ಘಟನೆಯ ಸ್ಥಳ 
ದೇಶ

ತಿರುವಂಬಾಡಿ ದೇವಸ್ಥಾನದ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ ಪ್ರಕರಣ; ಸಾವಿನ ಸಂಖ್ಯೆ 13ಕ್ಕೆ ಏರಿಕೆ; ಪ್ರಧಾನಿ ಮೋದಿ ಸಂತಾಪ | Explosion

ತಿರುವನಂತಪುರಂ: ಕೇರಳದ ತ್ರಿಶೂರ್ ಪೂರಂ-2026 ಉತ್ಸವ ಸಿದ್ದತೆ ನಡುವೆಯೂ ಮಂಗಳವಾರ(ಏ. 21) ತಿರುವಂಬಾಡಿ ದೇವಸ್ಥಾನದ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ್ದ ಭಾರಿ ಸ್ಪೋಟದಲ್ಲಿ(Explosion) ಒಟ್ಟು 13 ಮಂದಿ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮುಂಡತ್ತಿಕೋಡ್‌ನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಫೋಟದ ಸಮಯದಲ್ಲಿ ಸುಮಾರು 70 ಕಾರ್ಮಿಕರು ಘಟಕದೊಳಗೆ ಕೆಲಸ ಮಾಡ್ತಿದ್ದರು. ಪಟಾಕಿಗಳಿಗೆ ಬಳಸುವ ಸುಮಾರು 2,000 ಕೆಜಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಲಾಗಿತ್ತು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಅಧಿಕಾರಿಗಳು, ಪ್ರಸ್ತುತವಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕನಿಷ್ಠ 10 ಜನರನ್ನು ಮುಲಂಕುನ್ನತುಕಾವುವಿನ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಸ್ಥಳದಲ್ಲಿ ಮತ್ತಷ್ಟು ಸ್ಫೋಟಗಳ ಸಾಧ್ಯತೆ ಇರುವುದರಿಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಇನ್ನೂ ಘಟನೆ ಕುರಿತು ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರಿಗೆ ಸಮಗ್ರ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಹತ್ತಿರದ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪಿಎಂಓ ಕಚೇರಿ, ಮೃತರ ಕುಟುಂಬಸ್ಥರಿಗೆ PMNRFನಿಂದ 2 ಲಕ್ಷ ರೂ. ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ಪ್ರಧಾನ ಮಂತ್ರಿ ಘೋಷಿಸಿದ್ದಾರೆ (ಏಜೆನ್ಸೀಸ್).