ಚೆನ್ನೈ: ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಜಾರಿಗೆ ತಂದಿದ್ದ ಪ್ರಾಥಮಿಕ ಶಾಲಾ ಮಕ್ಕಳ ಉಪಹಾರ ಯೋಜನೆಯನ್ನು ಹಾಲಿ ಸಿಎಂ ವಿಜಯ್ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಸ್ತರಣೆ ಮಾಡಿದ್ದು, ಸೋಮವಾರ(ಸೆ. 22) ಪೆರುಂತಲೈವರ್ ಕಾಮರಾಜರ್ ಉಪಾಹಾರ ಯೋಜನೆ ಎಂದು ಮರುನಾಮಕರಣ ಮಾಡಿ ಚಾಲನೆ ನೀಡಿದ್ದಾರೆ.
2022ರಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರವು ಮುಖ್ಯಮಂತ್ರಿಗಳ ಉಪಾಹಾರ ಯೋಜನೆ ಹೆಸರಿನಲ್ಲಿ ಆರಂಭದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ಯೋಜನೆ ಆರಂಭಿಸಿತ್ತು. ಬಳಿಕ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿತ್ತು. ಇಂದು ಹಾಲಿ ಸರ್ಕಾರ 15,454 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 15.30 ಲಕ್ಷ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಡಿಗೆ ತರುತ್ತಿದೆ.
ತಿರುವನ್ಮಿಯೂರಿನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಲ್ಲಿ ಸಿಎಂ ವಿಜಯ್ ವಿದ್ಯಾರ್ಥಿಗಳಿಗೆ ಉಪಾಹಾರ ಬಡಿಸಿ ಅವರೊಂದಿಗೆ ಉಪಹಾರ ಸೇವಿಸಿದ್ದಾರೆ. ಬಳಿಕ ತರಗತಿ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಈ ಯೋಜನೆಯ ವಿಸ್ತರಣೆಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 217.63 ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆ ಮಾಡಲಾಗಿದ್ದು, ಕಾರ್ಯಕ್ರಮದ ಒಟ್ಟು ಬಜೆಟ್ 724 ಕೋಟಿ ರೂ.ಗಳಿಗೆ ತಲುಪಿದೆ. ವಿದ್ಯಾರ್ಥಿಗಳ ಪೋಷಣೆಯನ್ನು ಸುಧಾರಿಸುವ ಮತ್ತು ಅವರು ತಮ್ಮ ಶಾಲಾ ದಿನವನ್ನು ಆರೋಗ್ಯಕರ ಊಟದೊಂದಿಗೆ ಪ್ರಾರಂಭಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.
ಇನ್ನೂ ಮುಖ್ಯಮಂತ್ರಿ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಮರುನಾಮಕರಣ ಮಾಡಿ ಚಾಲನೆ ನೀಡುವುದಕ್ಕೆ ಸಂಬಂಧಿಸಿದಂತೆ ವಿಪಕ್ಷ ಡಿಎಂಕೆ ಕಿಡಿಕಾರಿದ್ದು, ನಾವು ಪ್ರಾರಂಭಿಸಿದ ಯೋಜನೆಗಳ ಹೆಸರನ್ನು ಬದಲಾಯಿಸುವುದೊಂದೇ ಅವರ ಕೆಲಸ, ಅವರು ಸ್ವಂತವಾಗಿ ಏನನ್ನೂ ಮಾಡುವುದಿಲ್ಲ ಎಂದು ಕಿಡಿಕಾರಿದೆ.
ಡಿಎಂಕೆಯ ಟೀಕೆ ಕುರಿತು ಎನ್ಡಿಟಿವಿ ಜೊತೆ ಮಾತನಾಡಿರುವ ಟಿವಿಕೆ ರಾಷ್ಟ್ರೀಯ ವಕ್ತಾರ ಅಮೆರಿಕಾಯ್ ನಾರಾಯಣನ್, ಇದನ್ನು ಯಾರು ಪ್ರಾರಂಭಿಸಿದರು ಎಂಬುದು ನಮಗೆ ಮುಖ್ಯವಲ್ಲ, ಆದರೆ ಜನರು ಇದರ ಪ್ರಯೋಜನ ಪಡೆಯಬೇಕೆಂದು ನಾವು ಬಯಸುತ್ತೇವೆ. ಮತ್ತು ಆದ್ದರಿಂದ ನಾವು ಇದನ್ನು ಹೆಚ್ಚಿಸುತ್ತಿದ್ದೇವೆ. ಜಯಲಲಿತಾ ಪ್ರಾರಂಭಿಸಿದ ಅಮ್ಮ ಕ್ಯಾಂಟೀನ್‌ಗಳನ್ನು ಸಹ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).