ಅರವಿಂದ್ ಕೇಜ್ರಿವಾಲ್ 
ದೇಶ

ಅಬಕಾರಿ ನೀತಿ ಪ್ರಕರಣ; ವಿಚಾರಣೆಗೆ ಹಾಜರಾಗದ ಮಾಜಿ ಸಿಎಂ ಕೇಜ್ರಿವಾಲ್; ಅಮಿಕಸ್ ಕ್ಯೂರಿ ನೇಮಿಸುವುದಾಗಿ ಹೇಳಿದ ದೆಹಲಿ ಹೈಕೋರ್ಟ್ | Amicus Curiae

ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಹಾಗೂ ದುರ್ಗೇಶ್ ಪಾಠಕ್ ಹಾಜರಾಗಲು ನಿರಾಕರಿಸಿದ ಬಳಿಕ, ಇಂದು(ಮೇ 05) ದೆಹಲಿ ಹೈಕೋರ್ಟ್ ಹಿರಿಯ ವಕೀಲರನ್ನು ಪ್ರತಿವಾದಿಗಳ ಪರವಾಗಿ ಅಮಿಕಸ್ ಕ್ಯೂರಿಯಾಗಿ ನೇಮಿಸುವುದಾಗಿ ಹೇಳಿದೆ.
ಹಿತಾಸಕ್ತಿ ಸಂಘರ್ಷ ಮತ್ತು ಪಕ್ಷಪಾತದ ಆರೋಪವನ್ನು ಮಾಡಿ ಸಲ್ಲಿಸಿದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ ನಂತರ, ಅರವಿಂದ್ ಕೇಜ್ರಿವಾಲ್ ಮತ್ತು ಶಾಸಕರು ನ್ಯಾ.ಸ್ವರ್ಣಕಾಂತ ಶರ್ಮಾ ಅವರ ಮುಂದೆ ವಿಚಾರಣೆಗೆ ಹಾಜರಾಗುವುದನ್ನು ಬಹಿಷ್ಕರಿಸಿದ್ದಾರೆ.
ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸ್ವರ್ಣಕಾಂತ ಶರ್ಮಾ, ಆರೋಪಿಗಳನ್ನು ಪ್ರತಿನಿಧಿಸಲು ಯಾರನ್ನಾದರೂ ನೇಮಿಸಿದ ನಂತರ ಪ್ರಕರಣವನ್ನು ಮುಂದುವರಿಸುವುದು ಸೂಕ್ತ ಎಂದು ವಿಚಾರಣೆಯನ್ನು ಮೇ 08ಕ್ಕೆ ಮುಂದೂಡಿದರು. 
ಈ ವೇಳೆ ಸಿಬಿಐ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಚಾರಣೆಯಲ್ಲಿ ಕೇಜ್ರಿವಾಲ್ ಮತ್ತು ಪ್ರಾತಿನಿಧ್ಯವಿಲ್ಲದ ಇತರರಿಗೆ ನ್ಯಾಯಾಲಯ ನೇಮಕಾತಿ ಮಾಡುತ್ತಿದೆಯೇ ಎಂದು ಕೇಳಿದಾಗ, ನಾನು ಒಂದು ಅಮಿಕಸ್ ಕ್ಯೂರಿ ಅನ್ನು ನೇಮಿಸುತ್ತೇನೆ. ಮೂವರು ಹಿರಿಯ ವಕೀಲರನ್ನು ನೇಮಿಸಿ ಆದೇಶ ಹೊರಡಿಸುತ್ತೇನೆ. ಶುಕ್ರವಾರ ಪಟ್ಟಿ ಮಾಡಲಾಗುವುದು. ಬಳಿಕ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ವಿಚಾರಣೆ ಬಹಿಷ್ಕಾರ

ಏ. 20ರಂದು ಅಬಕಾರಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ.ಸ್ವರ್ಣಕಾಂತ ಶರ್ಮಾ ಅವರು ವಜಾಗೊಳಿಸಿದ್ದರು. ಬಳಿಕ ಕೇಜ್ರಿವಾಲ್, ಸಿಸೋಡಿಯಾ ಹಾಗೂ ಪಾಠಕ್ ಅವರು ನ್ಯಾ. ಶರ್ಮಾ ಅವರಿಗೆ ಪತ್ರ ಬರೆದು, ತಾವು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಇನ್ಮುಂದೆ ಮುಂದೆ ಹಾಜರಾಗುವುದಿಲ್ಲ. ಮಹಾತ್ಮ ಗಾಂಧಿಯವರ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸುತ್ತೇವೆ ಎಂದಿದ್ದರು.

ಕೇಜ್ರಿವಾಲ್ ಬಹಿಷ್ಕರಿಸಿದ್ದೇಕೆ? 

ಅಬಕಾರಿ ಪ್ರಕರಣದ ಸಂಬಂಧ ಫೆ. 27ರಂದು ತೀರ್ಪು ನೀಡಿದ್ದ ನ್ಯಾಯಾಲಯ, ಈ ಪ್ರಕರಣವು ನ್ಯಾಯಾಂಗ ಪರಿಶೀಲನೆಯಿಂದ ಬದುಕುಳಿಯಲು ಸಂಪೂರ್ಣವಾಗಿ ಅಸಮರ್ಥವಾಗಿದೆ ಮತ್ತು ಸಂಪೂರ್ಣವಾಗಿ ಅಪಖ್ಯಾತಿಗೊಳಗಾಗಿದೆ ಎಂದು ಟೀಕಿಸಿ, ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರ 21 ಜನರನ್ನು ಖುಲಾಸೆಗೊಳಿಸಿತು. ಸಿಬಿಐ & ಇಡಿ ಅಧಿಕಾರಿಗಳನ್ನು ತೀವ್ರವಾಗಿ ಟೀಕಿಸಿತ್ತು.
ಮಾ. 09ರಂದು ಸಿಬಿಐ ತನಿಖಾಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವ ವಿಚಾರಣಾ ನ್ಯಾಯಾಲಯದ  ಆದೇಶವನ್ನು ನ್ಯಾ. ಶರ್ಮಾ ಅವರ ಪೀಠ ತಡೆ ನೀಡಿ, ಸಿಬಿಐ ಸಲ್ಲಿಸಿದ ಅರ್ಜಿಯ ಮೇರೆಗೆ ಆರೋಪಗಳನ್ನು ದಾಖಲಿಸುವ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ಕೆಲವು ಅವಲೋಕನಗಳು ಮತ್ತು ಸಂಶೋಧನೆಗಳು ಮೇಲ್ನೋಟಕ್ಕೆ ತಪ್ಪಾಗಿ ಕಂಡುಬಂದಿವೆ. ಮತ್ತು ಅವುಗಳನ್ನು ಪರಿಗಣಿಸುವ ಅಗತ್ಯವಿದೆ ಎಂದು ಎಲ್ಲಾ 23 ಆರೋಪಿಗಳಿಗೂ ಮರು ವಿಚಾರಣೆಗೆ ನೋಟಿಸ್ ಜಾರಿ ಮಾಡಿತ್ತು.
ಈ ಹಿನ್ನೆಲೆ ಕೇಜ್ರಿವಾಲ್ ಸೇರಿ ಇತರೆ ಆರೋಪಿಗಳು ಈ ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾ. ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರಾಗಿದ್ದು, ಅಬಕಾರಿ ಪ್ರಕರಣದಲ್ಲಿ ಸಿಬಿಐ ಪರವಾಗಿ ಹಾಜರಾಗುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮೂಲಕ ಕೆಲಸ ಪಡೆಯುತ್ತಾರೆ. ವಿಚಾರಣೆಯಲ್ಲಿ ಹಿತಾಸಕ್ತಿ ಸಂಘರ್ಷದ ಭಾಗವಾಗಿದೆ. ಹೀಗಾಗಿ ವಿಚಾರಣೆ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು ಆರೋಪಗಳನ್ನು ಅಲ್ಲಗೆಳೆದು ಹಿಂದೆ ಸರಿಯಲು ನಿರಾಕರಿಸಿದ್ದರು (ಏಜೆನ್ಸೀಸ್).