Nepal Floods > ಪ್ರಧಾನಿ ಮೋದಿ ಸ್ಪಂದನೆಯನ್ನು ಕೃತಜ್ಞತೆಯಿಂದ ನೆನೆದ ನೇಪಾಳ ಸಚಿವ! 
ದೇಶ

ಪ್ರಧಾನಿ ಮೋದಿ ಅತ್ಯಂತ ಉದಾರ ವ್ಯಕ್ತಿ!...ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸಿದ ಭಾರತದ ಔದಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ನೇಪಾಳ | Nepal Floods

Nepal Floods

ಭೀಕರ ಪ್ರವಾಹದಿಂದ ನಲುಗಿರುವ ನೇಪಾಳಕ್ಕೆ ಭಾರತ ನೀಡುತ್ತಿರುವ ಸಕಾಲಿಕ ಬೆಂಬಲ ಮತ್ತು ನೆರವನ್ನು ನೇಪಾಳ ಸರ್ಕಾರ ಮುಕ್ತಕಂಠದಿಂದ ಶ್ಲಾಘಿಸಿದ್ದು, ಸಂಕಷ್ಟದ ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಉದಾರವಾಗಿ ಸ್ಪಂದಿಸಿದ್ದಾರೆ ಎಂದು ನೇಪಾಳದ ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ ಹೇಳಿದ್ದಾರೆ.

ಶನಿವಾರ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ವಾಗ್ಲೆ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಅಪಾರ ಪ್ರಮಾಣದ ಹಾನಿಯ ಅಂದಾಜು ಪ್ರಕ್ರಿಯೆಯನ್ನು ನೇಪಾಳ ಆರಂಭಿಸಿದ್ದು, ಪುನರ್ನಿರ್ಮಾಣ ಕಾರ್ಯಕ್ಕಾಗಿ ಅತ್ಯಂತ ಉದಾರವಾದ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ. ಭಾರತವು ಈಗಾಗಲೇ ಪರಿಹಾರ ಸಾಮಗ್ರಿಗಳು ಮತ್ತು ಕಾರ್ಯಾಚರಣೆಗೆ ಅಗತ್ಯವಿರುವ ತಜ್ಞರ ವಿಶೇಷ ತಂಡವನ್ನು ನೇಪಾಳಕ್ಕೆ ಕಳುಹಿಸಿಕೊಟ್ಟಿದೆ.

ನೇಪಾಳಕ್ಕೆ ಭಾರತದಿಂದ ಹೆಚ್ಚಿದ ಪರಿಹಾರ ಬೆಂಬಲ

ನೇಪಾಳ-ಟಿಬೆಟ್ ಗಡಿಯ ಬಳಿ ಹಿಮನದಿ ಕುಸಿತದ ನಂತರ ಸಂಭವಿಸಿದ ಮಂಜುಗಡ್ಡೆ ಮತ್ತು ಬಂಡೆಗಳ ಕುಸಿತವು ಮಧ್ಯ ನೇಪಾಳದಲ್ಲಿ ಭೀಕರ ಪ್ರವಾಹ, ಕೆಸರು ಹಾಗೂ ತ್ಯಾಜ್ಯದ ರಭಸದ ಹರಿವನ್ನು ಸೃಷ್ಟಿಸಿತು. ಇದರಿಂದಾಗಿ ಅನೇಕ ನಗರಗಳು ಮತ್ತು ಹಳ್ಳಿಗಳು ಜಲಾವೃತಗೊಂಡಿದ್ದು, ಮನೆಗಳು, ವಾಹನಗಳು, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿವೆ. ಜೊತೆಗೆ ಹಲವು ಜಲವಿದ್ಯುತ್ ಯೋಜನೆಗಳಿಗೂ ವ್ಯಾಪಕ ಹಾನಿಯಾಗಿದೆ.

ಈ ವಿಕೋಪದಲ್ಲಿ 600ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 2,400ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಸಂತ್ರಸ್ತ ಪ್ರದೇಶಗಳಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದರೂ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ಇದುವರೆಗೆ ಸುಮಾರು 2,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರವುಗೊಳಿಸಲಾಗಿದೆ.

ಪ್ರವಾಹ ಪೀಡಿತ ನೇಪಾಳಕ್ಕೆ ಭಾರತವು ಬುಧವಾರದಿಂದ ಈವರೆಗೆ 57.6 ಟನ್ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ನೇಪಾಳ ಸರ್ಕಾರದ ಕೋರಿಕೆಯ ಮೇರೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಸುರಂಗ ರಕ್ಷಣಾ ತಜ್ಞರನ್ನೊಳಗೊಂಡ 11 ಸದಸ್ಯರ ಭಾರತೀಯ ವಿಶೇಷ ತಂಡವೂ ನೇಪಾಳ ತಲುಪಿ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

ಹಂತ ಹಂತವಾಗಿ ವಿಪತ್ತು ನಿರ್ವಹಣೆಗೆ ನೇಪಾಳ ಚಾಲನೆ

ನೇಪಾಳ ಸರ್ಕಾರವು ವಿಪತ್ತು ನಿರ್ವಹಣೆಯನ್ನು ಹಂತ ಹಂತವಾಗಿ ಎದುರಿಸುತ್ತಿದ್ದು, ಸದ್ಯಕ್ಕೆ ರಕ್ಷಣೆ ಮತ್ತು ತಕ್ಷಣದ ಪರಿಹಾರ ನೀಡುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಸ್ವರ್ಣಿಮ್ ವಾಗ್ಲೆ ಸ್ಪಷ್ಟಪಡಿಸಿದ್ದಾರೆ. ಜಲವಿದ್ಯುತ್ ಘಟಕಗಳಲ್ಲಿ ಸಿಲುಕಿಕೊಂಡಿರುವವರು ಸೇರಿದಂತೆ ಜೀವಂತವಾಗಿ ಉಳಿದಿರುವವರನ್ನು ರಕ್ಷಿಸುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ನೇಪಾಳ ಸೇನೆಯು ಇದುವರೆಗೆ 1,930 ಜನರನ್ನು ಏರ್‌ಲಿಫ್ಟ್ ಮಾಡುವ ಮೂಲಕ ರಕ್ಷಿಸಿದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವ ಧುಂಚೆ, ರಸುವಾ ಮತ್ತು ಸ್ಯಾಫ್ರು ಬೇಸಿಯಂತಹ ದುರ್ಗಮ ಪ್ರದೇಶಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಭರದಿಂದ ಸಾಗಿದೆ. ಮುಂದಿನ ಹಂತದಲ್ಲಿ ತಾತ್ಕಾಲಿಕ ಆಶ್ರಯ ಒದಗಿಸುವುದು, ಕೆಲಸಕ್ಕೆ ನಗದು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಮತ್ತು ತದನಂತರ ಪುನರ್ನಿರ್ಮಾಣದ ಸವಾಲಿನ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ವಿವರಿಸಿದ್ದಾರೆ. ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 5,000ಕ್ಕೂ ಹೆಚ್ಚು ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 11,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭಾರತದ ನೆರವನ್ನು ಶ್ಲಾಘಿಸಿದ ನೇಪಾಳ!

ಇತರ ದೇಶಗಳಿಂದ ನೆರವು ಪಡೆಯುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಾಗ್ಲೆ, ನೇಪಾಳವು ಇತರ ರಾಷ್ಟ್ರಗಳ ನೆರವು ಪಡೆಯಲಿದ್ದು, ವಿಶೇಷವಾಗಿ ಭಾರತ ನೀಡುತ್ತಿರುವ ಬೆಂಬಲ ಉಲ್ಲೇಖನೀಯ ಎಂದು ಹೇಳಿದ್ದಾರೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಅತ್ಯಂತ ಉದಾರವಾಗಿ ಸ್ಪಂದಿಸಿದ್ದಾರೆ. 2015ರ ಭೀಕರ ಭೂಕಂಪದ ಸಮಯದಲ್ಲಿಯೂ ನಾನು ಸರ್ಕಾರದಲ್ಲಿದ್ದೆ, ಆ ಸಂದರ್ಭದಲ್ಲೂ ಭಾರತ ಸರ್ಕಾರ ತೋರಿದ ಉದಾರತೆ ನಿಜಕ್ಕೂ ಸ್ಮರಣೀಯವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಈ ಹಿಂದೆಯೂ ಪ್ರವಾಹ ಬಂದಾಗ ನವದೆಹಲಿಯಿಂದ ವಿಶೇಷ ಸರಕುಗಳನ್ನು ವಿಮಾನದ ಮೂಲಕ ಕಳುಹಿಸಿಕೊಡಲಾಗಿತ್ತು ಎಂಬುದನ್ನು ಸ್ಮರಿಸಿದ ವಾಗ್ಲೆ, ಈ ಬಾರಿಯೂ ನೇಪಾಳದ ಪುನರ್ನಿರ್ಮಾಣಕ್ಕೆ ಭಾರತವು ದೊಡ್ಡ ಮಟ್ಟದ ನೆರವು ನೀಡುವುದಾಗಿ ತಿಳಿಸಿದೆ ಎಂದಿದ್ದಾರೆ. ಇದರೊಂದಿಗೆ ನೇಪಾಳದ ಇತರ ನೆರೆಹೊರೆಯ ರಾಷ್ಟ್ರಗಳಿಂದಲೂ ಇದೇ ರೀತಿಯ ಬೆಂಬಲ ವ್ಯಕ್ತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​).