ಸಿಇಸಿ ಜ್ಞಾನೇಶ್ ಕುಮಾರ್ 
ದೇಶ

ಸಿಇಸಿ ಮಹಾಭಿಯೋಗ ನಿಯಮ ಪ್ರಕಾರ ಪರಿಶೀಲನೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು ಹೊಸದಾಗಿ ಯಾವುದೇ ಮಹಾಭಿಯೋಗ ನಿಲುವಳಿ ಮಂಡಿಸಿದರೂ, ಅದನ್ನು ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳಡಿ ಪರಿಶೀಲಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು ಹೊಸದಾಗಿ ಯಾವುದೇ ಮಹಾಭಿಯೋಗ ನಿಲುವಳಿ ಮಂಡಿಸಿದರೂ, ಅದನ್ನು ಸಂಸತ್ತಿನ ನಿಯಮಗಳು ಮತ್ತು ಕಾರ್ಯವಿಧಾನಗಳಡಿ ಪರಿಶೀಲಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

ಮತದಾರರ ಪಟ್ಟಿಯ ಎಸ್​ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಈ ಹಿಂದೆಯೂ ಪ್ರತಿಪಕ್ಷಗಳು ಎರಡು ಬಾರಿ ಸಿಇಸಿ ವಜಾಗೆ ನೋಟಿಸ್ ನೀಡಿದ್ದವು. ಮೊದಲ ಬಾರಿಯ ನೋಟಿಸ್​ಗಳನ್ನು ಉಭಯ ಸದನಗಳಲ್ಲಿ ತಿರಸ್ಕರಿಸಲಾಗಿತ್ತು ಹಾಗೂ ಎರಡನೇ ಬಾರಿಯ ನೋಟಿಸ್ ರಾಜ್ಯಸಭೆಯಲ್ಲಿ ಬಾಕಿ ಉಳಿದಿದೆ. ತಮ್ಮ ಗಮನಕ್ಕೆ ತರದೆ ಅಥವಾ ಶಿಫಾರಸು ಇಲ್ಲದೆ ಎಸ್​ಐಆರ್ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯುಕ್ತರಾದ ಸುಖ್​ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ನಂತರ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿವೆ.

ವಜಾಗೊಳಿಸುವ ಪ್ರಕ್ರಿಯೆ ಹೇಗೆ?: ಸಂವಿಧಾನದ ಪ್ರಕಾರ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಮಾದರಿಯಲ್ಲೇ ಮುಖ್ಯ ಚುನಾವಣಾ ಆಯುಕ್ತರನ್ನು ಸಂಸತ್ತಿನ ಮೂಲಕ ಮಾತ್ರ ಹುದ್ದೆಯಿಂದ ತೆಗೆಯಬಹುದು. ಸದನದಲ್ಲಿ ನಿಲುವಳಿ ಮಂಡನೆ ಬಳಿಕ ಆರೋಪಗಳ ತನಿಖೆಗಾಗಿ ಸಿಜೆಐ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಮತ್ತು ಓರ್ವ ಪ್ರಸಿದ್ಧ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ಸ್ಪೀಕರ್ ರಚಿಸುತ್ತಾರೆ. ಸಮಿತಿಯ ವರದಿ ಆಧಾರದ ಮೇಲೆ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅನುಮೋದನೆಗೊಂಡರೆ ಮಾತ್ರ ರಾಷ್ಟ್ರಪತಿಗಳು ಅವರನ್ನು ವಜಾಗೊಳಿಸಬಹುದು.