ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೂಕ್ಷ್ಮ ಪ್ರದೇಶವೆಂದು ಕರೆಸಿಕೊಳ್ಳುವ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಮಾದರಿಯ ಕಟ್ಟಡಕ್ಕೆ ತೃಣಮೂಲ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ಶಾಸಕ ಹುಮಾಯೂನ್ ಕಬೀರ್ ಬಿಗಿ ಭದ್ರತೆಯ ನಡುವೆ ಅಡಿಪಾಯ ಹಾಕಿದ್ದಾರೆ. ಬಾಬರಿ ಮಸೀದಿ ಧ್ವಂಸದ ದಿನವಾದ ಇಂದು ಈ ಕಾರ್ಯಕ್ರಮವನ್ನು ನಡೆಸಲಾಗಿದೆ.
ಮಧ್ಯಾಹ್ನ ಕುರಾನ್ ಪಠಣದೊಂದಿಗೆ ಆರಂಭವಾದ ಸಮಾರಂಭದಲ್ಲಿ ಸೌದಿ ಅರೇಬಿಯಾದ ಇಬ್ಬರು ಧರ್ಮಗುರುಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು ಎಂದು ಕಬೀರ್ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ನಾರಾ-ಎ-ತಕ್ಬೀರ್ ಮತ್ತು ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಕೂಗಲಾಯಿತು ಎಂದು ವರದಿಯಾಗಿದೆ.
ಈ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಕಬೀರ್ ಬೆಂಬಲಿಗರು ತಲೆಯ ಮೇಲೆ ಇಟ್ಟಿಗೆಗಳನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಪೊಲೀಸರು ಮತ್ತು ಕೇಂದ್ರ ಪಡೆಗಳು ಗಲಭೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತೆ ವಹಿಸಿದ್ದರು. ಸುಮಾರು 40,000 ಅತಿಥಿಗಳು ಮತ್ತು 20,000 ನಿವಾಸಿಗಳಿಗೆ ಶಾಹಿ ಬಿರಿಯಾನಿ ತಯಾರಿಸಲು ಏಳು ಅಡುಗೆ ಸಂಸ್ಥೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಯಿತು ಎನ್ನಲಾಗಿದ್ದು, ಇದರ ವೆಚ್ಚವೇ 30 ಲಕ್ಷ ರೂ.ಗಳಾಗಿದ್ದು, ಒಟ್ಟು ಬಜೆಟ್ 70 ಲಕ್ಷ ರೂ.ಗಳಿಗಿಂತ ಹೆಚ್ಚಿದೆ ಎನ್ನುವುದು ಮೂಲಗಳ ಮಾಹಿತಿ.
ಶೇ.67 ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮುರ್ಷಿದಾಬಾದ್ ಭಾಗದಲ್ಲಿ ಏಪ್ರಿಲ್ ತಿಂಗಳ ಸಮಯದಲ್ಲಿ ವಕ್ಫ್ ಮಸೂದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಭುಗಿಲೆದ್ದ ಅಶಾಂತಿಯಲ್ಲಿ ಸುಮಾರು ಐದು ಜನರು ಸಾವನ್ನಪ್ಪಿ ಮತ್ತು ಅನೇಕರು ಗಾಯಗೊಂಡಿದ್ದರು.
ಶಾಸಕರ ಬಾಬ್ರಿ ಮಸೀದಿ ಯೋಜನೆ
ಮಸೀದಿ ನಿರ್ಮಾಣದ ವಿಷಯ ಘೋಷಿಸಿದ ಹಿನ್ನಲೆಯಲ್ಲಿ ಕಬೀರ್ ಟಿಎಂಸಿಯಿಂದ ಅಮಾನತುಗೊಂಡಿದ್ದರು. ಮಸೀದಿ ವಿಷಯವಾಗಿ ಪ್ರಕರಣ ಕೊಲ್ಕತ್ತಾ ಹೈಕೋರ್ಟ್‌ನ ಮೆಟ್ಟಿಲೇರಿತು, ನ್ಯಾಯಾಲಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಕಾರ್ಯಕ್ರಮದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದು, ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಲು ಸಂಹತಿ ದಿವಸ್ (ಏಕತಾ ದಿನ) ಆಚರಿಸಲು ನಿರ್ಧರಿಸಿದೆ(ಏಜೆನ್ಸೀಸ್).