ಅಸಲಿ ಮುಖವಾಡ ಕಳಚಿದ ಎಕ್ಸ್-ಮುಸ್ಲಿಂ ಯೂಟ್ಯೂಬರ್: 31 ವರ್ಷಗಳ ಹಳೆಯ ಕೊಲೆ ಕೇಸ್‌ನಲ್ಲಿ ಸಲೀಂ ವಾಸ್ತಿಕ್ ಅರೆಸ್ಟ್! 
ದೇಶ

ಅಸಲಿ ಮುಖವಾಡ ಕಳಚಿದ ಎಕ್ಸ್-ಮುಸ್ಲಿಂ ಯೂಟ್ಯೂಬರ್: 31 ವರ್ಷಗಳ ಹಳೆಯ ಕೊಲೆ ಕೇಸ್‌ನಲ್ಲಿ ಸಲೀಂ ವಾಸ್ತಿಕ್ ಅರೆಸ್ಟ್! Saleem Wastik

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಎಕ್ಸ್-ಮುಸ್ಲಿಂ ಎಂದು ಗುರುತಿಸಿಕೊಂಡು, ಧರ್ಮ ಮತ್ತು ಭಯೋತ್ಪಾದನೆಯ ಕುರಿತು ವಿವಾದಾತ್ಮಕ ವಿಡಿಯೋಗಳ ಮೂಲಕ ಜನಪ್ರಿಯತೆಗಳಿಸಿದ್ದ ಸಲೀಂ ವಾಸ್ತಿಕ್(Saleem Wastik) ಅಲಿಯಾಸ್ ಸಲೀಂ ಖಾನ್​ನ ಅಸಲಿ ಬಣ್ಣ ಬಯಲಾಗಿದೆ. ಕಳೆದ ತಿಂಗಳು ತನ್ನ ಮನೆಯಲ್ಲೇ ಚಾಕು ಇರಿತಕ್ಕೆ ಒಳಗಾಗಿದ್ದ ಈ ಯೂಟ್ಯೂಬರ್, ಈಗ ದೆಹಲಿಯ ಉದ್ಯಮಿಯೊಬ್ಬರ 13 ವರ್ಷದ ಮಗನ ಅಪಹರಣ ಮತ್ತು ಭೀಕರ ಕೊಲೆ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿದ್ದಾನೆ.

1995ರ ಆ ಕರಾಳ ದಿನ: ಬಾಲಕ ಸಂದೀಪ್ ಬನ್ಸಾಲ್ ಕಣ್ಮರೆ

ಈ ಘಟನೆಯ ಹಿನ್ನೆಲೆಯು 31 ವರ್ಷಗಳಷ್ಟು ಹಳೆಯದು. ಜನವರಿ 20, 1995 ರಂದು ದೆಹಲಿಯ ಸಿಮೆಂಟ್ ಉದ್ಯಮಿಯ ಪುತ್ರ, 13 ವರ್ಷದ ಸಂದೀಪ್ ಬನ್ಸಾಲ್ ಶಾಲೆಗೆ ಹೋದವನು ಮನೆಗೆ ಮರಳಲೇ ಇಲ್ಲ. ಮರುದಿನವೇ ಉದ್ಯಮಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು. ನಿಮ್ಮ ಮಗ ನಮ್ಮ ವಶದಲ್ಲಿದ್ದಾನೆ, ಆತ ಸುರಕ್ಷಿತವಾಗಿ ಬರಬೇಕೆಂದರೆ 30,000 ರೂಪಾಯಿ ಬಿಡುಗಡೆ ಹಣ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ಲೋನಿ ಫ್ಲೈಓವರ್ ಬಳಿಯ ಬಸ್ಸೊಂದರಲ್ಲಿ ಹಣವಿಟ್ಟು ಹೋಗುವಂತೆ ಸೂಚಿಸಿದ್ದ ಕಿಡ್ನ್ಯಾಪರ್ಸ್, ಪೊಲೀಸರಿಗೆ ತಿಳಿಸಿದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಆದರೆ, ಬನ್ಸಾಲ್ ಕುಟುಂಬ ತಕ್ಷಣ ಗೋಕುಲಪುರಿ ಪೊಲೀಸ್ ಠಾಣೆಗೆ ದೂರು ನೀಡಿತು. ತನಿಖೆ ಆರಂಭಿಸಿದ ಪೊಲೀಸರಿಗೆ ನೆರೆಯವರೊಬ್ಬರು ನೀಡಿದ ಸುಳಿವು ಮಹತ್ವದ್ದಾಗಿತ್ತು. ಮಾಸ್ಟರ್‌ಜಿ ಎಂಬ ಎತ್ತರದ ಹುಡುಗನ ಜೊತೆ ಸಂದೀಪ್ ಆಟೋರಿಕ್ಷಾದಲ್ಲಿ ಹೋಗುತ್ತಿರುವುದನ್ನು ಅವರು ಕಂಡಿದ್ದರು. ಈ ಮಾಸ್ಟರ್‌ಜಿ ಬೇರೆ ಯಾರೂ ಅಲ್ಲ, ಆಗ ದರಿಯಾಗಂಜ್‌ನ ರಾಮ್‌ಜಾಸ್ ಶಾಲೆಯಲ್ಲಿ ಮಾರ್ಷಲ್ ಆರ್ಟ್ಸ್ ತರಬೇತುದಾರನಾಗಿದ್ದ ಸಲೀಂ ಖಾನ್​ ಆಗಿದ್ದನು.

ಕೃತ್ಯ ಒಪ್ಪಿಕೊಂಡ ಸಲೀಂ: ಚರಂಡಿಯಲ್ಲಿ ಪತ್ತೆಯಾಗಿತ್ತು ಬಾಲಕನ ಶವ

ಪೊಲೀಸರ ಬಲೆಗೆ ಬಿದ್ದ ಸಲೀಂ ಖಾನ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ, ಮುಸ್ತಫಾಬಾದ್‌ನ ಚರಂಡಿಯಲ್ಲಿ ಬಿಸಾಡಿದ್ದ ಬಾಲಕನ ಶವವನ್ನು ತೋರಿಸಿದ್ದ. ತನ್ನ ಸಹಚರ ಅನಿಲ್ ಜೊತೆಗೂಡಿ ಈ ಸಂಚು ರೂಪಿಸಿದ್ದಾಗಿ ಆತ ಹೇಳಿದ್ದ. ಬಾಲಕನ ಶಾಲಾ ಬ್ಯಾಗ್, ಟಿಫಿನ್ ಬಾಕ್ಸ್ ಮತ್ತು ವಾಚ್ ಸಾಕ್ಷ್ಯಗಳಾಗಿ ಸಿಕ್ಕಿದ್ದವು. 1997ರಲ್ಲಿ ಕಾರ್‌ಕರ್ಡೂಮಾ ನ್ಯಾಯಾಲಯವು ಇವರಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಮೃತಪಟ್ಟವನೆಂದು ನಾಟಕವಾಡಿ ತಲೆಮರೆಸಿಕೊಂಡಿದ್ದ ಕಿಲಾಡಿ!

ಶಿಕ್ಷೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಸಲೀಂ ಖಾನ್‌ಗೆ 2000ನೇ ಇಸ್ವಿಯ, ನ. 24 ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಆತ ಜೈಲಿನಿಂದ ಹೊರಬಂದವನೇ ಮಾಯವಾದನು. ತಾನು ಸತ್ತು ಹೋಗಿದ್ದೇನೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಸಲೀಂ ವಾಸ್ತಿಕ್ ಮತ್ತು ಸಲೀಂ ಅಹ್ಮದ್ ಎಂಬ ಹೊಸ ಹೆಸರಿನಲ್ಲಿ ಬದುಕಲಾರಂಭಿಸಿದನು. ಹರಿಯಾಣದ ಕರ್ನಾಲ್ ಮತ್ತು ಅಂಬಾಲಾದಲ್ಲಿ ಸುಮಾರು 10 ವರ್ಷಗಳ ಕಾಲ ವಾರ್ಡ್‌ರೋಬ್ ಮೇಕರ್ ಆಗಿ ಕೆಲಸ ಮಾಡಿ ತನ್ನ ಗುರುತನ್ನು ಮರೆಮಾಚಿದ್ದನು.

ಯೂಟ್ಯೂಬರ್ ಆಗಿ ಉದಯ ಮತ್ತು ಬಯೋಪ್ರಾಜೆಕ್ಟ್!

2010ರಲ್ಲಿ ಘಾಜಿಯಾಬಾದ್‌ನ ಲೋನಿ ಪ್ರದೇಶಕ್ಕೆ ಬಂದ ಸಲೀಂ, ಮಹಿಳಾ ಉಡುಪುಗಳ ಅಂಗಡಿ ತೆರೆದನು. ನಂತರ ಸಮಾಜ ಸೇವಕ ಮತ್ತು ಯೂಟ್ಯೂಬರ್ ಆಗಿ ಕಾಣಿಸಿಕೊಂಡನು. ಧರ್ಮದ ಕುರಿತು ಆತ ಮಾಡುತ್ತಿದ್ದ ವಿವಾದಾತ್ಮಕ ಭಾಷಣಗಳು ಆತನಿಗೆ ಲಕ್ಷಾಂತರ ಫಾಲೋವರ್ಸ್‌ಗಳನ್ನು ತಂದುಕೊಟ್ಟವು. ಸಲೀಂ ವಾಸ್ತಿಕ್‌ನ ಈ ಪರಿವರ್ತಿತ ಜೀವನವನ್ನು ಕಂಡು ಪ್ರಭಾವಿತನಾದ ಬಾಲಿವುಡ್ ನಿರ್ಮಾಪಕನೊಬ್ಬ ಆತನ ಜೀವನದ ಮೇಲೆ ಬಯೋಪಿಕ್ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಸಲೀಂಗೆ 15 ಲಕ್ಷ ರೂಪಾಯಿ ಮುಂಗಡ ಹಣವನ್ನೂ ನೀಡಲಾಗಿತ್ತು. ಆದರೆ ಸಿನಿಮಾ ಸೆಟ್ಟೇರುವ ಮೊದಲೇ ಆತನ ಪಾಪದ ಕೊಡ ತುಂಬಿದೆ.

ಸಲೀಂ ಮೇಲೆ ನಡೆದ ಭೀಕರ ದಾಳಿ: ಸಾವಿನ ದವಡೆಯಿಂದ ಪಾರು

ಕಳೆದ ತಿಂಗಳು ಸಲೀಂ ವಾಸ್ತಿಕ್ ಮೇಲೆ ಘಾಜಿಯಾಬಾದ್‌ನ ಮನೆಯಲ್ಲೇ ಜೀಶನ್ ಮತ್ತು ಗುಲ್ಫಾಮ್ ಎಂಬ ಇಬ್ಬರು ಯುವಕರು ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದವು. ನೀನು ನಮ್ಮ ಪ್ರವಾದಿಯನ್ನು ಅವಮಾನಿಸುತ್ತಿದ್ದೀಯಾ ಎಂದು ಕಿರುಚುತ್ತಾ ಆತನ ಕುತ್ತಿಗೆ ಮತ್ತು ಹೊಟ್ಟೆಗೆ ಮನಬಂದಂತೆ ಇರಿಯಲಾಗಿತ್ತು. ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಲೀಂ ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕುಳಿದಿದ್ದ. ದಾಳಿ ನಡೆಸಿದ ಇಬ್ಬರು ಆರೋಪಿಗಳು ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ.

ಪೊಲೀಸರ ಸಾಹಸ: 31 ವರ್ಷಗಳ ನಂತರ ನ್ಯಾಯ

ಸಲೀಂ ಮೇಲೆ ದಾಳಿ ನಡೆದ ನಂತರ ಆತನ ಹಿನ್ನೆಲೆಯನ್ನು ಕೆದಕಿದ ಪೊಲೀಸರಿಗೆ ಆಘಾತ ಕಾದಿತ್ತು. ಹಳೆಯ ಫಿಂಗರ್‌ಪ್ರಿಂಟ್ಸ್, ಫೋಟೋಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಸಲೀಂ ವಾಸ್ತಿಕ್ ಎಂಬ ಯೂಟ್ಯೂಬರ್ ಅಸಲಿಗೆ 1995ರ ಕೊಲೆಗಡುಕ ಸಲೀಂ ಖಾನ್ ಎಂದು ಸಾಬೀತಾಯಿತು. ಅಂತಿಮವಾಗಿ ದೆಹಲಿ ಪೊಲೀಸರು ಆತನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. 31 ವರ್ಷಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದ ಉದ್ಯಮಿಯ ಕುಟುಂಬಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ.
ಈ ಘಟನೆಯು ಅಪರಾಧಿಗಳು ಎಷ್ಟೇ ವೇಷ ಬದಲಿಸಿದರೂ, ಕಾಲ ಬದಲಾದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ,(ಏಜೆನ್ಸೀಸ್​).