ಮಾಜಿ ಸಚಿವ ನಾನಕ್ ರಾಮ್ ಭುರ್ಜಿ
ಲಖನೌ: ಉತ್ತರ ಪ್ರದೇಶದ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ನಾನಕ್ ರಾಮ್ ಭುರ್ಜಿ(Nanak Ram Bhurji) ಅವರು ಮಂಗಳವಾರ(ಜು. 28) ಲಖನೌದ ದಾರುಲ್ ಸಫಾ ಹೊಸ ಶಾಸಕರ ನಿವಾಸದ ಕಟ್ಟಡದ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದು, ಪೊಲೀಸರು ಅವರ ಸಾವನ್ನು ಅನುಮಾನಸ್ಪದ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಾಸಕರ ನಿವಾಸದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತೀವ್ರ ಗಾಯಗೊಂಡಿದ್ದ ನಾನಕ್ ರಾಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೊಲೀಸರು ಸಾವಿನ ಬಗ್ಗೆ ಮಾಜಿ ಸಚಿವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದಾರುಲ್ ಸಫಾ ಹೊಸ ಶಾಸಕರ ನಿವಾಸದ ಸಿಬ್ಬಂದಿಯನ್ನು ಸಹ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ಇನ್ನೂ ನಾನಕ್ ರಾಮ್ ಅವರು ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರು ಆಗಾಗ್ಗೆ ನಿವಾಸದಲ್ಲಿ ಸುತ್ತಾಡುತ್ತಿದ್ದರು ಎಂದು ಸಿಬ್ಬಂದಿ ಹೇಳೀದ್ದಾರೆ. ಇನ್ನೂ ಪೊಲೀಸರು ನಾನಕ್ ರಾಮ್ ಆಕಸ್ಮಿಕವಾಗಿ ಬಿದ್ದಿದ್ದಾರೋ, ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೋ, ಇಲ್ಲಾ ಇನ್ಯಾರಾದರೂ ತಳ್ಳಿದ್ದಾರೆಯೇ ಎಂದು ಕಂಡು ಹಿಡಿಯಲು ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).