ಸಿಎಂ ಚಂದ್ರಬಾಬು ನಾಯ್ಡು, ಜಗನ್ಮೋಹನ್ ರೆಡ್ಡಿ
ಅಮರಾವತಿ: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅಸಭ್ಯಕರ ಪದ ಬಳಸಿದ್ದಾರೆ ಎಂದು ಆರೋಪಿಸಿ ತೆಲುಗು ದೇಶಂ ಕಾರ್ಯಕರ್ತರು ವೈಎಸ್‌ಆರ್‌ಸಿಪಿ ನಾಯಕ ಮತ್ತು ಮಾಜಿ ಸಚಿವ ಅಂಬಟಿ ರಾಂಬಾಬು ಮನೆ ಮೇಲೆ ದಾಳಿಗೆ ಸಂಬಂಧಪಟ್ಟಂತೆ ಮಾಜಿ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮನೆಯ ಧ್ವಂಸದ ವಿಡಿಯೋ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಜಗನ್, ಸಿಎಂ ನಾಯ್ಡು ಅವರೇ ನಿಮ್ಮ ದೃಷ್ಕೃತ್ಯಗಳನ್ನು ಪ್ರಶ್ನಿಸಿದ್ರೆ ದಾಳಿ, ಕೊಲೆ ಯತ್ನ ಮಾಡುತ್ತಿರಾ? ಲಡ್ಡು ವಿಚಾರದಲ್ಲಿ ನಿಮ್ಮ ಕುತಂತ್ರ ವಿಫಲವಾಗಿದ್ದರಿಂದ ಹತಾಶೆಯಿಂದ ನಮ್ಮವರ ಮೇಲೆ ದಾಳಿ ಮಾಡುತ್ತೀರಾ? ಇಂದು ನಡೆದ ನಮ್ಮ ಪಕ್ಷದ ನಾಯಕರಾದ ರಾಂಬಾಬು ಅವರ ಮನೆ ಮೇಲಿನ ದಾಳಿಯನ್ನು ಖಂಡಿಸುತ್ತೇನೆ. ನಿಮ್ಮನ್ನು ಪ್ರಶ್ನಿಸುವವರ ಮೇಲೆ ಗೂಂಡಾಗಳನ್ನು ಬಿಟ್ಟು ಕೊಲ್ಲಲು ನೋಡುತ್ತಿರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಲಡ್ಡು ವಿಚಾರದಲ್ಲಿ ಸತ್ಯ ಹೊರಬಂದಿದ್ದರಿಂದ ತಡೆದುಕೊಳ್ಳಲಾಗದೇ ರಾಜ್ಯದಲ್ಲಿ ಹಿಂಸೆಗೆ ಇಳಿದಿದ್ದೀರಾ?, ನಿಮ್ಮ ಆಡಳಿತಾವಧಿಯಲ್ಲಿ ಆಂಧ್ರಪ್ರದೇಶ ಇಂದು ಜಂಗಲ್ ರಾಜ್ ಆಗಿದೆ. ಕಾನೂನು, ನ್ಯಾಯ ಎಂಬ ಪದಗಳಿಗೆ ಅರ್ಥವೇ ಇಲ್ಲದಂತಾಗಿದೆ. ಅಂಬಟಿ ರಾಂಬಾಬು ಅವರ ಮೇಲೆ ಟಿಡಿಪಿ ಗೂಂಡಾಗಳು ಹತ್ಯೆ ಯತ್ನ ಮಾಡಿದ್ರೂ, ಪೊಲೀಸರು ಸೂಕ್ತ ರಕ್ಷಣೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ನಿಮ್ಮ ಆದೇಶದ ಮೇರೆಗೆ ಟಿಡಿಪಿ ಗೂಂಡಾಗಳು ಕೊಲ್ಲಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಿರುಮಲ ಲಡ್ಡೂ ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಜಂತುಗಳ ಕೊಬ್ಬು, ಹಸುವಿನ ಕೊಬ್ಬು, ಹಂದಿಯ ಕೊಬ್ಬು ಬೆರೆಸಲಾಗಿದೆ ಎಂದು ನೀವು ಮಾಡಿದ ಆರೋಪ, ದೇಶದ ಪ್ರತಿಷ್ಠಿತ NDDB, NDRI ಲ್ಯಾಬ್‌ಗಳು ನೀಡಿದ ವರದಿಗಳಿಂದ ಸಂಪೂರ್ಣವಾಗಿ ಭಗ್ನವಾಗಿದೆ. ಕೋಟ್ಯಂತರ ಭಕ್ತರ ಮನೋಭಾವಗಳನ್ನು ಗಾಯಗೊಳಿಸಿದ್ದಕ್ಕಾಗಿ ದೇಶವ್ಯಾಪ್ತವಾಗಿ ಮಾತ್ರವಲ್ಲ, ಪ್ರಪಂಚವ್ಯಾಪ್ತವಾಗಿ ನಿಮ್ಮನ್ನು ದ್ವೇಷಿಸುತ್ತಿದ್ದಾರೆ. ಕ್ಷಮಾಪಣೆ ಹೇಳಬೇಕಾದ ಸ್ಥಿತಿಯಲ್ಲಿದ್ದರೂ, ನಿಮ್ಮ ತಪ್ಪುಗಳನ್ನು ಮರೆಮಾಚಲು ಮತ್ತೆ ಹೊಸ ಕುತಂತ್ರಗಳಿಗೆ ತೆರೆ ಎಳೆಯುತ್ತಿದ್ದೀರಿ. ಅದರ ಭಾಗವೇ ಈ ಹೇಯ ದಾಳಿಗಳು ಎಂದಿದ್ದಾರೆ.
ತಿರುಮಲ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ಆರೋಪದ ತನಿಖೆ ನಡೆಸಿದ್ದ ಸಿಬಿಐ, ತನ್ನ ಚಾರ್ಜ್ಶೀಟ್ನಲ್ಲಿ ಲಡ್ಡುವಿನಲ್ಲಿ ಅಂತಹದ್ದು ಯಾವುದೇ ಬೆರಸಿಲ್ಲ, ಆದರೆ ತುಪ್ಪದಲ್ಲಿ ಬೇರೆ ಅಂಶಗಳನ್ನು ಬೆರೆಸಲಾಗಿದೆ ಎಂದು ಆರೋಪಿಸಿದೆ. ಈ ಹಿನ್ನೆಲೆ ಇಂದು ವೈಎಸ್‌ಆರ್‌ಸಿಪಿ ರಾಜ್ಯಾದ್ಯಂತ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯಕ್ರಮವನ್ನು ಆಯೋಜಿಸಿ, ತಮ್ಮ ಪಕ್ಷದ ಸರ್ಕಾರದ ವಿರುದ್ಧ ಮಾಡಿದ್ದ ಆರೋಪಗಳನ್ನ ತಿರಸ್ಕರಿಸಿ ಪ್ರತಿಭಟನೆ ನಡೆಸಲಾಗಿತ್ತು.
ಅದರ ಭಾಗವಾಗಿ ಗುಂಟೂರಿನಲ್ಲಿ ತಿರುಮಲ ಲಡ್ಡುವಿನ ಬಗ್ಗೆ ಸತತವಾಗಿ ಪೋಸ್ಟರ್‌ಗಳ ಸಂಬಂಧ ಟಿಡಿಪಿ ಕಾರ್ಯಕರ್ತರು ಮತ್ತು ವೈಸಿಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅಂಬಟಿ ರಾಂಬಾಬು ಸಿಎಂ ಚಂದ್ರಬಾಬು ನಾಯ್ಡು ಅಸಭ್ಯ ಪದ ಬಳಸಿದ್ದು, ಇದರಿಂದ ಕೆರಳಿದ ಕಾರ್ಯಕರ್ತರು ಅಂಬಟಿ ರಾಂಬಾಬು ಅವರ ಮನೆ ಮೇಲೆ ದಾಳಿ ಮಾಡಿ, ಪಿಠೋಪಕರಣಗಳನ್ನು ಧ್ವಂಸ ಮಾಡಿದ್ದರು (ಏಜೆನ್ಸೀಸ್).