Pinarayi Vijayan House Raid By ED 
ದೇಶ

ಪಿಣರಾಯಿ ವಿಜಯನ್​​ರಿಗೆ ಬೆಳ್ಳಂಬೆಳಗ್ಗೆ ED ಶಾಕ್; ಕೇರಳಂನ ಮಾಜಿ ಸಿಎಂ ಬಾಡಿಗೆ ನಿವಾಸ ಸೇರಿದಂತೆ 10 ಸ್ಥಳಗಳಲ್ಲಿ ರೇಡ್

ಪ್ರಮುಖ ಮುಖ್ಯಾಂಶಗಳು

  • CMRL ಹಣ ಅಕ್ರಮ ವರ್ಗಾವಣೆ ಪ್ರಕರಣ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ
  • ಪಿಎಂಎಲ್‌ಎ ಕಾಯ್ದೆಯಡಿ ಬುಧವಾರ ಒಟ್ಟು 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ED ರೇಡ್
  • ಟಿ. ವೀನಾ ಅವರ ಐಟಿ ಸಂಸ್ಥೆಗೆ ಸಿಎಂಆರ್‌ಎಲ್ 1.72 ಕೋಟಿ ಅಕ್ರಮ ಪಾವತಿ ಮಾಡಿರುವ ಆರೋಪ
ತಿರುವನಂತಪುರಂ: ‘ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್’ (CMRL) ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಬುಧವಾರ ಬೆಳ್ಳಂಬೆಳಗ್ಗೆ ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ರ ಬಾಡಿಗೆ ನಿವಾಸ ಸೇರಿದಂತೆ 10ಕ್ಕೂ ಸ್ಥಳಗಳಲ್ಲಿ ದಾಳಿ ನಡೆಸಿದೆ.
ತಿರುವನಂತಪುರದಲ್ಲಿರುವ ಪಿಣರಾಯಿ ಅವರ ಬಾಡಿಗೆ ಮನೆ ಸೇರಿದಂತೆ ರಾಜ್ಯದ ಒಟ್ಟು 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಸೆಕ್ಷನ್ ಅಡಿಯಲ್ಲಿ ದಾಳಿ ನಡೆಸಲಾಗುತ್ತಿದೆ.

ರೇಡ್​ ನಡೆದಿದ್ಯಾಕೆ

ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ ಮತ್ತು ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀನಾ ಒಡೆತನದ ಬೆಂಗಳೂರು ಮೂಲದ ಐಟಿ ಸಂಸ್ಥೆ 'ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್' ಕಂಪನಿಗೆ ನೀಡಲಾಗಿದೆ ಎನ್ನಲಾದ 1.72 ಕೋಟಿ ರೂ. ಪಾವತಿಸಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

ಪುತ್ರಿಯ ಸಂಸ್ಥೆಯ ಮೂಲಕ ಆ ಹಣ ಪಿಣರಾಯಿ ಅವರನ್ನು ತಲುಪಿದೆ ಎಂದು ಪತ್ರಕರ್ತ ಎಂ.ಆರ್.ಅಜಯನ್ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಕೋರಿದ್ದರು. ಈ ಪ್ರಕರಣದಲ್ಲಿ ED ತನಿಖೆಯನ್ನು ರದ್ದುಗೊಳಿಸುವಂತೆ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. ಕೋರ್ಟ್ ಈ​ ಮಹತ್ವದ ತೀರ್ಪು ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಏನಿದು ಸಿಎಂಆರ್‌ಎಲ್ ಹಗರಣ

ಖಾಸಗಿ ಕಂಪನಿಯಾದ ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ , ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀನಾ ಒಡೆತನದ 'ಎಕ್ಸಾಲಾಜಿಕ್ ಸೊಲ್ಯೂಷನ್ಸ್' ಐಟಿ ಸಂಸ್ಥೆಗೆ 2018 ರಿಂದ 2019 ರ ಅವಧಿಯಲ್ಲಿ 1.72 ಕೋಟಿ ಮೊತ್ತವನ್ನು ಅಕ್ರಮವಾಗಿ ಪಾವತಿಸಿದೆ. ಈ ಐಟಿ ಕಂಪನಿಯು ಸಿಎಂಆರ್‌ಎಲ್‌ಗೆ ಯಾವುದೇ ರೀತಿಯ ಸೇವೆಯನ್ನು ನೀಡದಿದ್ದರೂ, ಭಾರಿ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ ಎನ್ನುವುದು ಆರೋಪ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ 2024 ರಲ್ಲಿಯೇ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಏಪ್ರಿಲ್ 2025 ರಲ್ಲಿ, ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅಕ್ರಮ ಹಣ ಪಾವತಿಗೆ ಸಂಬಂಧಿಸಿದಂತೆ ಟಿ. ವೀನಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಿತು.

SFIO ಸಲ್ಲಿಸಿದ 160 ಪುಟಗಳ ದೂರಿನಲ್ಲಿ ವೀನಾ, ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತ ಮತ್ತು ಇತರ 25 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅಲ್ಲದೆ ಸಿಎಂಆರ್‌ಎಲ್, ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು ಅದರ ಅಂಗಸಂಸ್ಥೆಯಾದ 'ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ಸ್' ಕಂಪನಿಗಳನ್ನೂ ಇದರಲ್ಲಿ ಸೇರಿಸಲಾಗಿದೆ, (ಏಜೆನ್ಸೀಸ್).