ದೇಶ

ಕ್ಷೇತ್ರ ಪುನರ್ವಿಂಗಡಣೆಗೆ ಕಾಂಗ್ರೆಸ್​ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಬೆಂಬಲ! ಸರ್ಕಾರಕ್ಕೆ ನೀಡಿದ ಆ ಒಂದು ಸಲಹೆ ಏನು? | Sushilkumar Shinde

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕ್ಷೇತ್ರ ಪುನರ್ವಿಂಗಡಣೆ ನಡೆಯು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಗೊಳಿಸುವಂತೆ ಕಾಣುತ್ತಿದ್ದು, 2012ರ ಜುಲೈನಿಂದ 2014ರ ಮೇ ವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರು ಶನಿವಾರ ಈ ಪ್ರಕ್ರಿಯೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ವಿಷಯದಲ್ಲಿ ಎಲ್ಲರ ಒಮ್ಮತವನ್ನು ಪಡೆದುಕೊಳ್ಳುವಂತೆ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಳಿದ ಪ್ರಶ್ನೆಗೆ ಸುದ್ದಿಗಾರರಿಗೆ ಮಾತನಾಡಿದ ಕೈ ನಾಯಕ, ಕಾಲಕಾಲಕ್ಕೆ ಕ್ಷೇತ್ರ ಪುನರ್ವಿಂಗಡಣೆ ನಡೆಯಬೇಕು. ಆದಾಗ್ಯೂ, ಸರ್ಕಾರವು ಈ ವಿಷಯವನ್ನು ಪ್ರಸ್ತಾಪಿಸುವ ಮೊದಲು ಎಲ್ಲರ ಸಮ್ಮತಿಯನ್ನು ಪಡೆದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಇದರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026 ಅನ್ನು ಮರುಮಂಡಿಸಲಿದ್ದು, ಈ ಹೊತ್ತಿನಲ್ಲಿ ಶಿಂಧೆ ಅವರ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಜಾಪ್ರಭುತ್ವ ಮುಗಿಸುವ ಯತ್ನ ಎಂದು ಖರ್ಗೆ ಆಕ್ರೋಶ!

ಇಂಡಿಯಾ ಮೈತ್ರಿಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಉದ್ದೇಶಿಸಿರುವ ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದೆ. ನವದೆಹಲಿಯಲ್ಲಿ ಮಿತ್ರಪಕ್ಷದ ನಾಯಕರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಮಸೂದೆಯ ಮೂಲಕ ಕೇಂದ್ರವು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮುಗಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಯಾದರೆ, ಪರಿಶಿಷ್ಟ ಜಾತಿ (ಎಸ್​ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್​ಟಿ) ಇತ್ತೀಚಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯಲ್ಲಿ ಸಿಗಬೇಕಾದ ಪಾಲು ಸಿಗುವುದಿಲ್ಲ ಎಂದು ಖರ್ಗೆ ಹೇಳಿದರು. ಅಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ 400 ಪಾರ್ ಘೋಷಣೆಗೆ ಇದನ್ನು ಹೋಲಿಸಿದ ಅವರು, ಕೇಸರಿ ಪಕ್ಷವು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು 800 ಪಾರ್ ಸಾಧಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ದೂರಿದರು.

ಮೋದಿ ಸರ್ಕಾರದ ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ. ಇದು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ಶಾಶ್ವತವಾಗಿ ಅಧಿಕಾರವನ್ನು ಕೈವಶ ಮಾಡಿಕೊಳ್ಳುವ ಬೆದರಿಕೆಯೊಡ್ಡಿದೆ ಎಂದು ಆರೋಪಿಸಿದ ಖರ್ಗೆ, ಅವರು ಈ ನಾಟಕದಲ್ಲಿ ತೊಡಗಿದ್ದಾರೆ. ಈ ಮಸೂದೆಯು ಎಸ್‌ಸಿ/ಎಸ್‌ಟಿ ಪರವಾಗಿಲ್ಲದ ಕಾರಣ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮುಗಿಸುವ ಉದ್ದೇಶವನ್ನು ಹೊಂದಿರುವುದರಿಂದ ಇದನ್ನು ಒಟ್ಟಾಗಿ ವಿರೋಧಿಸಲು ನಾವು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಮಸೂದೆ ಅಂಗೀಕಾರದ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ

ಮತ್ತೊಂದೆಡೆ, ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವ ವಿಶ್ವಾಸದಲ್ಲಿರುವ ಕೇಂದ್ರ ಸರ್ಕಾರವು, ವಿರೋಧ ಪಕ್ಷಗಳು ಈ ಕಾನೂನಿಗೆ ಬೆಂಬಲ ನೀಡಬೇಕು ಮತ್ತು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಒದಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದೆ(ಏಜೆನ್ಸೀಸ್​).