ಮಾಜಿ ಪ್ರಧಾನಿ ಶೇಖ್ ಹಸೀನಾ 
ದೇಶ

ಎರಡು ವರ್ಷಗಳ ಬಳಿಕ ಮೊದಲ ಬಾರಿ ಜಗತ್ತಿಗೆ ಕಾಣಿಸಿಕೊಳ್ಳಲಿರುವ ಬಾಂಗ್ಲಾ ಮಾಜಿ ಪಿಎಂ ಶೇಖ್ ಹಸೀನಾ: ಆಗಸ್ಟ್ 5ರಂದು ಸುದ್ದಿಗೋಷ್ಠಿ | Sheikh Hasina

ನವದೆಹಲಿ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯಿಂದ ಸರ್ಕಾರ ಪದಚ್ಯುತಗೊಂಡು ಎರಡು ವರ್ಷಗಳ ಬಳಿಕ ಭಾರತದಲ್ಲಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದು, ಆಗಸ್ಟ್ 5ರಂದು ಬಹಿರಂಗ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಗೋಷ್ಠಿಯನ್ನು ನವದೆಹಲಿಯಲ್ಲಿರುವ ವಿದೇಶಿ ವರದಿಗಾರರ ಕ್ಲಬ್ ಆಫ್ ಸೌತ್ ಏಷ್ಯಾ, ವರ್ಚುವಲ್ ಆಗಿ ಆಯೋಜಿಸಲಿದ್ದು, ಅಂದು ಸಂಜೆ 6 ರಿಂದ 7:30 ರವರೆಗೆ ನವದೆಹಲಿಯ ಮಥುರಾ ರಸ್ತೆಯಲ್ಲಿರುವ ಸರ್ ಮಾರ್ಕ್ ಟಲ್ಲಿ ಸಭಾಂಗಣದಲ್ಲಿ ನಡೆಯಲಿದ್ದು, ಕ್ಲಬ್‌ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ.
ಹಸೀನಾ ಪ್ರಸ್ತುತ ದೇಶಭ್ರಷ್ಟರಾಗಿ ಭಾರತದಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗಿನಿಂದ ಅವರು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಔಪಚಾರಿಕ ಮಾಧ್ಯಮ ಸಂವಾದಗಳಿಂದ ದೂರವಿದ್ದಾರೆ. ಸಂವಾದದಲ್ಲಿ ಹಸೀನಾ ತಮ್ಮ ಭವಿಷ್ಯದ ಯೋಜನೆಗಳು ಮತ್ತು ಬಾಂಗ್ಲಾದೇಶಕ್ಕೆ ಮರಳುವ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ. ಮತ್ತು ಅವರ ಭಾಷಣವು ಅಧಿಕಾರದಿಂದ ಹೊರಬಂದ ಬಳಿಕದ ಅತ್ಯಂತ ಮಹತ್ವದ ಸಾರ್ವಜನಿಕ ಭಾಷಣವಾಗಲಿದೆ ಎನ್ನಲಾಗಿದೆ.
ಹಸೀನಾ ಅವರು ಪ್ರಸ್ತುತ ಬಾಂಗ್ಲಾದೇಶದಲ್ಲಿ ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದರೂ, ತಮ್ಮ ಸ್ವದೇಶಕ್ಕೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಜೂನ್ ಅಂತ್ಯದಲ್ಲಿ ಮತ್ತು ಜುಲೈನಲ್ಲಿ ರಾಯಿಟರ್ಸ್‌ಗೆ ನೀಡಿದ ಸಂದರ್ಶನಗಳಲ್ಲಿ, ಡಿಸೆಂಬರ್ 2026ರ ಸುಮಾರಿಗೆ ತಾನು ಹಿಂತಿರುಗುವ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.
ಇನ್ನೂ ಸಂವಾದದ ಆಹ್ವಾನ ಪತ್ರಿಕೆಯಲ್ಲಿ ಹಸೀನಾ ಜೊತೆಗೆ ಕಾರ್ಯಕ್ರಮದಲ್ಲಿ ಹಲವಾರು ಬಾಂಗ್ಲಾದೇಶದ ರಾಜಕೀಯ ನಾಯಕರು, ರಾಜತಾಂತ್ರಿಕರು ಮತ್ತು ಸಾರ್ವಜನಿಕ ವ್ಯಕ್ತಿಗಳ ಭಾಗವಹಿಸುವ ನಿರೀಕ್ಷೆಯಿರುವ ಹೆಸರುಗಳಿವೆ. ಅವರಲ್ಲಿ ಹಸೀನಾ ಅವರ ಮಗ ಸಜೀಬ್ ವಾಝೇದ್ ಜಾಯ್, ಮಾಜಿ ಶಿಕ್ಷಣ ಸಚಿವ ಮೊಹಿಬುಲ್ ಹಸನ್ ಚೌಧರಿ ನೌಫೆಲ್, ಮಾನವ ಹಕ್ಕುಗಳ ಕಾವಲು ಪಡೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ಸಿದ್ದಿಕ್ ಸೇರಿ ಹಲವರ ಹೆಸರುಗಳಿವೆ (ಏಜೆನ್ಸೀಸ್).