Bhupen Borah | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರೊಂದಿಗೆ ಭೂಪೇನ್ ಬೋರಾ 
ದೇಶ

ಅಸ್ಸಾಂ ಕಾಂಗ್ರೆಸ್​​ಗೆ ಮರ್ಮಾಘಾತ.. ಫೆಬ್ರವರಿ 22 ಕ್ಕೆ 'ಕೈ' ಬಿಟ್ಟು ಕಮಲ ಮುಡಿಯಲಿರುವ ಭೂಪೇನ್ ಬೋರಾ | Bhupen Borah

ದಿಸ್ಪೂರ್​: ನಿನ್ನೆ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ (Bhupen Borah) ಫೆಬ್ರವರಿ 22 ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಸಿಎಂ ಶರ್ಮಾ, ಭೂಪೇನ್ ಬೋರಾ ಇದೇ 22 ರಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದು, ದಿಲೀಪ್ ಸೈಕಿಯಾ ಈ ಕುರಿತಾದ ಯೋಜನೆ ರೂಪಿಸಲಿದ್ದಾರೆ. ಬೋರಾ ಅವರೊಂದಿಗೆ ಗುವಾಹಟಿ ಮತ್ತು ಉತ್ತರ ಲಖಿಂಪುರ ಭಾಗದ ಅನೇಕ ಕಾಂಗ್ರೆಸ್ ನಾಯಕರು ಕಮಲ ಮುಡಿಯಲಿದ್ದಾರೆ ಎಂದರು.
ಬೊರಾ ಅವರನ್ನು ಕಾಂಗ್ರೆಸ್‌ನ ಕೊನೆಯ ಮಾನ್ಯತೆ ಪಡೆದ ಹಿಂದೂ ನಾಯಕ ಎಂದು ಕರೆದ ಶರ್ಮಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಈ ಪಕ್ಷ ಸೇರ್ಪಡೆಗೆ ಈಗಾಗಲೇ ಅನುಮೋದನೆ ನೀಡಿದ್ದು, ಅವರ ಸಮ್ಮುಖದಲ್ಲೇ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಭೂಪೇನ್ ಬೋರಾ ಅವರಿಗೆ ಸೂಕ್ತ ಗೌರವ ನೀಡುತ್ತೇವೆ ಎಂದ ಸಿಎಂ ಶರ್ಮಾ,
ಹಿರಿಯ ನಾಯಕರಾಗಿರುವ ಭೂಪೇನ್ ಬೋರಾ ಅವರಿಗೆ ಸೂಕ್ತ ಗೌರವ ನೀಡಲಾಗುವುದು. ಅವರ ಸೇರ್ಪಡೆಯು ಕಾಂಗ್ರೆಸ್ ಇನ್ನು ಮುಂದೆ ಮುಖ್ಯವಾಹಿನಿಯ ಅಸ್ಸಾಮಿ ಜನರ ಪಕ್ಷವಲ್ಲ ಎಂಬ ಚಿತ್ರಣವನ್ನು ಸಂಪೂರ್ಣವಾಗಿ ಸೃಷ್ಟಿಸುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಬೋರಾ ನಿವಾಸಕ್ಕೆ ಭೇಟಿ ನೀಡಿದ ಶರ್ಮಾ

ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ ಭೂಪೇನ್ ಬೋರಾ ನಿವಾಸಕ್ಕೆ ಸಿಎಂ ಶರ್ಮಾ ಭೇಟಿ ನೀಡಿದ್ದು, ಬೋರಾ ಪತ್ನಿ ಮತ್ತು ಕುಟುಂಬಸ್ಥರು ಶರ್ಮಾರನ್ನು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.

ಭೂಪೇನ್ ಬೋರಾ ರಾಜೀನಾಮೆ

ಅಸ್ಸಾಂನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಗೆ ನಡೆಯಲಿದ್ದು, ಅದಕ್ಕೂ ಮುನ್ನವೇ ಕಾಂಗ್ರೆಸ್‌ಗೆ ಭಾರಿ ಆಘಾತ ಎದುರಾಗಿದ್ದು, ಭೂಪೇನ್ ಕುಮಾರ್ ಬೋರಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.

ಭೂಪೇನ್ ಬೋರಾ ಹಿನ್ನಲೆ

ಬೋರಾ 2021 ರಿಂದ 2025 ರವರೆಗೆ ಅಸ್ಸಾಂ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು ಮತ್ತು ಕಳೆದ ವರ್ಷ ಆ ಸ್ಥಾನಕ್ಕೆ ಸಂಸದ ಗೌರವ್ ಗೊಗೊಯ್​ರನ್ನು ನೇಮಿಸಲಾಯಿತು. ಎರಡು ಬಾರಿ ಶಾಸಕರಾಗಿರುವ ಬೋರಾ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಈ ವೇಳೆ ಕಾಂಗ್ರೆಸ್ ಹೈಕಮಾಂಡ್‌ಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದ್ದೇನೆ, ಈ ಬೆಳವಣಿಗೆಯ ಕಾರಣವನ್ನು ವಿವರವಾಗಿ ಉಲ್ಲೇಖಿಸಿದ್ದೇನೆ ಎಂದಿದ್ದರು.
ಸದ್ಯಕ್ಕೆ ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲು ಸಾಧ್ಯವಿಲ್ಲ, ಸೂಕ್ತ ಸಮಯದಲ್ಲಿ ಮಾಧ್ಯಮದವರನ್ನು ಆಹ್ವಾನಿಸಿ, ಏನನ್ನೂ ಮರೆಮಾಚದೆ, ರಹಸ್ಯವಾಗಿ ಯಾವುದೇ ಹೆಜ್ಜೆ ಇಡುವುದಿಲ್ಲ, ನಿಮಗೆ ಎಲ್ಲಾ ವಿವರಗಳನ್ನು ನೀಡುತ್ತೇನೆ ಎಂದಿದ್ದರು.
ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದಿರುವ ಬೋರಾ, ನಾನು 32 ವರ್ಷಗಳಿಂದ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದ್ದೇನೆ, ಪಕ್ಷದ ಭವಿಷ್ಯದ ಬಗ್ಗೆ ನನಗೆ ಚಿಂತಿತನಾಗಿದ್ದು, ಪಕ್ಷದ ಹೈಕಮಾಂಡ್‌ಗೆ ಕಳುಹಿಸಲಾದ ರಾಜೀನಾಮೆ ಪತ್ರದಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಕಾರಣಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇನೆ ಎಂದು ಹೇಳಿದರು.

ಬಿಜೆಪಿಯ ಬಾಗಿಲು ತೆರೆದಿದೆ ಎಂದಿದ್ದ ಸಿಎಂ ಶರ್ಮಾ

ಇಂದು ಮದ್ಯಾಹ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬೋರಾರನ್ನು ಬಿಜೆಪಿ ಸೇರಲು ಬಹಿರಂಗವಾಗಿ ಆಹ್ವಾನಿಸಿದರು.
ಬೋರಾ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡಿರುವುದು ಅನುಮಾನ ಎಂದಿರುವ ಶರ್ಮಾ, ಇಬ್ಬರು ನಾಯಕರು ದೂರವಾಣಿ ಮೂಲಕ ಮಾತನಾಡಿರುವುದನ್ನು ದೃಢಪಡಿಸಿದರು. ಬೋರಾಗೆ ಬಿಜೆಪಿಯ ಬಾಗಿಲುಗಳು ತೆರೆದಿದ್ದು, ಪಕ್ಷ ಬದಲಾಯಿಸಲು ನಿರ್ಧರಿಸಿದರೆ ಅವರಿಗೆ ಸೂಕ್ತ ಗೌರವದೊಂದಿಗೆ ನೋಡಿಕೊಳ್ಳಲಾಗುವುದು ಎಂದರು(ಏಜೆನ್ಸೀಸ್​).