ಚೆನ್ನೈ: ತಮಿಳುನಾಡಿನ ಸೇಲಂನ ಕಾಮೆನೇರಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಭೂ ವಿವಾದದ ಬಳಿಕ ಎಐಎಡಿಎಂಕೆ ಮಾಜಿ ಶಾಸಕರೊಬ್ಬರು ವೃದ್ಧ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳೀಯರ ಪ್ರಕಾರ, ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮೆನೇರಿ ನಿವಾಸಿಯೊಬ್ಬರ ಮನೆಯ ಹತ್ತಿರ ಒಂದು ಪಟ್ಟಿಯನ್ನು ಹಾಕಲು ಯೋಜಿಸಲಾಗಿತ್ತು. ಅದಕ್ಕೆ ಪ್ರತಿಭಟಿಸಿ, ಬೇರೆ ಕಡೆ ಸರ್ಕಾರಿ ಭೂಮಿಯಲ್ಲಿ ರಸ್ತೆಯನ್ನು ಮಿರ್ಮಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದದ ಶುರುವಾಗಿದ್ದು, ಮಾಜಿ ಶಾಸಕ ಅರ್ಜುನನ್ ಆಕೆಗೆ ಎರಡು ಬಾರಿ ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋ ದೃಶ್ಯಗಳಲ್ಲಿ ಕಂಡುಬಂದಿದೆ. ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ, ಅವರು ಕೋಲು ಎತ್ತಿಕೊಂಡು ಆಕೆಗೆ ಹೊಡೆಯುತ್ತಿರುವುದು ಸ್ಪಷ್ಟವಾಗಿದೆ. ಗಾಯಗೊಂಡಿರುವ ಆಕೆಯನ್ನು ಚಿಕಿತ್ಸೆಗಾಗಿ ಓಮಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ಕುರಿತಂತೆ ಸಂಬಂಧಿಕರು ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ರಾಣಿಪೇಟೆ ಜಿಲ್ಲೆಯಲ್ಲಿ ಉಂಗಲುಡನ್ ಸ್ಟಾಲಿನ್ ಕುಂದುಕೊರತೆ ಪರಿಹಾರ ಶಿಬಿರದ ಸಂದರ್ಭದಲ್ಲಿ ವೆಂಕಟಪತಿ ಎಂಬ ವೃದ್ಧ ವ್ಯಕ್ತಿಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದರು. ಉಪ್ಪುಪೆಟ್ಟೈ ನಿವಾಸಿ ವೆಂಕಟಪತಿ ಅರ್ಜಿ ಸಲ್ಲಿಸಿದ್ದರು ಆದರೆ ಸಂಬಂಧಪಟ್ಟ ಅಧಿಕಾರಿ ಸ್ವೀಕೃತಿ ಚೀಟಿ ನೀಡಲು ನಿರಾಕರಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು(ಏಜೆನ್ಸೀಸ್).