ಚೆನ್ನೈ: ಮುಖ್ಯಮಂತ್ರಿಯನ್ನು, ಸರ್ಕಾರವನ್ನು ಟೀಕಿಸುವ ಅಥವಾ ಹೊಗಳುವ ಹಕ್ಕು ಪ್ರತಿಯೊಬ್ಬರಿಗಿದೆ ಎಂದಿರುವ ಮದ್ರಾಸ್ ಹೈಕೋರ್ಟ್, ಮಂಗಳವಾರ(ನ. 03) ಮುಖ್ಯಮಂತ್ರಿಗಳನ್ನು ಟೀಕಿಸುವ ಹಕ್ಕು ಜನರಿಗಿದೆ. ಅದೇ ಸಮಯದಲ್ಲಿ, ಜನರ ಅಂತಹ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸರ ಮೇಲಿದೆ ಎಂದು ಹೇಳಿದೆ.
ತಮಿಳುನಾಡು ಸಿಎಂ ವಿಜಯ್ ಅವರನ್ನು ದೂಷಿಸಿದ ಆರೋಪದ ಮೇಲೆ ಡಿಎಂಕೆ ಕೌನ್ಸಿಲರ್ ಸುಧಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ನಿರೀಕ್ಷಣಾ ಜಾಮೀನು ಕೋರಿ ಸುಧಾ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಂಗಳವಾರ ಸುಧಾ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ರಮೇಶ್ ನೇತೃತ್ವದ ಪೀಠವು, ಪ್ರಜಾಪ್ರಭುತ್ವದಲ್ಲಿ, ಆಡಳಿತಗಾರರನ್ನು ಪ್ರಶ್ನಿಸುವುದು, ಟೀಕಿಸುವುದು ಮತ್ತು ವಿರೋಧ ವ್ಯಕ್ತಪಡಿಸುವುದು ನಾಗರಿಕರ ಮೂಲಭೂತ ಹಕ್ಕು ಎಂದು ಹೇಳಿತು. ಮತ್ತು ಸುಧಾರವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಮುಂದುವರೆದು ಸಂವಿಧಾನದ ಪ್ರಕಾರ, ಸರ್ಕಾರವನ್ನು ಹೊಗಳುವ ಮತ್ತು ಟೀಕಿಸುವ ಸ್ವಾತಂತ್ರ್ಯ ಜನರಿಗೆ ಇದೆ ಎಂದು ಸ್ಪಷ್ಟಪಡಿಸಿದೆ. ಮತ್ತು ಆಡಳಿತ ಬದಲಾಗಬಹುದು, ಮುಖ್ಯಮಂತ್ರಿಗಳು ಬದಲಾಗಬಹುದು, ಆದರೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವ ಎಂದಿಗೂ ಬದಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ರಾಜಕಾರಣಿಯೊಬ್ಬರು ಆಡಳಿತಗಾರರನ್ನು ಅವಮಾನಿಸುವ ಭಾಷಣ ಮಾಡುವುದು ಅಪರಾಧವಲ್ಲ. ಮತ್ತು ಮುಖ್ಯಮಂತ್ರಿ ಸೇರಿದಂತೆ ಸಾರ್ವಜನಿಕ ಜೀವನದ ಎಲ್ಲಾ ನಾಯಕರು ಜನರ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆಡಳಿತಗಾರರು ಟೀಕೆಗೆ ಹೊರತಾಗಿಲ್ಲ ಎಂದು ಹೇಳಿತು. ಮತ್ತು ಸಿಎಂ ಅವರನ್ನು ಟೀಕಿಸಿದ್ದಕ್ಕೆ ಪ್ರಕರಣ ದಾಖಲಿಸಿದ ಪೊಲೀಸರ ನಡೆಯನ್ನು ಟೀಕಿಸಿದ ಪೀಠವು, ಪೊಲೀಸರು ಕಾನೂನು ಜಾರಿ ಅಧಿಕಾರಿಗಳಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ (ಏಜೆನ್ಸೀಸ್).