ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಭಾವಚಿತ್ರ
ಮುಂಬೈ: ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್ ಎಂಬ ನಗರಗಳ ಹೆಸರು ಕೇಳಿದ ತಕ್ಷಣ ಕಣ್ಮುಂದೆ ಬರುವುದೇ, ಅಲ್ಲಿನ ಟ್ರಾಫಿಕ್ ಜಾಮ್ ಮತ್ತು ಸಾಗುಗಟ್ಟಿನಿಂತ ವಾಹನಗಳು. ಹೌದು, ದೊಡ್ಡ ದೊಡ್ಡ ಸಿಟಿಗಳಲ್ಲಿ ಸಂಚಾರ ದಟ್ಟಣೆ ಅನ್ನೋದು ಎಲ್ಲರಿಗೂ ಕಾಡುವ ದೊಡ್ಡ ತಲೆನೋವಾಗಿದೆ. ಆದರೆ ಈ ಟ್ರಾಫಿಕ್ ಕಿರಿಕಿರಿಯಿಂದ ಜನ ಸಾಮಾನ್ಯರಷ್ಟೇ ಅಲ್ಲ, ಖುದ್ದು ರಸ್ತೆ ಸಾರಿಗೆ ಸಚಿವರೇ ಒದ್ದಾಡಿರುವ ಘಟನೆ ನಡೆದಿದೆ.
ಮುಂಬೈನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ತೆರಳುವಾಗ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಒಂದು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗಿ ತಿಳಿದು ಬಂದಿದೆ.
ಮುಂಬೈನಲ್ಲಿ 'ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್' (IACC) ಆಯೋಜಿಸಿದ್ದ 22ನೇ 'ಇಂಡೋ-ಅಮೆರಿಕನ್ ಕಾರ್ಪೊರೇಟ್ ಎಕ್ಸಲೆನ್ಸ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ತಮ್ಮದೇ ಸ್ವಂತ ಅನುಭವವನ್ನು ಸಭಿಕರ ಮುಂದೆ ಹಂಚಿಕೊಂಡಿದ್ದಾರೆ.
ನನ್ನ ತಪ್ಪು ನಾನೇ ಅನುಭವಿಸುತ್ತಿದ್ದೇನೆ!
ವರ್ಲಿಯಿಂದ ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್‌ಗೆ ಹೊರಟಿದ್ದ ಗಡ್ಕರಿ ತೀವ್ರ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಒಂದು ಗಂಟೆ ತಡವಾಗಿ ಆಗಮಿಸಿದರು. ವೇದಿಕೆಗೆ ಬರುತ್ತಿದ್ದಂತೆ ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಅವರು, ಇವತ್ತು ಇಲ್ಲಿಗೆ ಬರಲು ನನಗೆ ಒಂದು ಗಂಟೆ ತಡವಾಯಿತು. ವರ್ಲಿಯಿಂದ ಬರುವ ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೆ. ಆದರೆ ವಾಸ್ತವವಾಗಿ ನಾನು ನನ್ನದೇ ಹಿಂದಿನ ತಪ್ಪಿನ ಪರಿಣಾಮವನ್ನು ಈಗ ಅನುಭವಿಸುತ್ತಿದ್ದೇನೆ ಎಂದು ನಗುತ್ತಲೇ ಒಪ್ಪಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, 1995 ರಿಂದ 2000ರ ಅವಧಿಯಲ್ಲಿ ಮಹಾರಾಷ್ಟ್ರದ ಸಚಿವರಾಗಿದ್ದಾಗ ನನಗೆ 55 ಮೇಲ್ಸೇತುವೆಗಳು, ಬಾಂದ್ರಾ-ವರ್ಲಿ ಸೀ ಲಿಂಕ್ ಮತ್ತು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಅವಕಾಶ ಸಿಕ್ಕಿತ್ತು. ಆದರೆ ಅಂದು ಇಂದಿನಷ್ಟು ಮುಂದುವರಿದ ತಂತ್ರಜ್ಞಾನ ನಮ್ಮ ಬಳಿ ಇರಲಿಲ್ಲ. ದಶಕಗಳ ಹಿಂದೆ ವಿನ್ಯಾಸಗೊಳಿಸಲಾದ ಆ ಹಳೆಯ ಮೂಲಸೌಕರ್ಯಗಳೇ ಇಂದು ಟ್ರಾಫಿಕ್‌ಗೆ ಪ್ರಮುಖ ಕಾರಣವಾಗುತ್ತಿವೆ ಎಂದಿದ್ದಾರೆ.
ಮಲೇಷ್ಯಾ ತಂತ್ರಜ್ಞಾನದ ಮ್ಯಾಜಿಕ್!
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಭಾಯಿಸಲು ಹಳೆಯ ಮೇಲ್ಸೇತುವೆಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ ಎಂದು ಸ್ಪಷ್ಟಪಡಿಸಿದ ಗಡ್ಕರಿ, ಅಸ್ತಿತ್ವದಲ್ಲಿರುವ ಮೇಲ್ಸೇತುವೆಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬದಲಾಯಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿರುವುದಾಗಿ ತಿಳಿಸಿದರು.
ಪುಣೆಯಲ್ಲಿ ಪ್ರಸ್ತಾಪಿಸಲಾಗಿರುವ ಸುಮಾರು 50,000 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಯ ಬಗ್ಗೆ ಮಾತನಾಡಿದ ಅವರು, ಭಾರತವು ಇತ್ತೀಚೆಗೆ ಮಲೇಷ್ಯಾದಿಂದ ವಿಶೇಷ ತಂತ್ರಜ್ಞಾನವೊಂದನ್ನು ಪಡೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ.
ಈ ಆಧುನಿಕ ತಂತ್ರಜ್ಞಾನದ ಮೂಲಕ ಕೇವಲ ಒಂದೇ ಸಾಲಿನ ಕಂಬಗಳ ಮೇಲೆ ಬಹು-ಹಂತದ ಮೇಲ್ಸೇತುವೆಗಳನ್ನು ನಿರ್ಮಿಸಬಹುದು. ಅಷ್ಟೇ ಅಲ್ಲ, ಅದರ ಮೇಲ್ಭಾಗದಲ್ಲೇ ಮೆಟ್ರೋ ಕಾರಿಡಾರ್ ಕೂಡ ಸಂಚರಿಸಲು ಅವಕಾಶವಿರುತ್ತದೆ. ಇಂತಹ ಅದ್ಭುತ ಎಂಜಿನಿಯರಿಂಗ್ ಪರಿಹಾರಗಳು ಮಾತ್ರ ಭವಿಷ್ಯದ ನಗರಗಳ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬಲ್ಲವು ಎಂದು ಅವರು ವಿವರಿಸಿದ್ದಾರೆ.
ಜಪಾನ್ ಹಿಂದಿಕ್ಕಿದ ಭಾರತ
ಭಾರತ ಮತ್ತು ಅಮೆರಿಕ ನಡುವಿನ ತಾಂತ್ರಿಕ ಸಹಕಾರದ ಬಗ್ಗೆ ಮಾತನಾಡಿದ ಗಡ್ಕರಿ, ಕೆಲವರು ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿದರೆ, ಇನ್ನು ಕೆಲವರು ಅವಕಾಶಗಳನ್ನು ಸಮಸ್ಯೆಗಳನ್ನಾಗಿ ಮಾಡುತ್ತಾರೆ. ಆದರೆ ನಾವು ಸವಾಲುಗಳನ್ನು ಸ್ವೀಕರಿಸೋಣ. ಭಾರತದ ಬಳಿ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯವಿದ್ದರೆ, ಅಮೆರಿಕದ ಬಳಿ ಸುಧಾರಿತ ತಂತ್ರಜ್ಞಾನವಿದೆ. ಇವೆರಡನ್ನೂ ಜೋಡಿಸಿದರೆ ಜಗತ್ತಿಗೇ ಅದ್ಭುತ ಲಾಭದಾಯಕ ಮಾದರಿಯನ್ನು ಸೃಷ್ಟಿಸಬಹುದು ಎಂದಿದ್ದಾರೆ.
ಇದೇ ವೇಳೆ ದೇಶದ ಆರ್ಥಿಕ ಪ್ರಗತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಅವರು, ಅಮೆರಿಕ ಮತ್ತು ಚೀನಾದ ನಂತರ ಭಾರತವು ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್).