ನವದೆಹಲಿ: ಲೋಕಸಭೆಯಲ್ಲಿ ಗುರುವಾರ(ಏ. 16) ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಇಂದು ಚಾಣಕ್ಯ ಬದುಕಿದ್ರೆ, ನಿಮ್ಮ ಕುತಂತ್ರ ನೋಡಿ ಆಘಾತಕ್ಕೊಳಗಾಗುತ್ತಿದ್ದ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಟಾಂಗ್ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು ನಗುತ್ತಿರುವುದನ್ನು ನೋಡಿ, ತಾವು ವ್ಯಂಗ್ಯವಾಗಿ ನಗುವ ಮೂಲಕ, ನೀವೆಲ್ಲರೂ ಸಂಪೂರ್ಣವಾಗಿ ಯೋಜಿಸಿ ಬಂದಿದ್ದೀರಿ. ಇಂದು ಚಾಣಕ್ಯ ಜೀವಂತವಾಗಿದ್ದರೆ, ನಿಮ್ಮ ಕುತಂತ್ರವನ್ನು ನೋಡಿ ಆಘಾತಕ್ಕೊಳಗಾಗುತ್ತಿದ್ದರು. ಈ ಮಾತನ್ನು ಅವರು ಒಪ್ಪುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತದೆ. ಆದರೆ ಮಸೂದೆ ರಾಜಕೀಯದ ವಾಸನೆಯನ್ನು ಹೊಂದಿದೆ. ಬಿಜೆಪಿಯೂ ಇದರಿಂದ ಚುನಾವಣಾ ಲಾಭವನ್ನು ಗಳಿಸಲು ನೋಡಿದೆ. ಇದು ಎನ್ಡಿಎ ಆಡಳಿತಡ ಟ್ರಂಪ್ ಕಾರ್ಡ್ ಆಗಿದೆ. ಭಾರತದ ಸಂವಿಧಾನವನ್ನು ಹಾನಿಗೊಳಿಸುವ ಮೂಲಕ ಬಿಜೆಪಿ ತಮ್ಮ ಪಕ್ಷದ ಅಡಿಪಾಯವನ್ನು ಬಲಪಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
2011ರ ಜನಗಣತಿಯ ದತ್ತಾಂಶದ ಆಧಾರದ ಮೇಲೆ ಡಿಲಿಮಿಟೇಶನ್ ಆಯೋಗವು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಬಗ್ಗೆ ಮಸೂದೆ ಹೇಳುತ್ತದೆ. ಇದು ಮೇಲ್ನೋಟಕ್ಕೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಇದನ್ನು ಎಚ್ಚರಿಕೆಯಿಂದ ಓದಿದಾಗ ನಿಜವಾದ ಅರ್ಥ ಮುನ್ನೆಲೆಗೆ ಬರುತ್ತದೆ. ಇದು ರಾಜಕೀಯದ ವಾಸನೆ ಬರುತ್ತಿದೆ ಎಂದಿದ್ದಾರೆ.
ಈಗಿರುವ 543 ಲೋಕಸಭಾ ಸ್ಥಾನಗಳಲ್ಲೇ ಮೀಸಲಾತಿ ಯಾಕೆ ನೀಡಬಾರದು ಎಂದು ಪ್ರಶ್ನಿಸಿರುವ ಅವರು, ಪ್ರಧಾನಿಯವರು ಈ ಐತಿಹಾಸಿಕ ಹೆಜ್ಜೆಯನ್ನು ಪ್ರಾಮಾಣಿಕತೆಯಿಂದ ಕೈಗೊಂಡಿದ್ದರೆ, ಇಡೀ ಸದನವು ಅದನ್ನು ಬೆಂಬಲಿಸುತ್ತಿತ್ತು. ಡಿಲಿಮಿಟೇಶನ್ ಆಯೋಗದ ಮೂವರು ಸದಸ್ಯರು ರಾಜ್ಯಗಳ ಭವಿಷ್ಯ ಮತ್ತು ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯವನ್ನು ನಿರ್ಧರಿಸುತ್ತಾರೆ ಎಂಬುದು ಸರ್ಕಾರ ಮತ್ತೊಮ್ಮೆ ಜನರನ್ನು ಮೋಸಗೊಳಿಸಿ, ದೇಶದ ಸಮಗ್ರತೆಯ ಮೇಲೆ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).