ರಾಖಿ ಸಾವಂತ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಕಂಗನಾ ರಣಾವತ್​ ಪ್ರತಿಕ್ರಿಯೆ 
ದೇಶ

‘ಸ್ವೀಪರ್ ಕೆಲಸಕ್ಕೂ ಪ್ರತಿಭೆ ಬೇಕು’..: ರಾಖಿ ಸಾವಂತ್‌ ವಿವಾದಾತ್ಮಕ ಹೇಳಿಕೆ; ಕಂಗನಾ ಖಡಕ್​ ಕೌಂಟರ್​! Kangana Ranaut

ಮುಂಬೈ: ಬಾಲಿವುಡ್‌ನ ವಿವಾದಗಳ ರಾಣಿ ಎಂದೇ ಕರೆಯಲ್ಪಡುವ ರಾಖಿ ಸಾವಂತ್ ಮತ್ತೊಮ್ಮೆ ತಮ್ಮ ಬಾಯ್ಚಪಲದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಪಾಡ್‌ಕಾಸ್ಟ್​ವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಂಸದೆ ಕಂಗನಾ ರಣಾವತ್ (Kangana Ranaut)​ ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕುರಿತು ರಾಖಿ ಸಾವಂತ್ ನೀಡಿದ ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆಗಳು ಈಗ ತೀವ್ರ ವಿವಾದಕ್ಕೆ ಕಾರಣವಾಗಿವೆ. 
ರಾಖಿ ಅವರ ಈ ಕೀಳು ಮಟ್ಟದ ಟೀಕೆಗೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್​ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ತಿರುಗೇಟು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಜಗಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ರಾಖಿ ಸಾವಂತ್ ಆಡಿದ ಆ ವಿವಾದಾತ್ಮಕ ಮಾತುಗಳೇನು?

ಅತಿಥಿಯಾಗಿ ಭಾಗವಹಿಸಿದ್ದ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ರಾಖಿ ಸಾವಂತ್, ಪ್ರಧಾನಿ ಮೋದಿ ಹಾಗೂ ಕಂಗನಾ ಮತ್ತು ಸ್ಮೃತಿ ಇರಾನಿ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಾ ಅತಿರೇಕದ ಹೇಳಿಕೆಗಳನ್ನು ನೀಡಿದರು.
ನಿರೂಪಕರು ಹಿಂದೆ ತಾವು ಪ್ರಧಾನಿ ಮೋದಿಯವರಲ್ಲಿ ರಾಜಕೀಯ ಟಿಕೆಟ್ ಕೇಳಿದ್ದನ್ನು ನೆನಪಿಸಿದಾಗ, ನಾನೇ ಕಮಲ, ನಾನು ಹುಟ್ಟಿದ್ದೇ ಕೆಸರಿನಲ್ಲಿ ಎಂದು ಹಾರಿಕೆ ಉತ್ತರ ನೀಡಿದ ರಾಖಿ, ಬಳಿಕ ಮಿತಿ ಮೀರಿದ್ದಾರೆ. ಮೋದಿ ಜಿ ಯಾಕೆ ಇಲ್ಲಿ-ಅಲ್ಲಿ ನೋಡುತ್ತಿದ್ದಾರೆ? ಕಂಗನಾರಿಂದ ಅವರಿಗೆ ಮೂಳೆಗಳ ಹೊರತಾಗಿ ಇನ್ನೇನು ಸಿಗುತ್ತದೆ? ಮೋದಿ ಜಿ, ಈ ಸ್ಮೃತಿ, ಕಂಗನಾ ಮತ್ತು ಇತರ ಮಹಿಳೆಯರು ನಿಮಗೆ ಏನು ನೀಡಿದ್ದಾರೆಂದು ಅವರನ್ನು ಸಚಿವರನ್ನಾಗಿ ಮಾಡಿದ್ದೀರಿ? ಅವರು ನಿಮಗೆ ಏನು ನೀಡಿದ್ದಾರೋ, ಅದನ್ನು ನಾನೂ ನೀಡಬಲ್ಲೆ ಎಂದು ದ್ವಂದ್ವಾರ್ಥದಲ್ಲಿ ಮಾತನಾಡಿದ್ದಾರೆ. 
ನಿರೂಪಕರು ಇದರ ಅರ್ಥವೇನೆಂದು ಕೇಳಿದಾಗ, ಜಾರಿಕೊಳ್ಳಲು ಪ್ರಯತ್ನಿಸಿದ ರಾಖಿ, ಪ್ರೀತಿ! ಅಪಾರ ಗೌರವ! ಎಂದು ಸನ್ನೆ ಮಾಡುತ್ತಾ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ರಾಖಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಕಂಗನಾ ರಣಾವತ್​ ವಾಗ್ದಾಳಿ: ಸ್ವೀಪರ್ ಕೆಲಸಕ್ಕೂ ಯೋಗ್ಯತೆ ಬೇಕು!

ರಾಖಿ ಸಾವಂತ್ ಅವರ ಈ ಅಸಭ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಂಗನಾ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ರಾಖಿಗೆ ತಕ್ಕೇಟು ನೀಡಿದ್ದಾರೆ. ನೇರವಾಗಿ ರಾಖಿ ಹೆಸರು ಪ್ರಸ್ತಾಪಿಸದಿದ್ದರೂ, ಯಶಸ್ವಿ ಮಹಿಳೆಯರ ವಿರುದ್ಧ ಅಸೂಯೆ ಪಡುವವರ ವಿರುದ್ಧ ಕಿಡಿಕಾರಿದ್ದಾರೆ.
ಅವರು ಮಾತ್ರವಲ್ಲ, ಯಶಸ್ವಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ತಮ್ಮ ಅಸೂಯೆ, ವೈಫಲ್ಯ ಮತ್ತು ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳಲು ಪ್ರಯತ್ನಿಸುವ ಅನೇಕ ವಿಫಲ ಹಾಗೂ ಹತಾಶ ಮನಸ್ಥಿತಿಯ ಜನರಿದ್ದಾರೆ. ಸಾರ್ವಜನಿಕವಾಗಿ ಚಾರಿತ್ರ್ಯ ಹರಣ ಮಾಡುವ ಇಂತಹ ಪ್ರವೃತ್ತಿಗೆ ಬಲಿಯಾಗುವುದನ್ನು ನಾವು ನಿಲ್ಲಿಸಬೇಕು ಎಂದು ಕಂಗನಾ ಬರೆದುಕೊಂಡಿದ್ದಾರೆ.
ಯಶಸ್ಸಿಗಾಗಿ ನೀವು ಎಲ್ಲವನ್ನೂ ಮಾಡಲು ಸಿದ್ಧರಿರಬಹುದು, ಆದರೆ ಒಂದು ವಿಷಯ ಗೊತ್ತೇ? ದುರದೃಷ್ಟವಶಾತ್, ಯಾರಿಗೂ ನಿಮ್ಮಿಂದ ಏನೂ ಬೇಕಾಗಿಲ್ಲ. ನೀವು ಮಾಡಿದ ಯಾವುದೇ ಸಹಾಯ ಅಥವಾ ಉಪಕಾರಗಳು ನಿಮಗೆ ಕನಿಷ್ಠ ಕಸಗುಡಿಸುವ (ಸ್ವೀಪರ್)  ಕೆಲಸವನ್ನೂ ತಂದುಕೊಡಲಿಲ್ಲ; ಅದಕ್ಕೂ ಕೂಡ ಸ್ವಲ್ಪ ಗುಣಮಟ್ಟ ಮತ್ತು ಪ್ರತಿಭೆ ಬೇಕಾಗುತ್ತದೆ. ಹಾಗಾಗಿ ಸುಮ್ಮನೆ ಕುಳಿತುಕೊಂಡು ನನ್ನ ರೀಲ್ಸ್ ನೋಡಿ ಅಳುತ್ತಲೇ ಇರಿ ಎಂದು ಕಂಗನಾ ತೀವ್ರ ಪದಗಳಲ್ಲಿ ಜಾಡಿಸಿದ್ದಾರೆ, (ಏಜೆನ್ಸೀಸ್​).