ತನ್ನ ವಿರುದ್ಧದ ಯುದ್ಧಕ್ಕೆ ಯುರೋಪ್ ತಾನೇ ಹಣ ನೀಡುತ್ತಿದೆ: ಭಾರತದ ಮೂಲಕ ರಷ್ಯಾ ತೈಲ ಖರೀದಿ ಬಗ್ಗೆ ಬೆಸೆಂಟ್ ಕಿಡಿ 
ದೇಶ

ತನ್ನ ವಿರುದ್ಧದ ಯುದ್ಧಕ್ಕೆ ಯುರೋಪ್ ತಾನೇ ಹಣ ನೀಡುತ್ತಿದೆ: ಭಾರತದ ಮೂಲಕ ರಷ್ಯಾ ತೈಲ ಖರೀದಿ ಬಗ್ಗೆ ಬೆಸೆಂಟ್ ಕಿಡಿ | Scott Bessent

ನ್ಯೂಯಾರ್ಕ್: ರಷ್ಯಾ ಮತ್ತು ಯುಕ್ರೇನ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್(Scott Bessent)ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಸಂಚಲನಾತ್ಮಕ ಆರೋಪ ಮಾಡಿದ್ದಾರೆ. ಭಾರತದಿಂದ ಸಂಸ್ಕರಿಸಿದ ರಷ್ಯಾ ತೈಲ ಉತ್ಪನ್ನಗಳನ್ನು ಖರೀದಿಸುವ ಮೂಲಕ ಯುರೋಪ್ ತನ್ನ ವಿರುದ್ಧದ ಯುದ್ಧಕ್ಕೆ ತಾನೇ ಹಣಕಾಸಿನ ನೆರವು ನೀಡುತ್ತಿದೆ ಎಂದು ಗುಡುಗಿದ್ದಾರೆ.

ಭಾರತದ ಮೇಲೆ ಅಮೆರಿಕದ ಸುಂಕದ ಬರೆ

ಈ ಬಗ್ಗೆ ಭಾನುವಾರ ಎಬಿಸಿ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್, ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಂಡಿದೆ ಎಂದು ನೆನಪಿಸಿದ್ದಾರೆ. ರಷ್ಯಾ ತೈಲವನ್ನು ಖರೀದಿಸಿದ್ದಕ್ಕಾಗಿ ನಾವು ಭಾರತದ ಮೇಲೆ ಶೇ. 25ರಷ್ಟು ಸುಂಕವನ್ನು ವಿಧಿಸಿದ್ದೇವೆ. ಆದರೆ ಕಳೆದ ವಾರ ಏನಾಯಿತು ಗೊತ್ತೇ? ಯುರೋಪಿಯನ್ನರು ಭಾರತದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಮೇಲಿನ ಸುಂಕ ಮತ್ತು ಯಶಸ್ಸು

ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕಾಗಿ ನಾವು ಅವರ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು (ದಂಡಾತ್ಮಕ ಸುಂಕ) ವಿಧಿಸಿದ್ದೆವು. ಇಂದು ನಾನು ಹೆಮ್ಮೆಯಿಂದ ಹೇಳಬಲ್ಲೆ, ಅಮೆರಿಕದ ಈ ಕಠಿಣ ಕ್ರಮವು ದೊಡ್ಡ ಯಶಸ್ಸು ಕಂಡಿದೆ. ಭಾರತದ ಸಂಸ್ಕರಣಾಗಾರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದು ಸುಮಾರು ಕುಸಿತದ ಹಂತಕ್ಕೆ ತಲುಪಿದೆ. ಇದು ನಮ್ಮ ಮಾರುಕಟ್ಟೆ ತಂತ್ರಕ್ಕೆ ಸಿಕ್ಕ ಜಯ ಎಂದು ಬೆಸೆಂಟ್​ ಹೇಳಿದ್ದಾರೆ.

ಸುಂಕ ಕಡಿತದ ಸುಳಿವು

ಪ್ರಸ್ತುತ ಶೇ. 25ರಷ್ಟು ರಷ್ಯಾ ತೈಲ ಸುಂಕವು ಜಾರಿಯಲ್ಲಿದೆ. ಆದರೆ, ಭಾರತವು ತನ್ನ ಇಂಧನ ಮೂಲಗಳನ್ನು ಬದಲಾಯಿಸುತ್ತಿರುವುದನ್ನು ಗಮನಿಸಿದರೆ, ಈ ಸುಂಕಗಳನ್ನು ತೆಗೆದುಹಾಕಲು ಒಂದು ಸ್ಪಷ್ಟವಾದ ಮಾರ್ಗವಿದೆ ಎಂದು ನಾನು ಭಾವಿಸುತ್ತೇನೆ. ಭಾರತದೊಂದಿಗೆ ನಮ್ಮ ವ್ಯಾಪಾರ ಮಾತುಕತೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಯುರೋಪ್‌ಗೆ ಕಟು ಟೀಕೆ: ಇದು ಮೂರ್ಖತನದ ಪರಮಾವಧಿ

ನಮ್ಮ ಯುರೋಪಿಯನ್ ಮಿತ್ರರಾಷ್ಟ್ರಗಳು ಭಾರತದ ಮೇಲೆ ಸುಂಕ ವಿಧಿಸಲು ನಿರಾಕರಿಸಿದವು. ಯಾಕೆಂದರೆ ಅವರಿಗೆ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ತವಕವಿತ್ತು. ಆದರೆ ಇಲ್ಲಿರುವ ವ್ಯಂಗ್ಯವೆಂದರೆ, ಭಾರತವು ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ ಡೀಸೆಲ್ ಅಥವಾ ಪೆಟ್ರೋಲ್ ಆಗಿ ಯುರೋಪ್‌ಗೆ ಮಾರಾಟ ಮಾಡುತ್ತಿದೆ ಎಂದಿದ್ದಾರೆ.
ಯುರೋಪ್‌ನ ಈ ವರ್ತನೆ ಮೂರ್ಖತನದಿಂದ ಕೂಡಿದೆ. ಭಾರತದ ಮೂಲಕ ರಷ್ಯಾ ತೈಲ ಉತ್ಪನ್ನಗಳನ್ನು ಖರೀದಿಸುವ ಮೂಲಕ ಯುರೋಪಿಯನ್ನರು ತಮ್ಮ ವಿರುದ್ಧದ ಯುದ್ಧಕ್ಕೆ ತಾವೇ ಹಣಕಾಸಿನ ನೆರವು ನೀಡುತ್ತಿದ್ದಾರೆ. ಇದು ಅವರ ವಿರುದ್ಧವೇ ಅವರು ಹಣ ಹೂಡುತ್ತಿರುವಂತೆ ಕಾಣುತ್ತಿದೆ ಬೆಸೆಂಟ್ ಕಿಡಿಕಾರಿದ್ದಾರೆ.

ಹೊಸ ಮಸೂದೆಯ ಎಚ್ಚರಿಕೆ

ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ. 500ರಷ್ಟು ಸುಂಕ ವಿಧಿಸುವ ಮಸೂದೆಯನ್ನು ತಂದಿದ್ದಾರೆ. ಅಧ್ಯಕ್ಷ ಟ್ರಂಪ್ ಅವರಿಗೆ ಈ ಅಧಿಕಾರವನ್ನು ನೀಡಲು ಸೆನೆಟ್ ಉತ್ಸುಕವಾಗಿದೆ. ನಾವು ರಷ್ಯಾದ ಆದಾಯದ ಮೂಲಗಳನ್ನು ಸಂಪೂರ್ಣವಾಗಿ ಕತ್ತರಿಸಲು ಬದ್ಧರಾಗಿದ್ದೇವೆ ಎಂದು ಬೆಸೆಂಟ್​ ತಿಳಿಸಿದ್ದಾರೆ.

ಅಮೆರಿಕದ ತ್ಯಾಗ ಮತ್ತು ಟ್ರಂಪ್ ಪ್ರಯತ್ನ

ರಷ್ಯಾ-ಯುಕ್ರೇನ್ ಸಂಘರ್ಷವನ್ನು ಕೊನೆಗಾಣಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಸಂಧಾನದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಬೆಸೆಂಟ್ ಇದೇ ವೇಳೆ ತಿಳಿಸಿದರು. ಈ ಯುದ್ಧದ ವಿಚಾರದಲ್ಲಿ ಯುರೋಪಿಯನ್ನರಿಗಿಂತ ಅಮೆರಿಕ ಹೆಚ್ಚು ತ್ಯಾಗ ಮಾಡಿದೆ. ಆದರೆ ಯುರೋಪ್ ತನ್ನ ಆರ್ಥಿಕ ಹಿತಾಸಕ್ತಿಗಾಗಿ ರಷ್ಯಾ ಮೂಲದ ತೈಲ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವುದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ.
ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (FTA) ಘೋಷಣೆಯಾಗುತ್ತಿರುವ ಹೊತ್ತಿನಲ್ಲೇ ಅಮೆರಿಕದ ಈ ಹೇಳಿಕೆ ಹೊರಬಿದ್ದಿರುವುದು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಇದು ಮುಂಬರುವ ದಿನಗಳಲ್ಲಿ ಭಾರತ-ಅಮೆರಿಕ ವ್ಯಾಪಾರ ಸಂಬಂಧದ ಮೇಲೆಯೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ,(ಏಜೆನ್ಸೀಸ್).