ಸಾಂದರ್ಭಿಕ ಚಿತ್ರ  
ದೇಶ

ಎಥನಾಲ್ ಕಂಪನ! ವಾಹನ ಸವಾರರಲ್ಲಿ ಹೆಚ್ಚಿದ ಆತಂಕ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಡಿಯೋಗಳ ಸರಣಿಯೇ ವೈರಲ್ ಆಗುತ್ತಿದೆ. ಕೆಲವೆಡೆ ಪೆಟ್ರೋಲ್ ಗುಲಾಬಿ ಬಣ್ಣದಲ್ಲಿ ಕಾಣಿಸಿದರೆ, ಇನ್ಯಾರೋ ಕಾರಿನ ಪೆಟ್ರೋಲ್ ಟ್ಯಾಂಕ್​ಗೆ ಇರುವೆಗಳು ಅಂಟಿಕೊಂಡಿರುವುದನ್ನು ತೋರಿಸುತ್ತಿದ್ದಾರೆ, ಮತ್ತೊಂದೆಡೆ ಪೆಟ್ರೋಲ್ ಜತೆ ನೀರು ಮಿಶ್ರಣವಾಗಿರುವ ದೃಶ್ಯಗಳು ಹರಿದಾಡುತ್ತಿವೆ. ಈ ಎಲ್ಲ ವಿಡಿಯೋಗಳ ಹಿಂದೆ ಕೇಳಿಬರುತ್ತಿರುವ ಹೆಸರು ‘ಎಥನಾಲ್’. ಈ ವಿಡಿಯೋಗಳ ಅಸಲಿಯತ್ತು ಮತ್ತು ಸತ್ಯಾಸತ್ಯತೆ ಶಂಕಾಸ್ಪದವಾಗಿದ್ದರೂ, ದೇಶದಲ್ಲಿ ಎಥನಾಲ್ ಕುರಿತ ಚರ್ಚೆ ಮಾತ್ರ ತೀವ್ರವಾಗಿದೆ. ಅಷ್ಟಕ್ಕೂ ಸರ್ಕಾರ ಪೆಟ್ರೋಲ್​ನಲ್ಲಿ ಎಥನಾಲ್ ಮಿಶ್ರಣ ಮಾಡಲು ಇಷ್ಟೊಂದು ಹಠಕ್ಕೆ ಬಿದ್ದಿರುವುದೇಕೆ? ಇದರಿಂದಾಗುವ ಲಾಭ-ನಷ್ಟಗಳೇನು? ಇದರಿಂದ ವಾಹನಗಳ ಇಂಜಿನ್ ಮೇಲೆ ನಿಜಕ್ಕೂ ದುಷ್ಪರಿಣಾಮ ಆಗುತ್ತದೆಯೇ? ಮುಂದಿನ ಹಾದಿ ಹೇಗಿರಲಿದೆ? ಈ ಕುರಿತ ವಿಶ್ಲೇಷಣೆ ಇಲ್ಲಿದೆ.

ಎಥನಾಲ್ ಎಂಬುದು ಒಂದು ರೀತಿಯ ಆಲ್ಕೋಹಾಲ್ (ಮದ್ಯಸಾರ) ಆಗಿದ್ದು, ಇದನ್ನು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ರಾಗಿ, ಮುಗ್ಗಾದ ಹಳೆಯ ಅಕ್ಕಿ ಮುಂತಾದ ಕೃಷಿ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಇದು ಸುಲಭವಾಗಿ ಉರಿಯುವಂತಹ (ಊಚಞಞಚಚ್ಝಿಛಿ) ಗುಣವನ್ನು ಹೊಂದಿದೆ. ಶುದ್ಧ ಪೆಟ್ರೋಲ್​ಗೆ ಪರ್ಯಾಯವಾಗಿ ಅಥವಾ ಅದರೊಂದಿಗೆ ಬೆರೆಸಿ ಇಂಧನವಾಗಿ ಬಳಸುವ ಕುರಿತು ಜಾಗತಿಕ ಮಟ್ಟದಲ್ಲಿ ಹಲವು ದಶಕಗಳಿಂದ ಅಧ್ಯಯನಗಳು ನಡೆದಿವೆ. ಬ್ರೆಜಿಲ್​ನಂತಹ ಕೆಲವು ದೇಶಗಳಲ್ಲಿ ಇದು ಯಶಸ್ವಿಯೂ ಆಗಿದೆ.

ಭಾರತದಲ್ಲಿಯೂ ಇದರ ಫಲಿತಾಂಶಗಳು ಆಶಾದಾಯಕವಾಗಿವೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದೆ. ಇಂಧನ ಸ್ವಾವಲಂಬನೆಯತ್ತ ಹೆಜ್ಜೆ ಇಡುವ ಉದ್ದೇಶದಿಂದ ಸರ್ಕಾರ 2001ರಲ್ಲಿ ಪ್ರಾಯೋಗಿಕ ಯೋಜನೆಯೊಂದನ್ನು ಆರಂಭಿಸಿತು. ಕೆಲವು ಆಯ್ದ ಪೆಟ್ರೋಲ್ ಬಂಕ್​ಗಳಲ್ಲಿ ಶೇ. 5ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಪೂರೈಸಲಾಯಿತು. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬೆನ್ನಲ್ಲೇ, ಸರ್ಕಾರ 2003ರಲ್ಲಿ ದೇಶಾದ್ಯಂತ ಅಧಿಕೃತವಾಗಿ ಎಥನಾಲ್ ಬ್ಲೆಂಡಿಂಗ್ ಪ್ರೋಗ್ರಾಂ ಪ್ರಾರಂಭಿಸಿತು.

ಅಂದಿನಿಂದ ಇಂದಿನವರೆಗೂ ಈ ಮಿಶ್ರಣದ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸುತ್ತ ಬರಲಾಗುತ್ತಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಎಥನಾಲ್ ಮಿಶ್ರಣದ ಪ್ರಮಾಣ ದೇಶಾದ್ಯಂತ ಎಲ್ಲೆಡೆ ಒಂದೇ ರೀತಿಯಾಗಿ ಇರುವುದಿಲ್ಲ; ಆಯಾ ಪ್ರದೇಶದ ಎಥನಾಲ್ ಲಭ್ಯತೆ ಮತ್ತು ಪೂರೈಕೆ ಜಾಲದ ಆಧಾರದ ಮೇಲೆ ಇದು ಬದಲಾಗುತ್ತದೆ. 2025-26ರ ವೇಳೆಗೆ ಪೆಟ್ರೋಲ್​ನಲ್ಲಿ ಶೇ. 20ರಷ್ಟು ಎಥನಾಲ್ ಮಿಶ್ರಣ (ಇ20) ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು. ಸದ್ಯ ರಾಷ್ಟ್ರ ಮಟ್ಟದಲ್ಲಿ ಎಥನಾಲ್ ಮಿಶ್ರಣದ ಸರಾಸರಿ ಪ್ರಮಾಣ ಶೇ. 20 ತಲುಪುವ ಮೂಲಕ ಸರ್ಕಾರ ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ.

ಸರ್ಕಾರದ ಹಠವೇಕೆ?

ಎಥನಾಲ್ ಮಿಶ್ರಣದ ಹಿಂದೆ ಸರ್ಕಾರ ಹಲವು ಪ್ರಮುಖ ಆರ್ಥಿಕ, ಕೃಷಿ ಮತ್ತು ಭೌಗೋಳಿಕ-ರಾಜಕೀಯ ಲೆಕ್ಕಾಚಾರಗಳನ್ನು ಹೊಂದಿದೆ. ಪರಿಸರದ ಕಾಳಜಿ ಮಾತ್ರವಲ್ಲದೆ, ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಯಲ್ಲಿಡುವ ಉದ್ದೇಶವೂ ಇದರ ಹಿಂದಿದೆ. ವಾಹನ ಸವಾರರ ಆಕ್ಷೇಪಗಳ ನಡುವೆಯೂ ಸರ್ಕಾರ ಈ ಯೋಜನೆಯನ್ನು ತೀವ್ರಗತಿಯಲ್ಲಿ ಜಾರಿಗೊಳಿಸಲು ಪ್ರಮುಖವಾಗಿ ಮೂರು ಬಲವಾದ ಕಾರಣಗಳನ್ನು ನೀಡುತ್ತದೆ.

1. ವಿದೇಶಿ ವಿನಿಮಯ ಉಳಿತಾಯ, ಇಂಧನ ಭದ್ರತೆ: ಭಾರತ ತನ್ನ ಕಚ್ಚಾ ತೈಲ ಅಗತ್ಯದ ಶೇ. 85ರಷ್ಟನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಂತಹ ವಲಯಗಳಲ್ಲಿ ಭೌಗೋಳಿಕ- ರಾಜಕೀಯ ಉದ್ವಿಗ್ನತೆ, ಸಮರ ಅಥವಾ ಆರ್ಥಿಕ ಬಿಕ್ಕಟ್ಟು ತಲೆದೋರಿದಾಗಲೆಲ್ಲ ಜಾಗತಿಕ ತೈಲ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿ, ಕಚ್ಚಾ ತೈಲದ ಬೆಲೆ ಗಗನಕ್ಕೇರುತ್ತದೆ. ಇದರಿಂದ ದೇಶದ ಹಣದುಬ್ಬರದ ಮೇಲೆ ತೀವ್ರ ಹೊರೆ ಬೀಳುತ್ತದೆ. ಪೆಟ್ರೋಲ್​ನಲ್ಲಿ ಎಥನಾಲ್ ಬೆರೆಸುವುದರಿಂದ ತೈಲ ಆಮದು ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ವಾರ್ಷಿಕ ಸಾವಿರಾರು ಕೋಟಿ ರೂ. ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ಇದು ದೇಶದ ಆರ್ಥಿಕತೆಗೆ ಬಹುದೊಡ್ಡ ರಕ್ಷಾಕವಚವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ಪ್ರಭಾವವನ್ನು ತಗ್ಗಿಸುತ್ತದೆ.

2. ಕೃಷಿ ವಲಯದ ಆರ್ಥಿಕತೆಗೆ ಚೈತನ್ಯ: ಎಥನಾಲ್ ಉತ್ಪಾದನೆಯಿಂದ ನೇರ ಮತ್ತು ಅತಿ ದೊಡ್ಡ ಲಾಭ ಪಡೆಯುತ್ತಿರುವುದು ಕೃಷಿ ವಲಯ. ಕಬ್ಬು, ಮೆಕ್ಕೆಜೋಳ ಮುಂತಾದವುಗಳನ್ನು ಬಳಸಿ ಎಥನಾಲ್ ತಯಾರಿಸುವುದರಿಂದ, ಕೃಷಿ ವಲಯಕ್ಕೆ ನೇರ ಲಾಭ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಅಥವಾ ಹವಾಮಾನ ವೈಪರೀತ್ಯಗಳಿಂದ ಕಂಗೆಡುವ ರೈತರಿಗೆ ಎಥನಾಲ್ ಉತ್ಪಾದನೆ ಒಂದು ಭರವಸೆಯ ಪರ್ಯಾಯ ಆದಾಯ ಮೂಲವಾಗಿ ಪರಿಣಮಿಸಿದೆ. ಸಕ್ಕರೆ ಕಾರ್ಖಾನೆಗಳು ತಮ್ಮ ಹೆಚ್ಚುವರಿ ಕಬ್ಬನ್ನು ಹಾಗೂ ಹಾಳಾದ ಧಾನ್ಯಗಳನ್ನು ಎಥನಾಲ್ ಉತ್ಪಾದನೆಗೆ ಬಳಸುವುದರಿಂದ ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿದೆ. ಇದು ಪರೋಕ್ಷವಾಗಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತಿದೆ.

3. ಪರಿಸರ ರಕ್ಷಣೆ, ಮಾಲಿನ್ಯ ನಿಯಂತ್ರಣ: ಶುದ್ಧ ಪೆಟ್ರೋಲ್​ಗೆ ಹೋಲಿಸಿದರೆ ಎಥನಾಲ್ ಆಮ್ಲಜನಕವನ್ನು ಹೊಂದಿರುವುದರಿಂದ ಇಂಧನ ಉತ್ತಮವಾಗಿ ದಹನಗೊಳ್ಳುತ್ತದೆ. ಇದರಿಂದಾಗಿ ವಾತಾವರಣಕ್ಕೆ ಸೇರುವ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್​ಗಳಂತಹ ಹಾನಿಕಾರಕ ಅನಿಲಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಭಾರತ ಮಾಡಿಕೊಂಡಿರುವ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಪೂರೈಸಲು ಎಥನಾಲ್ ಬಳಕೆ ಅನಿವಾರ್ಯವಾಗಿದೆ.

ಮುಂದೇನು?

ಒಂದೆಡೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದರೂ, ಸರ್ಕಾರ ತನ್ನ ನೀತಿಯಿಂದ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಬದಲಾಗಿ ಭವಿಷ್ಯದ ವಾಹನ ಮಾರುಕಟ್ಟೆಯನ್ನು ಇದಕ್ಕೆ ಸಜ್ಜುಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ವಾಹನಗಳನ್ನು ‘ಫ್ಲೆಕ್ಸ್-ಫ್ಯುಯೆಲ್’ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ವಾಹನ ತಯಾರಕ ಕಂಪನಿಗಳು ವಿನ್ಯಾಸಗೊಳಿಸುತ್ತಿವೆ. ಹೀಗಾಗಿ ಹೊಸ ಬಿಎಸ್-6 ಹಂತದ ವಾಹನಗಳ ಎಂಜಿನ್ ಮತ್ತು ಬಿಡಿಭಾಗಗಳು ಶೇ. 20ರಷ್ಟು ಎಥನಾಲ್ ಮಿಶ್ರಣವನ್ನು (ಇ20) ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದರಿಂದ ಹೊಸ ವಾಹನಗಳಿಗೆ ಹೆಚ್ಚಿನ ಹಾನಿಯಾಗುವುದಿಲ್ಲ ಎಂಬುದು ಸರ್ಕಾರದ ಸ್ಪಷ್ಟನೆ.

ಆದರೆ, ಇಲ್ಲಿ ಎದುರಾಗುವ ಬಹುದೊಡ್ಡ ಪ್ರಶ್ನೆಯೆಂದರೆ ಭಾರತದ ರಸ್ತೆಗಳಲ್ಲಿ ಈಗಾಗಲೇ ಓಡುತ್ತಿರುವ ಕೋಟ್ಯಂತರ ಹಳೆಯ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಕಥೆ ಏನು? ಬಿಎಸ್-4 ಅಥವಾ ಅದಕ್ಕೂ ಹಿಂದಿನ ವಾಹನಗಳ ಎಂಜಿನ್​ಗಳು ಈ ಎಥನಾಲ್ ಮಿಶ್ರಣಕ್ಕೆ ಸಿದ್ಧವಾಗಿಲ್ಲ. ಆ ಕಾಲದ ತಂತ್ರಜ್ಞಾನ ಕೇವಲ ಇ5 ಅಥವಾ ಇ10ಗಷ್ಟೇ ಸೀಮಿತವಾಗಿತ್ತು. ಈಗ ಏಕಾಏಕಿ ಇ20 ಪೆಟ್ರೋಲ್​ಅನ್ನು ಆ ವಾಹನಗಳಿಗೆ ಹಾಕಿದಾಗ ಇಂಜಿನ್ ವೈಫಲ್ಯ ಖಚಿತ. ಈ ಹಳೆಯ ವಾಹನಗಳ ಮಾಲೀಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ, ಅಥವಾ ಅವರಿಗಾಗಿ ಶುದ್ಧ ಪೆಟ್ರೋಲ್ ಲಭ್ಯವಾಗುವಂತೆ ಮಾಡುವಲ್ಲಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಪೆಟ್ರೋಲ್ ಬಂಕ್​ಗಳಲ್ಲಿ ಇಂಧನ ಹಾಕಿಸಿಕೊಳ್ಳುವ ಗ್ರಾಹಕನಿಗೆ ತಾನು ಹಾಕಿಸಿಕೊಳ್ಳುತ್ತಿರುವುದು ಇ10 ಪೆಟ್ರೋಲೋ ಅಥವಾ ಇ20ಯೋ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಇದು ಪಾರದರ್ಶಕತೆಯ ಕೊರತೆಯನ್ನು ಎತ್ತಿತೋರಿಸುತ್ತದೆ.

ಏನೇನು ಸಮಸ್ಯೆ ಆಗುತ್ತಿದೆ?

ಸರ್ಕಾರದ ಉದ್ದೇಶ ಎಷ್ಟೇ ಉದಾತ್ತ ಹಾಗೂ ಲಾಭಕರವಾಗಿದ್ದರೂ, ವಾಸ್ತವದಲ್ಲಿ ಸಾಮಾನ್ಯ ವಾಹನ ಸವಾರರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಎಥನಾಲ್ ಮಿಶ್ರಣದಿಂದ ಇಂಧನದ ಸಾಮರ್ಥ್ಯ ಹಾಳಾಗುತ್ತಿದೆ, ಮೈಲೇಜ್ ತೀವ್ರವಾಗಿ ಕ್ಷೀಣಿಸಿದೆ ಎಂದು ವಾಹನ ಸವಾರರು ದೊಡ್ಡ ಮಟ್ಟದಲ್ಲಿ ದನಿ ಎತ್ತಿದ್ದಾರೆ. ಇದಕ್ಕೆ ವಾಹನ ರಿಪೇರಿ ವಲಯದ ಮೆಕ್ಯಾನಿಕ್​ಗಳು ಮತ್ತು ಆಟೋಮೊಬೈಲ್ ತಜ್ಞರು ಕೂಡ ದನಿಗೂಡಿಸಿದ್ದಾರೆ. ವಾಹನ ಮಾಲೀಕರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು ಹೀಗಿವೆ.

1. ಇಂಧನ ದಕ್ಷತೆ, ಮೈಲೇಜ್ ಕುಸಿತ: ಪೆಟ್ರೋಲ್​ಗಿಂತ ಎಥನಾಲ್ ಕಡಿಮೆ ಶಕ್ತಿ ಸಾಂದ್ರತೆಯನ್ನು ಹೊಂದಿದೆ. ಅಂದರೆ, ಒಂದು ಲೀಟರ್ ಶುದ್ಧ ಪೆಟ್ರೋಲ್ ದಹನವಾದಾಗ ಸಿಗುವ ಶಕ್ತಿಗಿಂತ ಎಥನಾಲ್ ಮಿಶ್ರಿತ ಪೆಟ್ರೋಲ್​ನಿಂದ ಉತ್ಪತ್ತಿಯಾಗುವ ಶಕ್ತಿ ಅಂದಾಜು ಶೇ. 30ರಷ್ಟು ಕಡಿಮೆ ಇರುತ್ತದೆ. ಇದರಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪೆಟ್ರೋಲ್ ದರ 100 ರೂ. ಆಸುಪಾಸಿನಲ್ಲಿದ್ದರೂ, ದುಬಾರಿ ಬೆಲೆ ತೆತ್ತು ಹಾಕಿಸಿದ ಇಂಧನದಲ್ಲಿ ವಾಹನಗಳು ಹಿಂದಿನಷ್ಟು ದೂರ ಕ್ರಮಿಸುತ್ತಿಲ್ಲ ಎಂಬುದು ಸವಾರರ ಪ್ರಮುಖ ದೂರು.

2. ನೀರು ಸೇರಿಕೊಳ್ಳುವುದು, ತುಕ್ಕು ಹಿಡಿಯುವುದು: ಎಥನಾಲ್ ಅತ್ಯಂತ ಹೈಗ್ರೋಸ್ಕೋಪಿಕ್ ಗುಣವನ್ನು ಹೊಂದಿದೆ. ಅಂದರೆ, ಇದು ವಾತಾವರಣದಲ್ಲಿರುವ ತೇವಾಂಶವನ್ನು ಸ್ಪಂಜಿನಂತೆ ವೇಗವಾಗಿ ಹೀರಿಕೊಳ್ಳುತ್ತದೆ. ದ್ವಿಚಕ್ರವಾಹನ ಅಥವಾ ಕಾರುಗಳು ಮಳೆಗಾಲದಲ್ಲಿ ಅಥವಾ ತೇವಾಂಶಭರಿತ ವಾತಾವರಣದಲ್ಲಿ ದೀರ್ಘಕಾಲದವರೆಗೆ ರ್ಪಾಂಗ್​ನಲ್ಲಿ ನಿಂತಿದ್ದರೆ, ಇಂಧನ ಟ್ಯಾಂಕ್​ನೊಳಗಿನ ತೇವಾಂಶವನ್ನು ಎಥನಾಲ್ ಹೀರಿಕೊಳ್ಳುತ್ತದೆ. ತೇವಾಂಶ ಮಿತಿ ಮೀರಿದಾಗ ಎಥನಾಲ್ ಮತ್ತು ನೀರು ಪೆಟ್ರೋಲ್​ನಿಂದ ಬೇರ್ಪಟ್ಟು ಟ್ಯಾಂಕ್​ನ ತಳಭಾಗದಲ್ಲಿ ಶೇಖರವಾಗುತ್ತದೆ. ಎಂಜಿನ್​ಗೆ ಇಂಧನದ ಬದಲು ಈ ನೀರು ಸರಬರಾಜಾದಾಗ ಎಂಜಿನ್ ಸ್ಟಾರ್ಟ್ ಆಗುವುದಿಲ್ಲ. ಇದಲ್ಲದೆ, ತಳದಲ್ಲಿ ನಿಲ್ಲುವ ನೀರು ವಾಹನದ ಲೋಹದ ಟ್ಯಾಂಕ್​ಗೆ ತುಕ್ಕು ಹಿಡಿಸುತ್ತದೆ. ಇದು ಮೆಕ್ಯಾನಿಕ್​ಗಳ ಬಳಿ ವಾಹನಗಳು ಸಾಲುಗಟ್ಟಿ ನಿಲ್ಲಲು ಮತ್ತು ಫ್ಯುಯಲ್ ಪಂಪ್​ಗಳು ಕೆಟ್ಟು ಹೋಗಲು ಪ್ರಮುಖ ಕಾರಣವಾಗಿದೆ.

3. ರಬ್ಬರ್, ಪ್ಲಾಸ್ಟಿಕ್ ಬಿಡಿಭಾಗಗಳ ಸವೆತ: ಹಳೆಯ ವಾಹನಗಳ ಇಂಧನ ಪೈಪ್​ಗಳು, ಫ್ಯೂಯಲ್ ಪಂಪ್​ಗಳು, ಸೀಲ್​ಗಳು ಮತ್ತು ಗ್ಯಾಸ್ಕೆಟ್​ಗಳು ಶುದ್ಧ ಪೆಟ್ರೋಲ್​ಗೆ ಹೊಂದುವಂತೆ ವಿನ್ಯಾಸಗೊಂಡಿರುತ್ತವೆ. ಎಥನಾಲ್ ಒಂದು ದ್ರಾವಕ (ಖಟ್ಝಡಛ್ಞಿಠಿ) ಹಾಗೂ ತುಕ್ಕು ಹಿಡಿಸುವ (ಇಟ್ಟ್ಟಠಜಿಡಛಿ) ಗುಣವನ್ನು ಹೊಂದಿರುವುದರಿಂದ, ಇಂಜಿನ್​ನ ಒಳಗಿರುವ ರಬ್ಬರ್ ಮತ್ತು ಪ್ಲಾಸ್ಟಿಕ್ ಭಾಗಗಳು ಬೇಗನೆ ಒಣಗಿ, ಬಿರುಕು ಬಿಡುತ್ತಿವೆ, ಸವೆಯುತ್ತಿವೆ. ವಾಹನ ರನ್ನಿಂಗ್​ನಲ್ಲಿರುವಾಗಲೇ ಆಫ್ ಆಗುವುದು, ಇಂಧನ ಸೋರಿಕೆ ಆಗುವಂತಹ ಗಂಭೀರ ತಾಂತ್ರಿಕ ದೋಷಗಳು ಹಳೆಯ ವಾಹನಗಳಲ್ಲಿ ವಿಪರೀತವಾಗಿ ಹೆಚ್ಚಾಗುತ್ತಿವೆ.

4. ವೈರಲ್ ವಿಡಿಯೋಗಳ ಹಿಂದಿನ ಸತ್ಯ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಿಗೂ ಈ ವೈಜ್ಞಾನಿಕ ಕಾರಣಗಳೇ ಆಧಾರ. ಎಥನಾಲ್​ಅನ್ನು ಕಬ್ಬು ಮತ್ತಿತರ ಕೃಷಿ ಉತ್ಪನ್ನಗಳನ್ನು ಬಳಸಿ ತಯಾರಿಸುವುದರಿಂದ, ಅದರ ವಾಸನೆಗೆ ಅಥವಾ ಆಕಸ್ಮಿಕವಾಗಿ ಉಳಿದುಕೊಳ್ಳುವ ಸಿಹಿಯ ಅಂಶಕ್ಕೆ ಇರುವೆಗಳು ಆಕರ್ಷಿತವಾಗುತ್ತಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಹಾಗೆಯೇ, ತೇವಾಂಶ ಹೀರಿಕೊಂಡು ಟ್ಯಾಂಕ್ ತಳದಲ್ಲಿ ನಿಲ್ಲುವ ನೀರನ್ನು ವಿಡಿಯೋ ಮಾಡುವ ಕೆಲವರು ‘ಪೆಟ್ರೋಲ್ ಬಂಕ್ ಮಾಲೀಕರೇ ನೀರು ಬೆರೆಸುತ್ತಿದ್ದಾರೆ’ ಎಂದು ಭಾವಿಸುತ್ತಿದ್ದಾರೆ. ಗುಲಾಬಿ ಬಣ್ಣದ ಪೆಟ್ರೋಲ್ ಕಾಣಿಸಿಕೊಳ್ಳುವುದಕ್ಕೂ ಇಂಧನದ ರಾಸಾಯನಿಕ ಪ್ರತಿಕ್ರಿಯೆಗಳು ಕಾರಣವಾಗುತ್ತಿವೆ.