Udhayanidhi Stalin | ಸನಾತನ ಧರ್ಮ ನಿರ್ಮೂಲನೆಯಾಗಲಿ ಎಂದ ಉದಯನಿಧಿ
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ಸನಾತನ ಧರ್ಮದ ಕುರಿತಾದ ವಿವಾದ ಕಿಡಿ ಹೊತ್ತಿಸಿದ್ದು, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin), ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸಮ್ಮುಖದಲ್ಲೇ ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ವೇಳೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೌನವಹಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್ ತಮ್ಮ ಕೈಗಳನ್ನು ಜೋಡಿಸಿ ಕುಳಿತಿದ್ದು, ವಿರೋಧ ಪಕ್ಷದ ನಾಯಕನ ಹೇಳಿಕೆಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೆ, ವಿರೋಧವನ್ನೂ ವ್ಯಕ್ತಪಡಿಸದೆ ಮೌನಕ್ಕೆ ಶರಣಾದದ್ದು ರಾಜಕೀಯ ವಲಯದಲ್ಲಿ ಹಲವು ರೀತಿಯ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಕಠಿಣ ಕ್ರಮದ ಆತಂಕವಿಲ್ಲ...
ಈ ಹಿಂದೆ ಸನಾತನ ಧರ್ಮವನ್ನು ಸೊಳ್ಳೆ, ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ಉದಯನಿಧಿ ಸ್ಟಾಲಿನ್, ಈಗ ಮತ್ತೆ ಅಂತಹದ್ದೇ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬಾರಿ ಉದಯನಿಧಿ ತಮ್ಮ ಹೇಳಿಕೆಗಳಿಂದಾಗಿ ತಕ್ಷಣದ ಕಾನೂನು ಕ್ರಮಗಳನ್ನು ಎದುರಿಸುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತೀಯ ಸಂವಿಧಾನದ 194ನೇ ವಿಧಿಯ ಪ್ರಕಾರ, ಶಾಸಕರು ಸದನದ ಒಳಗೆ ಮಾತನಾಡುವ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ವಿನಾಯಿತಿ ಮತ್ತು ವಾಕ್ ಸ್ವಾತಂತ್ರ್ಯದ ರಕ್ಷಣೆ ಇರುತ್ತದೆ. ಇದು ಅವರನ್ನು ನ್ಯಾಯಾಲಯದ ವಿಚಾರಣೆಗಳಿಂದ ರಕ್ಷಿಸುತ್ತದೆ.
ಬಿಜೆಪಿ ನಾಯಕರು ಹೇಳೋದೇನು..?
ಇದೇ ಅಂಶವನ್ನು ಪ್ರಸ್ತಾಪಿಸಿರುವ ಬಿಜೆಪಿಯ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ, ಉದಯನಿಧಿ ಶಾಸಕಾಂಗದ ರಕ್ಷಣೆಯ ಹಿಂದೆ ಅಡಗಿಕೊಂಡು ಲಕ್ಷಾಂತರ ಜನರ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಾರ್ವಜನಿಕವಾಗಿ ಇಂತಹ ಮಾತುಗಳನ್ನಾಡಿದರೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗುತ್ತದೆ ಎಂಬ ಅರಿವಿರುವ ಕಾರಣಕ್ಕಾಗಿಯೇ ಅವರು ಸದನವನ್ನು ತಮ್ಮ ರಾಜಕೀಯ ದುರಹಂಕಾರ ಪ್ರದರ್ಶಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಳವೀಯ ಟೀಕಿಸಿದ್ದಾರೆ.
ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ಕೂಡ ಉದಯನಿಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಇಂತಹ ಸನಾತನ ವಿರೋಧಿ ಭಾಷಣಗಳಿಂದಾಗಿ ತಮಿಳುನಾಡಿನಿಂದ ಡಿಎಂಕೆ ನಿರ್ಮೂಲನೆಯಾಗಿದೆಯೇ ಹೊರತು ಸನಾತನ ಧರ್ಮವಲ್ಲ ಎಂದು ಲೇವಡಿ ಮಾಡಿದ್ದಾರೆ. ಭೂಮಿಯ ಮೇಲೆ ಕೊನೆಯ ಮಾನವ ಉಸಿರಾಡುವವರೆಗೂ ಸನಾತನ ಧರ್ಮದ ಮೌಲ್ಯಗಳು ಜೀವಂತವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ನಾಯಕ ನಾರಾಯಣ್ ತಿರುಪತಿ ಅವರು ಮಾತನಾಡಿ, ಸನಾತನವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದಕ್ಕೇ ಜನರು ಡಿಎಂಕೆಯನ್ನು ಅಧಿಕಾರದಿಂದ ದೂರವಿಟ್ಟಿದ್ದಾರೆ ಎಂಬುದನ್ನು ಉದಯನಿಧಿ ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ. ಒಟ್ಟಾರೆಯಾಗಿ, ವಿಧಾನಸಭೆಯ ಮೊದಲ ದಿನವೇ ಸನಾತನ ಧರ್ಮದ ವಿಚಾರ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ(ಏಜೆನ್ಸೀಸ್).