EPS Mocks Vijay .| ಸಿಎಂ ವಿಜಯ್‌ ಅಮೆರಿಕ ಅಧ್ಯಕ್ಷರಾಗಲಿ!...ಟಿವಿಕೆ ಬೆಂಬಲಿಗರ ವಿಜಯ್‌ ಫಾರ್‌ ಪಿಎಂ ಘೋಷಣೆಗೆ ಪಳನಿಸ್ವಾಮಿ ವ್ಯಂಗ್ಯ 
ದೇಶ

ಸಿಎಂ ವಿಜಯ್‌ ಅಮೆರಿಕ ಅಧ್ಯಕ್ಷರಾಗಲಿ!...ಟಿವಿಕೆ ಬೆಂಬಲಿಗರ ವಿಜಯ್‌ ಫಾರ್‌ ಪಿಎಂ ಘೋಷಣೆಗೆ ಪಳನಿಸ್ವಾಮಿ ವ್ಯಂಗ್ಯ | EPS Mocks Vijay

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸಾರ್ವಜನಿಕ ಸಂಪರ್ಕ ಅಭಿಯಾನ ಮತ್ತು ಚಾರ್ಟರ್ಡ್ ವಿಮಾನಗಳ ಬಳಕೆಯನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇಡಪ್ಪಾಡಿ ಕೆ. ಪಳನಿಸ್ವಾಮಿ (EPS Mocks Vijay) ವ್ಯಂಗ್ಯವಾಡಿದ್ದು, ಟಿವಿಕೆ ನಾಯಕ ಅಮೆರಿಕ ಅಧ್ಯಕ್ಷರಾದರೂ ಆಗಬಹುದು ಎಂದು ಲೇವಡಿ ಮಾಡಿದ್ದಾರೆ. ಟಿವಿಕೆ ಬೆಂಬಲಿಗರು ವಿಜಯ್ ಅವರನ್ನು ಭಾವಿ ಪ್ರಧಾನ ಮಂತ್ರಿ ಎಂದು ಬಿಂಬಿಸುತ್ತಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ಇಪಿಎಸ್​, ಇಂತಹ ಆಸೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರವು ಆಡಳಿತದ ಮೇಲೆ ಗಮನ ಹರಿಸುವ ಬದಲು ಸಾಮಾಜಿಕ ಜಾಲತಾಣಗಳ ರೀಲ್ಸ್ ಮೇಲೆ ಗಮನ ನೆಟ್ಟಂತೆ ಕಾಣುತ್ತಿದೆ ಎಂದಿರುವ ಪಳನಿಸ್ವಾಮಿ, ವಿಜಯ್ ಅವರನ್ನು ದುಬಾರಿ ಮುಖ್ಯಮಂತ್ರಿ ಎಂದು ಕರೆದಿದ್ದಾರೆ. ಅಷ್ಟೆ ಅಲ್ಲದೆ ವಿಜಯ್ ಅವರ ಪ್ರಯಾಣದ ವೆಚ್ಚವನ್ನು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕಾರ್ಯವೈಖರಿಗೆ ಹೋಲಿಸಿ ವ್ಯತ್ಯಾಸವನ್ನು ತೋರಿಸಿದ್ದಾರೆ.
ಅಮ್ಮ (ಜಯಲಲಿತಾ) ಅವರ ಆಡಳಿತಾವಧಿಯಲ್ಲಿ, ವೆಚ್ಚವನ್ನು ಕಡಿಮೆ ಮಾಡಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿತ್ತು ಎಂದ ಪಳನಿಸ್ವಾಮಿ, ತಮ್ಮನ್ನು ಒಬ್ಬ ವಿನಮ್ರ ರೈತ ಎಂದು ಬಿಂಬಿಸಿಕೊಳ್ಳುವ ವಿಜಯ್, ಚಾರ್ಟರ್ಡ್ ವಿಮಾನಗಳನ್ನು ಬಳಸುವ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ. ವಿಜಯ್ ಪ್ರಧಾನ ಮಂತ್ರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಿದ ಇಪಿಎಸ್​, ಅವರು ಬೇಕಿದ್ದರೆ ಅಮೆರಿಕದ ಅಧ್ಯಕ್ಷರೂ ಆಗಬಹುದು ಎಂದು ಕುಟುಕಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ

ಟಿವಿಕೆ ಸರ್ಕಾರದ ಆಡಳಿತದ ವಿಚಾರವಾಗಿ ಮಾತನಾಡಿದ ಪಳನಿಸ್ವಾಮಿ, ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು. ಕೊಯಮತ್ತೂರಿನಲ್ಲಿ ಒಂದೇ ತಿಂಗಳಲ್ಲಿ ಸುಮಾರು ಒಂಬತ್ತು ಕೊಲೆಗಳು ದಾಖಲಾಗಿವೆ ಮತ್ತು ರಾಜ್ಯಾದ್ಯಂತ ಕೊಲೆ, ದರೋಡೆ ಹಾಗೂ ಘರ್ಷಣೆಗಳು ಹೆಚ್ಚುತ್ತಿವೆ ಎಂದು ಹೇಳಿದರು. ಎಐಎಡಿಎಂಕೆ ನಾಯಕರು ಆರ್ಥಿಕ ಬೆಂಬಲವಿಲ್ಲದೆ ನಿಯಮ 110 (Rule 110) ಅಡಿಯಲ್ಲಿ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದು ಆರೋಪಿಸಿದ ಇಪಿಎಸ್​, ಇದೇ ವೇಗದಲ್ಲಿ ಸಾಲ ಮಾಡುವುದು ಮುಂದುವರಿದರೆ ತಮಿಳುನಾಡಿನ ಸಾಲವು 10 ಲಕ್ಷ ಕೋಟಿ ರೂಪಾಯಿಗೆ ತಲುಪಬಹುದು ಎಂದು ಅವರು ಎಚ್ಚರಿಸಿದರು.
ಅಕ್ಕಿ, ಸಕ್ಕರೆ ಮತ್ತು ಖಾದ್ಯ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿದ ಪಳನಿಸ್ವಾಮಿ, ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಸರ್ಕಾರದ ಮೇಲಿನ ಅಸಮಾಧಾನದ ಸಂಕೇತವಾಗಿ ಭ್ರಷ್ಟಾಚಾರದ ಆರೋಪಗಳು ಹಾಗೂ ರೈತರು, ನರ್ಸ್​​ ಮತ್ತು ಸಾರ್ವಜನಿಕರ ಪ್ರತಿಭಟನೆಗಳನ್ನು ಅವರು ಬೆಟ್ಟು ಮಾಡಿದ ಅವರು, ಟಿವಿಕೆ ಸರ್ಕಾರ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂದು ಭವಿಷ್ಯ ನುಡಿದರು(ಏಜೆನ್ಸೀಸ್​).