ನವದೆಹಲಿ: ನೌಕರರ ಭವಿಷ್ಯ ನಿಧಿ (EPFO) ಸಂಸ್ಥೆ ವಾಟ್ಸಾಪ್ ಸೇವೆ ಆರಂಭಿಸಿದ್ದು, ಉದ್ಯೋಗಿಗಳು ಇನ್ಮುಂದೆ ಮ್ಮ ಬ್ಯಾಲೆನ್ಸ್ ಪರಿಶೀಲಿಸಲು ಪೋರ್ಟಲ್‌ಗೆ ಲಾಗಿನ್ ಆಗುವ ಅಗತ್ಯವಿಲ್ಲ. ನಿಮ್ಮ ಫೋನ್‌ಗಳಲ್ಲಿ WhatsApp ಮೂಲಕ ಪಿಎಫ್ ಬ್ಯಾಲೆನ್ಸ್ ಮತ್ತು ಪಾಸ್‌ಬುಕ್ ವಿವರಗಳನ್ನು ಮತ್ತು ಕೊನೆಯ ಐದು ವಹಿವಾಟುಗಳನನ್ನು ಪರಿಶೀಲಿಸಬಹುದಾಗಿದೆ.
ಭಾನುವಾರ(ನ. 01) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಈ ವಾಟ್ಸಾಪ್ ಸೇವೆಗೆ ಚಾಲನೆ ನೀಡಿದ್ದಾರೆ. ಮತ್ತು ನೌಕರರು ದಿನನಿತ್ಯದ ತಮ್ಮ ಪಿಎಫ್ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಪಿಎಫ್ಓ ಈ ಹೊಸ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಿದೆ.
ಇಪಿಎಫ್ಓ ತನ್ನ 74 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ನಿರ್ಧಾರವನ್ನು ಘೋಷಿಸಿದ್ದು, 1,000 ರೂ. ಅಥವಾ ಅದಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಅರ್ಹ ನಿಷ್ಕ್ರಿಯ PF ಖಾತೆಗಳನ್ನು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಎಂದು ತಿಳಿಸಿದೆ.
ಇದಕ್ಕಾಗಿ ಉದ್ಯೋಗಿಗಳು ವೈಯಕ್ತಿಕವಾಗಿ ಹಕ್ಕು ಸಲ್ಲಿಸುವ ಅಗತ್ಯವಿಲ್ಲ. ನಿಗದಿತ ಗುರುತು ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆಯ ಬಳಿಕ ಇಪಿಎಫ್‌ಒ ಸ್ವತಃ ಇತ್ಯರ್ಥ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆ. ಆ ಖಾತೆಗಳಲ್ಲಿ ಸುಮಾರು 5 ಕೋಟಿ ರೂ. ಇದೆ ಎಂದು ಗುರುತಿಸಲಾಗಿದೆ. ದೇಶಾದ್ಯಂತ ಸುಮಾರು ಒಂದು ಲಕ್ಷ ಖಾತೆಗಳು ಈ ಸ್ವಯಂಚಾಲಿತ ಇತ್ಯರ್ಥ ವ್ಯವಸ್ಥೆ ಮೂಲಕ ಹಣ ಹಾಕಲಾಗುತ್ತಿದೆ ಎಂದು ಇಪಿಎಫ್ಓ ಹೇಳಿದೆ.
ಇಪಿಎಫ್‌ಒ ಬಿಡುಗಡೆ ಮಾಡಿದ ಪೋಸ್ಟರ್ ಪ್ರಕಾರ, ಮೊಬೈಲ್ ನಂಬರ್ +91 8796441800 ಅನ್ನು ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ಪಿಎಫ್ ಖಾತೆಗೆ ನೋಂದಾಯಿಸಿರುವ ನಂಬರ್ನ WhatsAppನಲ್ಲಿ "Hi" ಎಂದು ಕಳುಹಿಸಿ, ಅಥವಾ ಪೋಸ್ಟರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಬಳಿಕ ವಾಟ್ಸಾಪ್ನಲ್ಲಿ ಕಾಣಿಸಿಕೊಳ್ಳುವ ಮೆನುವಿನಿಂದ ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ. ನಿಮಗೆ ಬೇಕಾದ ಸೇವೆಯನ್ನು ಪಡೆಯಿರಿ. EPF ಬ್ಯಾಲೆನ್ಸ್ ಪರಿಶೀಲಿಸಿ, ಕೊನೆಯ ಐದು ವಹಿವಾಟುಗಳನ್ನು ವೀಕ್ಷಿಸಿ ಅಥವಾ ನಿಮ್ಮ ಪಾಸ್‌ಬುಕ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ (ಏಜೆನ್ಸೀಸ್).