ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಟ್ಟ ಇಪಿಎಫ್‌ಒ! ಅ. 31 ರವರೆಗೆ ಅವಕಾಶ, ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ...EPFO EEC 2026
- ಉದ್ಯೋಗಿಗಳ ಭವಿಷ್ಯ ನಿಧಿ ಇಇಸಿ 2026 ಅಭಿಯಾನ ಆರಂಭ
- ಅರ್ಹರಿದ್ದು ವಂಚಿತರಾದ ನೌಕರರಿಗೆ ಇಪಿಎಫ್ ನೋಂದಣಿ ಅವಕಾಶ
- ಜೂನ್ 29ರಿಂದ ಅಕ್ಟೋಬರ್ 31ರವರೆಗೆ ಹೆಸರು ನೋಂದಾಯಿಸಲು ಅವಕಾಶ
- ಪಿಎಫ್ ಸದಸ್ಯತ್ವದಿಂದ ಪಿಂಚಣಿ ಹಾಗೂ ವಿಮಾ ಸೌಲಭ್ಯದ ಲಾಭ
EPFO EEC 2026 : ಉದ್ಯೋಗಿಗಳ ಭವಿಷ್ಯ ನಿಧಿ (EPF) ನೌಕರರ ನಿವೃತ್ತಿ ಜೀವನ ಮತ್ತು ಭವಿಷ್ಯದ ಆರ್ಥಿಕ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ತಿಂಗಳು ಸಂಬಳದಿಂದ ಕಡಿತವಾಗುವ ನಿರ್ದಿಷ್ಟ ಮೊತ್ತವು ಪಿಎಫ್ ಖಾತೆಯಲ್ಲಿ ಜಮೆಯಾಗುತ್ತಾ ಹೋಗುತ್ತದೆ, ಇದು ನಿವೃತ್ತಿಯ ಸಮಯದಲ್ಲಿ ಅಥವಾ ತುರ್ತು ಸಂದರ್ಭಗಳಲ್ಲಿ ಅತ್ಯಂತ ಉಪಯುಕ್ತ ಉಳಿತಾಯ ಹಣ ಆಗಿರುತ್ತದೆ. ಆದರೆ, ಈ ಹಿಂದೆ ಅರ್ಹತೆ ಇದ್ದರೂ ವಿವಿಧ ಕಾರಣಗಳಿಂದ ಇಪಿಎಫ್ (EPF) ವ್ಯಾಪ್ತಿಗೆ ಸೇರದೆ ಉಳಿದುಕೊಂಡಿದ್ದ ನೌಕರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಈಗ 'ನೌಕರರ ದಾಖಲಾತಿ ಅಭಿಯಾನ-2026' (EEC 2026) ಮೂಲಕ ಒಂದು ವಿಶೇಷ ಹಾಗೂ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ.
ಏನಿದು ಇಪಿಎಫ್‌ಒ ಇಇಸಿ-2026?
ಉದ್ಯೋಗಿಗಳ ದಾಖಲಾತಿ ಅಭಿಯಾನ 2026ರ (EEC 2026) ಮುಖ್ಯ ಉದ್ದೇಶವೆಂದರೆ, ಈ ಹಿಂದೆ ಇಪಿಎಫ್ (EPF) ವ್ಯಾಪ್ತಿಯಿಂದ ಹೊರಗುಳಿದಿದ್ದ ಆದರೆ ಅರ್ಹರಾಗಿರುವ ನೌಕರರನ್ನು ಮರುಪರಿಗಣಿಸಿ ಭವಿಷ್ಯ ನಿಧಿ ವಲಯಕ್ಕೆ ತರುವುದಾಗಿದೆ. ಅಂದರೆ, ಸಂಸ್ಥೆಯೊಂದರಲ್ಲಿ ಇಪಿಎಫ್‌ಗೆ ಅರ್ಹರಿದ್ದರೂ ಇದುವರೆಗೆ ನೊಂದಾಯಿಸಿಕೊಳ್ಳದ ನೌಕರರು ಈ ಅಭಿಯಾನದ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ಸಂಪೂರ್ಣ ಅವಕಾಶವಿರುತ್ತದೆ. 2026, ಜೂನ್ 29ರಿಂದ ಜಾರಿಗೆ ಬಂದಿರುವ ಈ ವಿಶೇಷ ಅಭಿಯಾನದಡಿ ಅರ್ಹ ನೌಕರರು 2026, ಅಕ್ಟೋಬರ್ 31ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಆದರೆ, ಕೊನೆಯ ದಿನದವರೆಗೆ ಕಾಯದೆ ಸಂಸ್ಥೆಗಳು ಈಗಲೇ ತಮ್ಮ ನೌಕರರ ದಾಖಲೆಗಳನ್ನು ಮುಂಚಿತವಾಗಿ ಪರಿಶೀಲಿಸಿ, ಯಾರು ಅರ್ಹರು ಎಂಬುದನ್ನು ಗುರುತಿಸಿಕೊಳ್ಳುವಂತೆ ಇಪಿಎಫ್‌ಒ (EPFO) ಕಟ್ಟುನಿಟ್ಟಾಗಿ ಸಲಹೆ ನೀಡಿದೆ.
ಯಾರು ಅರ್ಹರು?
ಈ ಹಿಂದೆ ಇಪಿಎಫ್ (EPF) ವ್ಯಾಪ್ತಿಗೆ ನೋಂದಣಿಯಾಗದೆ ವಂಚಿತರಾಗಿದ್ದರೂ, ನಿಯಮಾನುಸಾರ ಅರ್ಹತೆ ಹೊಂದಿರುವ ನೌಕರರನ್ನು EEC 2026 ಅಭಿಯಾನದ ಅಡಿಯಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಆದರೆ, ಇದಕ್ಕಾಗಿ ಕೆಲವು ಪ್ರಮುಖ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ವಿಶೇಷವಾಗಿ, ಉದ್ಯೋಗದಾತರು ನೌಕರರನ್ನು ಘೋಷಣೆ ಮಾಡುವ ದಿನಾಂಕದಂದು ಆ ನೌಕರರು ಜೀವಂತವಾಗಿರಬೇಕು ಮತ್ತು ಅದೇ ಸಂಸ್ಥೆಯಲ್ಲಿ ಸೇವೆಯಲ್ಲಿರಬೇಕು. ಇದರೊಂದಿಗೆ, EEC 2026 ರ ಅಡಿಯಲ್ಲಿ ಸೂಚಿಸಲಾದ ಇಂತಹ ಇತರ ಎಲ್ಲಾ ಅರ್ಹತಾ ಮಾನದಂಡಗಳು ಮತ್ತು ನಿಯಮಗಳನ್ನು ಸಹ ಕಟ್ಟುನಿಟ್ಟಾಗಿ ಅನುಸರಿಸುವುದು ಅವಶ್ಯಕವಾಗಿದೆ.
ಲಾಭವೇನು?
ಪಿಎಫ್‌ಗೆ ಸೇರ್ಪಡೆಗೊಳ್ಳುವುದರಿಂದ ನೌಕರರು ಭವಿಷ್ಯಕ್ಕಾಗಿ ವ್ಯವಸ್ಥಿತವಾಗಿ ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ, ನಿಯಮಗಳ ಪ್ರಕಾರ ಪಿಂಚಣಿ ಮತ್ತು ವಿಮೆಯಂತಹ ಸಾಮಾಜಿಕ ಭದ್ರತಾ ಸೌಲಭ್ಯಗಳ ಲಾಭವನ್ನು ಸಹ ಪಡೆದುಕೊಳ್ಳಬಹುದು. ಆದ್ದರಿಂದ, ಈ ಅಭಿಯಾನವು ಇಪಿಎಫ್‌ಗೆ (EPF) ಅರ್ಹರಾಗಿದ್ದು ಇದುವರೆಗೆ ನೋಂದಾಯಿಸಿಕೊಳ್ಳದ ನೌಕರರಿಗೆ ಅತ್ಯಂತ ಉಪಯುಕ್ತವಾಗಿದೆ.
ನೌಕರರು ಮಾಡಬೇಕಾದ್ದು ಏನು?
EEC 2026 ಅಭಿಯಾನದಡಿ ನೋಂದಾಯಿಸಿಕೊಳ್ಳುವ ನೌಕರರು ಉಮಾಂಗ್ (UMANG) ಅಪ್ಲಿಕೇಶನ್ ಮೂಲಕ ಮುಖದ ದೃಢೀಕರಣವನ್ನು (Face Authentication) ಬಳಸಿ ಯುಎಎನ್ (UAN) ಸಂಖ್ಯೆಯನ್ನು ಸೃಷ್ಟಿಸಿಕೊಳ್ಳಬೇಕು. ಇದರ ನಂತರ, ಉದ್ಯೋಗದಾತರು ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಮೂಲಕ ನೌಕರರಿಗೆ ಸಂಬಂಧಿಸಿದ ಇಪಿಎಫ್ ಕೊಡುಗೆಯನ್ನು ಪಾವತಿಸಬೇಕಾಗುತ್ತದೆ.
ಮಾಲೀಕರು (ಸಂಸ್ಥೆಗಳು) ಮಾಡಬೇಕಾದ್ದು ಏನು?
* ಸಂಸ್ಥೆಗಳು ಮೊದಲು ತಮ್ಮ ನೌಕರರ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.
* ಹಿಂದೆ ಇಪಿಎಫ್‌ಗೆ ನೋಂದಾಯಿಸದ ಆದರೆ ಅರ್ಹರಾಗಿರುವ ಯಾವುದೇ ನೌಕರರಿದ್ದಾರೆಯೇ ಎಂದು ಗುರುತಿಸಬೇಕು.
* ಇದಕ್ಕಾಗಿ ಸಂಬಳದ ದಾಖಲೆಗಳು, ಉದ್ಯೋಗದ ವಿವರಗಳು ಮತ್ತು ಹಿಂದಿನ ಇಪಿಎಫ್ ದಾಖಲೆಗಳನ್ನು ಪರಿಶೀಲಿಸಬೇಕು. ಅರ್ಹ ನೌಕರರು ಕಂಡುಬಂದಲ್ಲಿ, EEC 2026ರ ಅಡಿಯಲ್ಲಿ ಅಗತ್ಯವಿರುವ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಇಪಿಎಫ್ ವ್ಯಾಪ್ತಿಗೆ ಬರಬೇಕಾಗಿದ್ದು ಈ ಹಿಂದೆ ನೋಂದಣಿಯಾಗದ ನೌಕರರು ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಅಕ್ಟೋಬರ್ 31, 2026ರೊಳಗೆ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ, (ಏಜೆನ್ಸೀಸ್).