ಸಂಪಾದಕೀಯ: ಅತ್ಯುತ್ಸಾಹ ಆಪತ್ತಿಗೆ ಆಹ್ವಾನ 
ದೇಶ

ಸಂಪಾದಕೀಯ: ಅತ್ಯುತ್ಸಾಹ ಆಪತ್ತಿಗೆ ಆಹ್ವಾನ

ಸಂಪಾದಕೀಯ: ಕೊಡಗು ಜಿಲ್ಲೆಯ ಸುಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಆನೆಗಳ ಆಕಸ್ಮಿಕ ಕಾದಾಟದ ನಡುವೆ ಸಿಲುಕಿ ಮೃತಪಟ್ಟ ಘಟನೆ ಅತ್ಯಂತ ಆಘಾತಕಾರಿಯಾಗಿದೆ. ಕಾವೇರಿ ನದಿಯಲ್ಲಿ ಸಾಕಾನೆಗಳು ಜಲಕ್ರೀಡೆಯಲ್ಲಿ ತೊಡಗಿದ್ದಾಗ, ಅವುಗಳ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರು ಕ್ಷಣಮಾತ್ರದಲ್ಲಿ ಸಂಭವಿಸಿದ ಈ ದುರಂತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಕಂಜನ್ ಮತ್ತು ಮಾರ್ತಾಂಡ ಎಂಬ ಎರಡು ಆನೆಗಳ ನಡುವೆ ಏಕಾಏಕಿ ಆರಂಭವಾದ ಕಾಳಗ, ಅಲ್ಲಿ ನೆರೆದಿದ್ದವರಲ್ಲಿ ಆತಂಕ ಮೂಡಿಸಿತು. ಈ ಗೊಂದಲದ ನಡುವೆ ಓಡಲು ಯತ್ನಿಸಿದಾಗ ಆಯತಪ್ಪಿ ಕೆಳಗುರುಳಿದ ಮಹಿಳೆಯ ಮೇಲೆ ಆನೆಯೊಂದು ಬಿದ್ದಿದೆ. ಆ ಭಾರಕ್ಕೆ ಸಿಲುಕಿ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಇದು ಪ್ರವಾಸೋದ್ಯಮದ ಸುರಕ್ಷತಾ ವ್ಯವಸ್ಥೆ ಮತ್ತು ಪ್ರವಾಸಿಗರ ವರ್ತನೆ ಇವೆರಡರ ಬಗ್ಗೆಯೂ ಗಂಭೀರ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.
ವನ್ಯಜೀವಿ ಪ್ರವಾಸೋದ್ಯಮ ಎನ್ನುವುದು ವಿನೋದ ಅಥವಾ ಮನರಂಜನೆ ಮಾತ್ರವಲ್ಲ. ವನ್ಯಮೃಗಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನಾವಿದ್ದೇವೆ ಎಂಬುದನ್ನು ಪ್ರವಾಸಿಗರು  ಮೊದಲು ಅರಿಯಬೇಕಿದೆ. ಆನೆಗಳಾಗಲಿ ಅಥವಾ ಇನ್ಯಾವುದೇ ಪ್ರಾಣಿಗಳಾಗಲಿ ಅವುಗಳನ್ನು ಮನುಷ್ಯ ಎಷ್ಟೇ ಪಳಗಿಸಿದ್ದರೂ, ತರಬೇತಿ ನೀಡಿದ್ದರೂ ಅವುಗಳ ಮೂಲ ಪ್ರಾಣಿಸಹಜ ಸ್ವಭಾವವನ್ನು ನೂರಕ್ಕೆ ನೂರರಷ್ಟು ಅರ್ಥಮಾಡಿಕೊಳ್ಳುವುದು ಅಥವಾ ನಿಯಂತ್ರಿಸುವುದು ಅಸಾಧ್ಯದ ಮಾತು. ವನ್ಯಜೀವಿಗಳ ಪ್ರತಿಕ್ರಿಯೆಗಳು ಯಾವುದೇ ಕ್ಷಣದಲ್ಲಿ ಅನಿರೀಕ್ಷಿತವಾಗಿ ಬದಲಾಗಬಹುದು. ಪ್ರಾಣಿಗಳಲ್ಲಿ ಹಾರ್ಮೋನ್‌ಗಳ ಏರುಪೇರು, ಸಣ್ಣಪುಟ್ಟ ಪ್ರಚೋದನೆಗಳು ಅಥವಾ ಪರಸ್ಪರರ ಮೇಲಿನ ಪ್ರಭುತ್ವದ ಹಠವು ಕ್ಷಣಾರ್ಧದಲ್ಲಿ ಅವುಗಳನ್ನು ಹಿಂಸಾತ್ಮಕವಾಗಿಸಬಲ್ಲದು. ಆ ಕ್ಷಣಕ್ಕೆ ಅವುಗಳ ಮಾನಸಿಕ ಸ್ಥಿತಿಯ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಇದನ್ನು ಅರಿಯದೆ ಪ್ರವಾಸಿಗರು ಪ್ರಾಣಿಗಳ ಅತ್ಯಂತ ಹತ್ತಿರಕ್ಕೆ ಹೋಗುವುದು ತಪ್ಪು. ಆನೆಗಳ ಸೊಂಡಿಲು ಮುಟ್ಟುವುದು, ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುವುದು ಅತ್ಯಂತ ಅಪಾಯಕಾರಿ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವ ಹುಚ್ಚು ಹೆಚ್ಚಾಗಿದೆ. ವನ್ಯಜೀವಿಗಳ ಜೊತೆ ನಿಂತು ಸಾಹಸ ಪ್ರದರ್ಶಿಸುವ ಧಾವಂತದಲ್ಲಿ ಸುರಕ್ಷತೆಯ ಕನಿಷ್ಠ ನಿಯಮಗಳನ್ನೂ ಗಾಳಿಗೆ ತೂರಲಾಗುತ್ತಿದೆ. ಹಣ್ಣು, ತಿನಿಸು ತಿನ್ನಿಸುವ ನೆಪದಲ್ಲಿ ತೀರಾ ಸನಿಹಕ್ಕೆ ಹೋಗುವುದು, ಹಿಂಸಿಸುವುದು ಪ್ರಾಣಿಗಳನ್ನು ಪ್ರಚೋದಿಸುತ್ತದೆ.
ಪ್ರವಾಸಿಗರು ಮತ್ತು ವನ್ಯಜೀವಿಗಳ ನಡುವೆ ಕಡ್ಡಾಯವಾಗಿ ಕನಿಷ್ಠ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಜಾರಿಗೊಳಿಸಬೇಕು. ಆನೆಗಳಿಗೆ ಸ್ನಾನ ಮಾಡಿಸುವ ಜಾಗದಲ್ಲಿ ಅಥವಾ ಆಹಾರ ನೀಡುವ ಸ್ಥಳಗಳಲ್ಲಿ ಪ್ರವಾಸಿಗರು ಮುಕ್ತವಾಗಿ ಓಡಾಡುವುದನ್ನು ನಿರ್ಬಂಧಿಸಬೇಕು. ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪ್ರವಾಸಿಗರು ದೂರದಿಂದಲೇ ವೀಕ್ಷಿಸುವಂತೆ ಮಾಡಬೇಕು. ಪ್ರಾಣಿಗಳ ಉಸ್ತುವಾರಿ ನೋಡಿಕೊಳ್ಳುವವರಿಗೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಆಧುನಿಕ ತರಬೇತಿ ಮತ್ತು ಉಪಕರಣಗಳನ್ನು ಒದಗಿಸಬೇಕು.
ಪ್ರತಿಯೊಬ್ಬ ಪ್ರವಾಸಿಯೂ ‘ನಾವು ಹೋಗುತ್ತಿರುವುದು ಪ್ರಾಣಿಗಳ ಸಾಮ್ರಾಜ್ಯಕ್ಕೆ, ಅಲ್ಲಿ ಅವುಗಳದ್ದೇ ನಿಯಮ’ ಎಂಬ ಗೌರವ ಮತ್ತು ಭಯವನ್ನು ಹೊಂದಿರಬೇಕು. ಪ್ರಾಣಿಗಳ ವಿಷಯದಲ್ಲಿ ನಿರ್ಲಕ್ಷ್ಯ, ಅತಿಯಾದ ಆತ್ಮವಿಶ್ವಾಸ ಅಥವಾ ಸಲುಗೆ ಖಂಡಿತವಾಗಿಯೂ ಪ್ರಾಣಾಂತಿಕವಾಗಬಲ್ಲದು. ಮನರಂಜನೆಗಿಂತ ಜೀವ ಮುಖ್ಯ ಎಂಬ ಸತ್ಯವನ್ನು ಪ್ರತಿಯೊಬ್ಬ ನಾಗರಿಕನೂ ಮನಗಂಡಾಗ ಮಾತ್ರ ಇಂತಹ ದುರಂತ ಮರುಕಳಿಸದಂತೆ ನೋಡಿಕೊಳ್ಳಲು ಸಾಧ್ಯ.