ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 
ದೇಶ

ನರೇಗಾ ಅಂತ್ಯಗೊಳಿಸುವುದು ಬಡವರ ಮೇಲಿನ ನೇರ ದಾಳಿ: ಮೋದಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MNREGA) ಅಂತ್ಯಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳು ಬಡವರ ಮೇಲಿನ ನೇರ ದಾಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಶನಿವಾರ (ಡಿ.27) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಮಾತನಾಡಿದ ಖರ್ಗೆ, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಗ್ರಾಮೀಣ ಭಾರತದ ಜೀವನಾಡಿಯಾಗಿರುವ ಉದ್ಯೋಗ ಖಾತ್ರಿ ಯೋಜನೆಯನ್ನು (ನರೇಗಾ) ವ್ಯವಸ್ಥಿತವಾಗಿ ಹಳ್ಳ ಹಿಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಬಡವರ ಸುರಕ್ಷಾ ಕವಚಕ್ಕೆ ಧಕ್ಕೆ

ಮುಂದುವರೆದು ಮಾತನಾಡಿದ ಖರ್ಗೆ, ನರೇಗಾ ಕೇವಲ ಒಂದು ಯೋಜನೆಯಲ್ಲ, ಅದು ಕೋಟ್ಯಂತರ ಗ್ರಾಮೀಣ ಕುಟುಂಬಗಳ ಹಸಿವು ನೀಗಿಸುವ ಹಕ್ಕಾಗಿದೆ. ಈ ಯೋಜನೆಗೆ ನೀಡುವ ಅನುದಾನವನ್ನು ಕಡಿತಗೊಳಿಸುವುದು ಕೆಲಸಗಾರರನ್ನು ಹೊರಹಾಕುವುದು ಬಡವರ ಮೇಲಿನ ಕ್ರೂರ ದಾಳಿಯಾಗಿದೆ ಎಂದು ಹೇಳಿದರು.

ವೇತನ ವಿಳಂಬ ಮತ್ತು ಆಧಾರ್ ಕಡ್ಡಾಯ

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವುದರಿಂದ ಲಕ್ಷಾಂತರ ದಲಿತ, ಹಿಂದುಳಿದ ಮತ್ತು ಆದಿವಾಸಿ ಕುಟುಂಬಗಳು ಕೆಲಸದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಅಲ್ಲದ, ವೇತನ ಪಾವತಿಯಲ್ಲಿನ ತಿಂಗಳುಗಟ್ಟಲೆ ವಿಳಂಬವು ಬಡವರನ್ನು ಸಾಲದ ಸುಳಿಗೆ ದೂಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಅಸಮಾನತೆ

ದೇಶದ ಶ್ರೀಮಂತರ ಸಾಲ ಮನ್ನಾ ಮಾಡುವ ಸರ್ಕಾರಕ್ಕೆ, ಬಡವರಿಗೆ ದಿನಗೂಲಿ ನೀಡಲು ಹಣವಿಲ್ಲದಿರುವುದು ದುರದೃಷ್ಟಕರವಾಗಿದೆ. ಉದ್ಯೋಗ ಖಾತ್ರಿಯನ್ನು ಕೊನೆಗೊಳಿಸುವ ಮೂಲಕ ಸರ್ಕಾರವು ಬಡವರನ್ನು ಮತ್ತಷ್ಟು ದಮನ ಮಾಡಲು ಹೊರಟಿದೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಮತದಾರರ ಪಟ್ಟಿ ಮತ್ತು ಏಜೆನ್ಸಿಗಳ ದುರುಪಯೋಗ

ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿ ಎಂದು ಬಣ್ಣಿಸಿದ ಖರ್ಗೆ, ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪಿತೂರಿ ನಡೆಸಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಟ್ಟಿಯನ್ನು ಪರಿಶೀಲಿಸುವಂತೆ ಖರ್ಗೆ ಕರೆ ನೀಡಿದ್ದಾರೆ.

ಸಾಮಾಜಿಕ ಸಾಮರಸ್ಯದ ಬಗ್ಗೆ ಕಳವಳಗಳು

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಕಾಂಗ್ರೆಸ್ ಅಧ್ಯಕ್ಷರು ಖಂಡಿಸಿದ್ದಾರೆ. ಅಲ್ಲದೆ, ದೇಶದೊಳಗಿನ ಕೋಮು ಸಾಮರಸ್ಯವನ್ನು ಕದಡುವ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಭಾರತದ ಅಂತರಾಷ್ಟ್ರೀಯ ಪ್ರತಿಷ್ಠೆಯನ್ನು ಹಾಳು ಮಾಡುತ್ತವೆ. ಒಟ್ಟಾರೆಯಾಗಿ, ಸಿಡಬ್ಲ್ಯೂಸಿ ಸಭೆಯಲ್ಲಿ, ಮುಂಬರುವ ದಿನಗಳಲ್ಲಿ, ಚುನಾವಣಾ ಬಗ್ಗೆ ಮಾತ್ರವಲ್ಲದೆ, ಸೈದ್ಧಾಂತಿಕ ಮತ್ತು ಸಾಮೂಹಿಕ ಚಳುವಳಿಗಳಿಗೂ ಪಕ್ಷವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಸೂಚಿಸಿತು,(ಏಜೆನ್ಸೀಸ್).