ತಮಿಳುನಾಡಿನಲ್ಲಿ 59 ವರ್ಷಗಳ ವನವಾಸ ಅಂತ್ಯ: ನಾಳೆ ಸಿಎಂ ವಿಜಯ್ ಸಂಪುಟ ಸೇರಲಿದ್ದಾರೆ ಇಬ್ಬರು ಕಾಂಗ್ರೆಸ್ ಶಾಸಕರು!
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ದಶಕಗಳ ಅತ್ಯಂತ ಭೀಕರ ಹಾಗೂ ಐತಿಹಾಸಿಕ ರಾಜಕೀಯ ಮನ್ವಂತರವೊಂದು ಸಂಭವಿಸಿದೆ. ಬರೋಬ್ಬರಿ 59 ವರ್ಷಗಳ ಸುದೀರ್ಘ ಕರಾಳ ರಾತ್ರಿಯ ನಂತರ ಕಾಂಗ್ರೆಸ್ ಪಕ್ಷಕ್ಕೆ(Congress MLAs join Vijay Cabinet) ತಮಿಳುನಾಡಿನ ಮಣ್ಣಿನಲ್ಲಿ ಕೊನೆಗೂ ಹೊಸ ಮುಂಜಾವು ಸಿಕ್ಕಿದೆ. ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರದಲ್ಲಿ ನಾಳೆ ಇಬ್ಬರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಸುಮಾರು ಆರು ದಶಕಗಳ ಬಳಿಕ ಕಾಂಗ್ರೆಸ್ ತಮಿಳುನಾಡು ಸರ್ಕಾರದ ಭಾಗವಾಗುವ ಮೂಲಕ ಇತಿಹಾಸ ಬರೆದಿದೆ.
ಈ ಬಗ್ಗೆ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಂಗಳವಾರ ಅಧಿಕೃತವಾಗಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರು ನಾಳೆ ಮುಖ್ಯಮಂತ್ರಿ ವಿಜಯ್ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಇದು ಕಾಂಗ್ರೆಸ್ ಪಾಲಿಗೆ ಮಹಾ ಐತಿಹಾಸಿಕ ಕ್ಷಣ- ಕೆ.ಸಿ. ವೇಣುಗೋಪಾಲ್ ಹರ್ಷ!
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಡೆಯದಾಗಿ 1967 ರಲ್ಲಿ ತಮಿಳುನಾಡಿನಲ್ಲಿ ಅಧಿಕಾರದಲ್ಲಿತ್ತು. ಅದಾದ ಬಳಿಕ ದ್ರಾವಿಡ ಪಕ್ಷಗಳ ಅಬ್ಬರದ ಮುಂದೆ ಕಾಂಗ್ರೆಸ್ ಕೇವಲ ಮೈತ್ರಿಗಷ್ಟೇ ಸೀಮಿತವಾಗಿತ್ತು. ಈಗ ಆರು ದಶಕಗಳ ಸುದೀರ್ಘ ಗ್ಯಾಪ್ ನಂತರ ಸರ್ಕಾರ ಸೇರುತ್ತಿರುವುದನ್ನು ವೇಣುಗೋಪಾಲ್ ಕೊಂಡಾಡಿದ್ದಾರೆ.
ಇದು ನಮಗೆ ಅತ್ಯಂತ ಐತಿಹಾಸಿಕ ಸಂದರ್ಭವಾಗಿದೆ. ಸುಮಾರು ಆರು ದಶಕಗಳ ನಂತರ ಕಾಂಗ್ರೆಸ್ ತಮಿಳುನಾಡು ಸಚಿವ ಸಂಪುಟವನ್ನು ಸೇರುತ್ತಿದೆ. ಸಚಿವರಾಗಲಿರುವ ಇಬ್ಬರೂ ನಾಯಕರು ತಮಿಳುನಾಡಿನ ಜನರ ಆಶೋತ್ತರಗಳನ್ನು ಈಡೇರಿಸಲಿದ್ದಾರೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನಪರ ಹಾಗೂ ಕಲ್ಯಾಣ ಆಡಳಿತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಶ್ರಮಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಡಿಎಂಕೆ ಕೈಬಿಟ್ಟು ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್!
ಈ ಬೆಳವಣಿಗೆಯು ತಮಿಳುನಾಡು ರಾಜಕೀಯದ ಇತಿಹಾಸದಲ್ಲೇ ಅತಿ ದೊಡ್ಡ ಬಿಗ್ ಟ್ವಿಸ್ಟ್ ಎಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ DMK ಪಕ್ಷದೊಂದಿಗೆ ಕೇವಲ ಜೂನಿಯರ್ ಪಾರ್ಟ್‌ನರ್ ಆಗಿ ಮೈತ್ರಿ ಮಾಡಿಕೊಳ್ಳುತ್ತಿತ್ತೇ ಹೊರತು ಎಂದಿಗೂ ನೇರವಾಗಿ ಸರ್ಕಾರದಲ್ಲಿ ಭಾಗವಹಿಸಿರಲಿಲ್ಲ. ಆದರೆ ಈ ಬಾರಿ ತನ್ನ ಹಳೆಯ ಮಿತ್ರ ಪಕ್ಷ ಡಿಎಂಕೆಗೆ ಬಿಗ್ ಶಾಕ್ ನೀಡಿದ ಕಾಂಗ್ರೆಸ್, ನಟ ವಿಜಯ್ ಅವರ ಹೊಸ ಪಕ್ಷವಾದ TVK ಜೊತೆ ಆಡಳಿತ ಹಂಚಿಕೆಯ ರಹಸ್ಯ ಸ್ಕೆಚ್ ಹಾಕಿ ಯಶಸ್ವಿಯಾಗಿದೆ.
ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ಅವರ ಟಿವಿಕೆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಮ್ಯಾಜಿಕ್ ನಂಬರ್ 118 ಕ್ಕಿಂತ 10 ಸೀಟುಗಳ ಕೊರತೆಯನ್ನು ಎದುರಿಸುತ್ತಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), IUML ಮತ್ತು VCK ಪಕ್ಷಗಳು ವಿಜಯ್ ಅವರ ನೇತೃತ್ವದ ಸರ್ಕಾರಕ್ಕೆ ಬೇಷರತ್ ಬೆಂಬಲ ಘೋಷಿಸಿದವು. ಪರಿಣಾಮವಾಗಿ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಬೃಹತ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ,(ಏಜೆನ್ಸೀಸ್).