ಶ್ರೀನಗರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರೊಂದಿಗೆ ಸೋಮವಾರ(ಡಿ. 15) ಸಂಜೆ ಗುಂಡಿನ ಚಕಮಕಿ(Encounter) ನಡೆದಿದೆ ಎಂದು ವರದಿಯಾಗಿದೆ.
ಜೈಶ್-ಎ-ಮೊಹಮ್ಮದ್(ಜೆಇಎಂ) ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಶಂಕಿಸಲಾದ ಉಗ್ರರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಪಡೆದ ಬಳಿಕ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಗುಡ್ಡಗಾಡು ಜಿಲ್ಲೆಯ ಮಜಲ್ಟಾ ಪ್ರದೇಶದ ಸೋನ್ ಗ್ರಾಮದಲ್ಲಿ ಉಗ್ರರು ಪತ್ತೆಯಾಗಿದ್ದು ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಮ್ಮುವಿನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಭೀಮ್ ಸೇನ್ ಟುಟಿ, ದೂರದ ಹಳ್ಳಿಯಲ್ಲಿ ಭಯೋತ್ಪಾದಕರ ಬಗ್ಗೆ ಪೊಲೀಸರಿಗೆ ನಿಖರವಾದ ಮಾಹಿತಿ ದೊರೆತ ಬಳಿಕ ಅವರನ್ನು ಪತ್ತೆ ಹಚ್ಚುವ ಶೋಧ ಕಾರ್ಯ ನಡೆಯಿತು. ಸೇನೆ ಮತ್ತು ಸಿಆರ್‌ಪಿಎಫ್ ಜೊತೆಗೆ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು(ಎಸ್‌ಒಜಿ) ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.
ಸಂಜೆ 6 ಗಂಟೆ ಸುಮಾರಿಗೆ ಭದ್ರತಾ ಪಡೆಗಳು ಅಡಗಿಕೊಂಡಿರುವ ಉಗ್ರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಮುತ್ತಿಗೆ ಹಾಕಿದ ಗ್ರಾಮದಿಂದ ಗುಂಡಿನ ಸದ್ದು ಕೇಳಿಬಂದಿತು. ಬಳಿಕ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಹೆಚ್ಚುವರಿ ಪಡೆಗಳುನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).