ತಿರುವನಂತರಪುರಂ: ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿದ್ದ ಅಶ್ಲೀಲ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಿರುವ ಕೇರಳ ಹೈಕೋರ್ಟ್, ಮಹಿಳಾ ಸಬಲೀಕರಣ ಅಂದ್ರೆ, ಮಹಿಳೆಯರನ್ನು ಸಂತರನ್ನಾಗಿ ಮಾಡೋದಲ್ಲ, ಅವರ ಆಕಾಂಕ್ಷೆ, ಸಾಧನೆಗಳನ್ನು ಘನತೆ ಮತ್ತು ನ್ಯಾಯಯುತವಾಗಿ ಗುರುತಿಸುವುದು ಎಂದು ಹೇಳಿದೆ.
1956 ರ ಅನೈತಿಕ ಸಂಚಾರ ಕಾಯ್ದೆಯ ಸೆಕ್ಷನ್ 3, 5 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 (ಎ) ಅಡಿಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಅಮ್ಮ(ಮಲಯಾಳಂ ಮೂವಿ ಕಲಾವಿದರ ಸಂಘ) ಅಧ್ಯಕ್ಷೆ ಶ್ವೇತಾ ಮೆನನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಕೇರಳ ಹೈಕೋರ್ಟ್, ದೂರಿನಲ್ಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರವಾದ ಪುರಾವೆಗಳಿಲ್ಲ ಎಂದು ಪ್ರಕರಣವ್ನು ರದ್ದುಗೊಳಿಸಿದೆ.
ಈ ವೇಳೆ ಪ್ರಗತಿಪರ ಸಮಾಜ ಜನರನ್ನು ಅವರ ಕಾರ್ಯ ಮತ್ತು ಕೊಡುಗೆಗಳ ಆಧಾರದ ಮೇಲೆ ಮೌಲ್ಯ ಮಾಪನ ಮಾಡುತ್ತದೆ. ಆದರೆ ಪ್ರತಿಗಾಮಿ ಸಮಾಜ ಅವರ ನಿಂದನೆ, ಚಾರಿತ್ರ್ಯವಧೆ ಹಾಗೂ ನೈತಿಕ ಪೊಲೀಸ್ಗಿರಿಯನ್ನು ಆಶ್ರಯಿಸುತ್ತದೆ. ಮಹಿಳೆಯರ ಸಬಲೀಕರಣ ಎಂದರೆ ಅವರನ್ನು ಸಂತರನ್ನಾಗಿ ಮಾಡೋದಲ್ಲ, ಬದಲಿಗೆ ಅವರ ಪ್ರತ್ಯೇಕತೆ, ಆಕಾಂಕ್ಷೆಗಳು ಮತ್ತು ಸಾಧನೆಗಳನ್ನು ಘನತೆ ಮತ್ತು ನ್ಯಾಯಯುತವಾಗಿ ಗುರುತಿಸಬೇಕು ಎಂದು ತಿಳಿಸಿದೆ.
ಒಬ್ಬ ಮಹಿಳೆ ಸಾರ್ವಜನಿಕ ಜೀವನದಲ್ಲಿ ಹೆಸರು, ಖ್ಯಾತಿ ಮತ್ತು ಮನ್ನಣೆಯನ್ನು ಪಡೆದಾಗ, ಕಾರಣಗಳು, ತರ್ಕ ಅಥವಾ ಅರ್ಹತೆಯ ಆಧಾರದ ಮೇಲೆ ಅವಳನ್ನು ಸೋಲಿಸಲು ಪ್ರಯತ್ನಿಸುವುದು ಕಷ್ಟಕರವಾಗಬಹುದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಂತರ, ಆಕೆಯ ವೈಯಕ್ತಿಕ ಜೀವನ ಬಗ್ಗೆ ಸಮಾಜ ಗಮನಹರಿಸುತ್ತದೆ. ಒಂದು ಸಮಾಜವು ಮಹಿಳೆಯ ಸಾಧನೆಗಳಿಗಿಂತ ಆಕೆಯ ಇಮೇಜ್ ಮೇಲೆ ಹೆಚ್ಚು ಗಮನಹರಿಸಿದಾಗ, ಅದು ತನ್ನದೇ ಆದ ಬೌದ್ಧಿಕ ಬಡತನವನ್ನು ಬಹಿರಂಗಪಡಿಸುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ (ಏಜೆನ್ಸೀಸ್).