ಉದ್ಯೋಗಿಗಳೇ ಎಚ್ಚರ.. ಇನ್ನು 3 ವರ್ಷದಲ್ಲಿ ನಿಮ್ಮ ಕೆಲಸಕ್ಕೆ ಸಂಚಕಾರ ತರಲಿದೆ AI..! 
ದೇಶ

ಉದ್ಯೋಗಿಗಳೇ ಎಚ್ಚರ.. ಇನ್ನು 3 ವರ್ಷದಲ್ಲಿ ನಿಮ್ಮ ಕೆಲಸಕ್ಕೆ ಸಂಚಕಾರ ತರಲಿದೆ AI..! AI Revolution

ನವದೆಹಲಿ: ನಾವು ಇಂದು ಮಾಡುತ್ತಿರುವ ಬಹುತೇಕ ಕೆಲಸಗಳು ಇನ್ನು ಕೇವಲ ಎರಡು-ಮೂರು ವರ್ಷಗಳಲ್ಲಿ ಇತಿಹಾಸದ ಪುಟ ಸೇರಲಿವೆಯೇ? ಹೌದು ಎನ್ನುತ್ತಿದ್ದಾರೆ ವಿಶ್ವಪ್ರಸಿದ್ಧ AI(AI Revolution) ತಜ್ಞ ಡಾ. ರೋಮನ್ ಯಾಂಪೋಲ್ಸ್ಕಿ ಹೇಳಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, 2027ರ ವೇಳೆಗೆ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಜಗತ್ತನ್ನು ಆಳಲಿದ್ದು, ಅದರ ಪರಿಣಾಮವಾಗಿ ಇಂದಿನ ಶೇ. 99ರಷ್ಟು ಉದ್ಯೋಗಗಳು ಇಲ್ಲವಾಗಲಿವೆ ಎಂಬ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.

AGI ಅಂದರೆ ಏನು? ಈ ಬದಲಾವಣೆ ಯಾಕೆ..?

ಸಾಮಾನ್ಯ AI ಕೇವಲ ದತ್ತಾಂಶಗಳನ್ನು ವಿಶ್ಲೇಷಿಸಿದರೆ, AGI ಮನುಷ್ಯನಿಗಿಂತಲೂ ವೇಗವಾಗಿ ಯೋಚಿಸುವ, ಕಲಿಯುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಡಾ. ರೋಮನ್ ಪ್ರಕಾರ, ಐದು ವರ್ಷಗಳ ಒಳಗೆ ಕಂಪ್ಯೂಟರ್‌ಗಳು ಮನುಷ್ಯ ಮಾಡಬಲ್ಲ ಪ್ರತಿಯೊಂದು ಡಿಜಿಟಲ್ ಕೆಲಸವನ್ನೂ ಅತ್ಯಂತ ನಿಖರವಾಗಿ ಮಾಡಲಿವೆ. ಇದರಿಂದಾಗಿ ಡೇಟಾ ಎಂಟ್ರಿ, ಗ್ರಾಫಿಕ್ ಡಿಸೈನ್, ಕೋಡಿಂಗ್ ಮತ್ತು ಅಕೌಂಟಿಂಗ್‌ನಂತಹ ಕ್ಷೇತ್ರಗಳಲ್ಲಿ ಮಾನವನ ಅಗತ್ಯವೇ ಇಲ್ಲದಂತಾಗಬಹುದು.

ಉಳಿಯಲಿರುವ ಆ 5 ಪ್ರಮುಖ ಉದ್ಯೋಗಗಳು ಯಾವುವು..?

ಎಲ್ಲಾ ಉದ್ಯೋಗಗಳು ಹೋದರೂ, ಮನುಷ್ಯನ ಸಹಜ ಸಂವೇದನೆ ಮತ್ತು ತಾಂತ್ರಿಕ ನಿಯಂತ್ರಣ ಅಗತ್ಯವಿರುವ ಈ 5 ಪಾತ್ರಗಳು ಮಾತ್ರ ಉಳಿಯಲಿವೆ ಎಂದು ಅವರು ಪಟ್ಟಿ ಮಾಡಿದ್ದಾರೆ.
ಭಾವನಾತ್ಮಕ ವೃತ್ತಿಗಳು: ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಥೆರಪಿಸ್ಟ್‌ಗಳು ಮತ್ತು ಕೌನ್ಸಿಲರ್‌ಗಳ ಅಗತ್ಯ ಎಂದಿಗೂ ಇರುತ್ತದೆ.
ಶ್ರೀಮಂತರಿಗೆ ವೈಯಕ್ತಿಕ ಸೇವೆ: ಗಣ್ಯ ವ್ಯಕ್ತಿಗಳಿಗೆ ಅಗತ್ಯವಿರುವ ಅತ್ಯಂತ ವೈಯಕ್ತಿಕ ಮತ್ತು ವಿಶ್ವಾಸಾರ್ಹ ಸೇವೆಗಳನ್ನು AI ಸಂಪೂರ್ಣವಾಗಿ ನೀಡಲು ಸಾಧ್ಯವಿಲ್ಲ.
AI ವ್ಯವಸ್ಥೆಗಳ ನಿಯಂತ್ರಕರು: ಕೃತಕ ಬುದ್ಧಿಮತ್ತೆ ದಾರಿ ತಪ್ಪದಂತೆ ನೋಡಿಕೊಳ್ಳುವ ಮತ್ತು ಅದನ್ನು ನಿರ್ವಹಿಸುವ ತಜ್ಞರಿಗೆ ಭಾರಿ ಬೇಡಿಕೆ ಇರಲಿದೆ.
AI ಅಂಡರ್‌ಸ್ಟ್ಯಾಂಡಿಂಗ್ ಮತ್ತು ಪ್ರಾಂಪ್ಟ್ ಇಂಜಿನಿಯರಿಂಗ್: AI ಯಿಂದ ಕೆಲಸ ತೆಗೆಸುವ ಕಲೆ ತಿಳಿದಿರುವ ಪ್ರಾಂಪ್ಟ್ ಇಂಜಿನಿಯರ್‌ಗಳು ಭವಿಷ್ಯದ ಆಸ್ತಿಯಾಗಲಿದ್ದಾರೆ.
ಸಂಕೀರ್ಣ ಸಮಸ್ಯೆಗಳ ತಜ್ಞರು: ಯಂತ್ರಗಳಿಗೆ ನಿಲುಕದ ಅತ್ಯಂತ ಸಂಕೀರ್ಣವಾದ ಸಾಮಾಜಿಕ ಮತ್ತು ತಾಂತ್ರಿಕ ಸವಾಲುಗಳನ್ನು ಎದುರಿಸುವ ಸಂಶೋಧಕರು ಉಳಿಯಲಿದ್ದಾರೆ.

ಮುಂದಿರುವ ದಾರಿ ಏನು..?

ಈ ವರದಿಯು ಭಯ ಹುಟ್ಟಿಸುವಂತಿದ್ದರೂ, ಮನುಷ್ಯ ತನ್ನ ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಕೇವಲ ಪದವಿಗಳಿಗಿಂತ ತಾಂತ್ರಿಕ ಜಾಣ್ಮೆ ಮತ್ತು ಮಾನವೀಯ ಸ್ಪರ್ಶ ಇರುವ ಕೆಲಸಗಳಿಗೆ ಭವಿಷ್ಯದಲ್ಲಿ ಬೆಲೆ ಸಿಗಲಿದೆ,(ಏಜೆನ್ಸೀಸ್).