ಅಶೋಕ್ ಸಿಂಘಾಲ್ 
ದೇಶ

ಹಿಂದೂ ಹೃದಯ ಸಾಮ್ರಾಟ: ಇಂದು ಅಶೋಕ್ ಸಿಂಘಾಲ್ 100ನೇ ಜನ್ಮದಿನ

ಭಾರತೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಜೀವಿತಕಾಲದಲ್ಲಿ ಮಾತ್ರವಲ್ಲದೆ ಅನಂತರವೂ ಯುವ ಪೀಳಿಗೆಗೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಿರುವ ಜ್ವಲಂತ ನಿದರ್ಶನಗಳಿವೆ. ಅಂತಹ ಪ್ರಾತಃಸ್ಮರಣೀಯ ವ್ಯಕ್ತಿಗಳಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್​ಪಿ) ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಒಬ್ಬರು.

(ದು.ಗು. ಲಕ್ಷ್ಮಣ,ಲೇಖಕರು ಹಿರಿಯ ಪತ್ರಕರ್ತರು)

ಭಾರತೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಜೀವಿತಕಾಲದಲ್ಲಿ ಮಾತ್ರವಲ್ಲದೆ ಅನಂತರವೂ ಯುವ ಪೀಳಿಗೆಗೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡಿರುವ ಜ್ವಲಂತ ನಿದರ್ಶನಗಳಿವೆ. ಅಂತಹ ಪ್ರಾತಃಸ್ಮರಣೀಯ ವ್ಯಕ್ತಿಗಳಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್​ಪಿ) ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಒಬ್ಬರು. ಅವರನ್ನು ‘ಹಿಂದೂ ಹೃದಯ ಸಾಮ್ರಾಟ’ ಎಂದು ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆ ಬಣ್ಣಿಸಿದ್ದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಹಿಂದೂ ಸಮಾಜಕ್ಕೆ ಎಲ್ಲೇ ತೊಂದರೆಯಾದರೂ ಪರಿಹರಿಸಲು ಸಿಂಘಾಲ್ ಧಾವಿಸುತ್ತಿದ್ದರು. ರ್ತಾಕ ಅಂತ್ಯ ಸಿಗುವವರೆಗೂ ಹೋರಾಡುತ್ತಿದ್ದರು. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಆಂದೋಲನ ಯಶಸ್ವಿಯಾಗುವಂತೆ ಹೋರಾಟದ ತಂತ್ರಗಳನ್ನು ಹೆಣೆದು ಕಾರ್ಯಕರ್ತರನ್ನು, ಇಡೀ ಹಿಂದೂ ಸಮಾಜವನ್ನು ಜಾಗೃತಗೊಳಿಸಿದ್ದರ ಹಿಂದಿನ ಪ್ರೇರಣಾಶಕ್ತಿ ಸಿಂಘಾಲ್.

ಅಂದು 1981ರ ಫೆಬ್ರವರಿ 19. ತಮಿಳುನಾಡಿನ ರಾಮನಾಥಪುರಂನಲ್ಲಿ ಮೊಹಮ್ಮದ್ ಸಲೀಂ ಎಂಬ ವೈದ್ಯ 3500 ಮೀನುಗಾರರನ್ನು ಆಮಿಷವೊಡ್ಡಿ ಇಸ್ಲಾಂಗೆ ಮತಾಂತರಗೊಳಿಸಿದ್ದ. ಆಗ ದೆಹಲಿಯ ಪ್ರಾಂತ್ಯ ಪ್ರಚಾರಕರಾಗಿದ್ದ ಸಿಂಘಾಲ್, ಆರೆಸ್ಸೆಸ್ ವರಿಷ್ಠರೊಂದಿಗೆ ರ್ಚಚಿಸಿ, ದೆಹಲಿಯಲ್ಲಿ ವಿಶಾಲ ಹಿಂದೂ ಸಮ್ಮೇಳನವನ್ನು ಈ ಘಟನೆಯ ವಿರುದ್ಧ ಸಂಘಟಿಸಿದರು. ಕಾಂಗ್ರೆಸ್ ನಾಯಕ ಡಾ. ಕರಣ್ ಸಿಂಗ್​ರನ್ನೇ ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಮಾಡಿದರು. ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಮ್ಮೇಳನ ಹಿಂದೂ ಸಮಾಜದ ಜಾಗೃತಿಗೆ ದೊಡ್ಡ ಸಂದೇಶವನ್ನೇ ರವಾನಿಸಿತ್ತು. ಇತ್ತ ಇಸ್ಲಾಂಗೆ ಮತಾಂತರಗೊಂಡವರನ್ನು ಮಾತೃಧರ್ಮಕ್ಕೆ ಕರೆತರುವ ಕಾರ್ಯಕ್ಕೂ ಸಿಂಘಾಲ್ ಚಾಲನೆ ನೀಡಿದ್ದರು.

ಹಿಂದೂ ಸಮಾಜದ ಮೇಲಿನ ಅವರ ಕಾಳಜಿಯನ್ನು ಗಮನಿಸಿ ಅವರನ್ನು ವಿಎಚ್​ಪಿಯ ಕೇಂದ್ರೀಯ ಸಹ ಕಾರ್ಯದರ್ಶಿಯನ್ನಾಗಿ ಆರೆಸ್ಸೆಸ್ ನೇಮಿಸಿತು. ಅದುವರೆಗೆ ಸಣ್ಣ ಸಂಘಟನೆಯಾಗಿದ್ದ ವಿಎಚ್​ಪಿಗೆ ಸಿಂಘಾಲ್ ಬಂದಿದ್ದೇ ತಡ, ಯುವಶಕ್ತಿಯ ಪ್ರವಾಹವೇ ಹರಿದುಬಂತು. ಹಿಂದೂ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಶ್ರದ್ಧಾಕೇಂದ್ರಗಳ ರಕ್ಷಣೆಯ ಸಮಸ್ಯೆ ಇತ್ಯಾದಿಗಳಿಗೆ ರ್ತಾಕ ಅಂತ್ಯ ಕಾಣಿಸಲು ಬಗೆಬಗೆಯ ಯೋಜನೆಗಳು ರೂಪುಗೊಂಡವು.

ರಾಜಸ್ಥಾನದ ಉದಯಪುರ, ಡುಂಗರಪುರ, ಬಾನ್ಸ್​ವಾಡ, ಕುಶಾಲ್​ಗಢ, ಪ್ರತಾಪಗಢ ಮೊದಲಾದ ಬೆಟ್ಟಗುಡ್ಡಗಳ ಕಾಡಿನ ಪ್ರದೇಶದ 1500 ಗ್ರಾಮಗಳಲ್ಲಿ ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆ ತೀವ್ರವಾಗಿತ್ತು. ಕ್ರೖೆಸ್ತ ಮಿಷನರಿಗಳು ಇದನ್ನು ದುರುಪಯೋಗಪಡಿಸಿಕೊಂಡು ಆ ಪ್ರದೇಶದ ಶೇಕಡ 80ರಷ್ಟು ಹಿಂದೂಗಳನ್ನು ಕ್ರೖೆಸ್ತಮತಕ್ಕೆ ಮತಾಂತರಗೊಳಿಸಿದರು. ಸಿಂಘಾಲ್​ರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಆ ಪ್ರದೇಶದ 470 ಗ್ರಾಮಗಳಲ್ಲಿ ಪ್ರಾಥಮಿಕ ವಿದ್ಯಾಲಯ, 540 ಗ್ರಾಮಗಳಲ್ಲಿ ಚಿಕ್ಕ ಚಿಕ್ಕ ಹನುಮಾನ್ ಮಂದಿರ ನಿರ್ವಣಕ್ಕೆ ಚಾಲನೆ ನೀಡಿದರು. ಸತ್ಸಂಗ, ಸುಸಜ್ಜಿತ ಹಾಸ್ಟೆಲ್​ಗಳ ಸ್ಥಾಪನೆ, ಗಣೇಶ ಪೂಜೆ, ಮಾಹಿ ನದಿ ಪರಿಕ್ರಮ ಮುಂತಾದ ಧಾರ್ವಿುಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಮತಾಂತರಗೊಂಡವರ ಪೈಕಿ ಶೇ.80ರಷ್ಟು ಮಂದಿಯನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವಲ್ಲಿ ಯಶಸ್ವಿಯಾದರು.

ಒಡಿಶಾದ 30 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ವನವಾಸಿ ಜನರದ್ದೇ ಅಧಿಕ ಸಂಖ್ಯೆ. ಕ್ರೖೆಸ್ತ ಮಿಷನರಿಗಳು ಅಲ್ಲೆಲ್ಲ ಮತಾಂತರ ಚಟುವಟಿಕೆಯನ್ನು ಅವ್ಯಾಹತವಾಗಿ ನಡೆಸಿದ್ದವು. ಲಕ್ಷ ್ಮ ಣಾನಂದ ಸರಸ್ವತಿ ಸ್ವಾಮೀಜಿ ನೆರವಿನಿಂದ ಅಲ್ಲೆಲ್ಲ ವನವಾಸಿಗಳನ್ನು ಜಾಗೃತಗೊಳಿಸಿ ಮಕ್ಕಳಿಗೆ ಶಿಕ್ಷಣ, ಸಂಸ್ಕಾರಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ, ಅಭಿಮಾನ, ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್, ಉತ್ತರ ಪೂರ್ವಾಂಚಲ, ಪಶ್ಚಿಮ ಬಂಗಾಳ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ ರಾಜ್ಯಗಳಲ್ಲಿ ಹಬ್ಬುತ್ತಿದ್ದ ಕ್ರೖೆಸ್ತ ಮಿಷನರಿಗಳ ಚಟುವಟಿಕೆಗಳನ್ನು ತಡೆಗಟ್ಟುವ ಸವಾಲನ್ನು ಎದುರಿಸಿ, ಅಲ್ಲಿನ ಮುಗ್ಧ ವನವಾಸಿ ಜನರ ಮನದಲ್ಲಿ ಹಿಂದೂ ಧರ್ಮದ ಭಾವನೆ ಮೂಡಿಸುವಲ್ಲಿ ಸಿಂಘಾಲ್ ಅಹರ್ನಿಶಿ ಪರಿಶ್ರಮ ಎಣೆಯಿಲ್ಲದ್ದು.

ದೇಶದುದ್ದಗಲದ ಮೂಲೆಮೂಲೆಯ ಹಳ್ಳಿಗಳಲ್ಲಿ ಸಂಚರಿಸಿ ಅವರು ಸಾಧು ಸಂತರನ್ನು, ಕಾರ್ಯಕರ್ತರನ್ನು, ಸಾಮಾನ್ಯ ಜನರನ್ನು ಹಿಂದೂ ಸಮಾಜದ ಏಳಿಗೆಯ ಕಾರ್ಯಕ್ಕೆ ಜೋಡಿಸಿದರು. ರಾಮಜಾನಕಿ ರಥಯಾತ್ರೆ, ಧಾರ್ವಿುಕ ಸಭೆಗಳು, ಶಿಲಾನ್ಯಾಸ, ಶಿಲಾಪೂಜನ, ಕರಸೇವೆ... ಹೀಗೆ ಹತ್ತುಹಲವು ಚಟುವಟಿಕೆಗಳಿಗೆ ಪ್ರೇರಣೆ ತುಂಬಿದ ತೆರೆಮರೆಯ ವ್ಯಕ್ತಿ ಸಿಂಘಾಲ್. ಮತಾಂತರಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಪರಾವರ್ತನ ಪ್ರಕ್ರಿಯೆ, ಗೋಸಂರಕ್ಷಣೆ, ಸಾಮಾಜಿಕ ಸಾಮರಸ್ಯಕ್ಕಾಗಿ ಪ್ರಯತ್ನ, ಸಂಸ್ಕೃತ ಪ್ರಚಾರ, ‘ಮಂದಿರ್ ವಹೀ ಬನಾಯೆಂಗೆ’ ಘೊಷಣೆಗೆ ರ್ತಾಕ ಅಂತ್ಯ ನೀಡಲು ದೇಶಾದ್ಯಂತ ಜನಜಾಗೃತಿ... ಈ ಎಲ್ಲ ಕಾರ್ಯಗಳಿಗೆ ಸಿಂಘಾಲ್ ಆಧಾರಸ್ತಂಭವಾಗಿ ನಿಂತರು.

ಉತ್ತರಪ್ರದೇಶದ ಆಗ್ರಾದಲ್ಲಿ ಹುಟ್ಟಿದ ಅಶೋಕ್ ಸಿಂಘಾಲ್ (ಜನನ 27.09.1926; ಮರಣ 17.11.2015) ಬನಾರಸ್ ಹಿಂದೂ ವಿವಿಯ ಐಐಟಿಯಲ್ಲಿ ಬಿ.ಟೆಕ್ ಪೂರೈಸಿದ ಬಳಿಕ ಉನ್ನತ ಸರ್ಕಾರಿ ಉದ್ಯೋಗ ದೊರೆಯುವ ಅವಕಾಶ ಇತ್ತಾದರೂ ಅದರತ್ತ ತಿರುಗಿಯೂ ನೋಡಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ, ಅವಿವಾಹಿತರಾಗಿ, ಶ್ವೇತವಸ್ತ್ರದ ಸಂತನಾಗಿಯೇ ಉಳಿದರು. ದೆಹಲಿ, ಹರಿಯಾಣದ ಪ್ರಾಂತ್ಯ ಪ್ರಚಾರಕರಾಗಿದ್ದ ಸಿಂಘಾಲ್ ಉತ್ತಮ ಗಾಯಕರಾಗಿದ್ದರು. ಪಂಡಿತ ಓಂಕಾರನಾಥ ಠಾಕೂರ್ ಬಳಿ ಹಿಂದುಸ್ತಾನಿ ಸಂಗೀತ ಕಲಿತಿದ್ದ ಅವರು ಸಂಘದ ಬೈಠಕ್​ಗಳಲ್ಲಿ ಸುಶ್ರಾವ್ಯ ಧ್ವನಿಯಲ್ಲಿ ಸಂಘಗೀತೆಗಳನ್ನು ಹಾಡುತ್ತಿದ್ದರೆ ಕೇಳುಗರ ಹೃದಯ ಭಾವಾವೇಶಭರಿತವಾಗುತ್ತಿತ್ತು.

1983ರಲ್ಲಿ ಉಡುಪಿಯ ಧರ್ಮಸಂಸತ್ತಿನಲ್ಲಿ 174 ಮಂದಿ ವಿವಿಧ ಪಂಥ, ಪೀಠಗಳ ಮಠಾಧೀಶರು ಒಗ್ಗೂಡಿ ಅಸ್ಪೃಶ್ಯತೆ ನಿವಾರಣೆಗೆ ಕೈಜೋಡಿಸಿದರು. ಇಂತಹದೇ ಸಮ್ಮೇಳನಗಳು ಇತರ ಹಲವು ರಾಜ್ಯಗಳಲ್ಲೂ ನಡೆದವು. ಅದೆಲ್ಲದರ ಹಿಂದೆ ಇದ್ದದ್ದು ಸಿಂಘಾಲ್ ಅವರ ಮಾರ್ಗದರ್ಶನ. ಮಹಿಳೆಯರೂ ಸಮಾಜ ಕಾರ್ಯದಲ್ಲೂ ಕೈಜೋಡಿಸಬೇಕೆಂಬ ಉದ್ದೇಶದಿಂದ ಆರಂಭಗೊಂಡ ದುರ್ಗಾವಾಹಿನಿ ಮತ್ತು ಮಾತೃಶಕ್ತಿ ಎಂಬ ಸಂಘಟನೆಗಳು ಸಿಂಘಾಲ್​ರ ಪರಿಕಲ್ಪನೆಯ ಕೂಸುಗಳು. 2026 ಸಿಂಘಾಲ್ ಅವರ ಜನ್ಮಶತಾಬ್ದಿ ವರ್ಷ. ಆ ಮಹಾನ್ ಚೇತನವನ್ನು ಸ್ಮರಿಸಿ, ಪ್ರೇರಣೆ ಪಡೆಯುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ.