ಎಲಾನ್ ಮಸ್ಕ್, ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ 
ದೇಶ

ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಎಲಾನ್ ಮಸ್ಕ್ ಭಾಗಿ ಮಾಹಿತಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ | Congress

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ವಿಚಾರವಾಗಿ ಕಳೆದ ಗುರುವಾರ(ಮಾ. 26) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ದೂರವಾಣಿ ಸಂಭಾಷಣೆಯಲ್ಲಿ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್​ ಮಸ್ಕ್ ಭಾಗಿಯಾಗಿದ್ದರು ಎಂಬ ಮಾಹಿತಿ ಸಂಬಂಧಿಸಿದಂತೆ ಶನಿವಾರ(ಮಾ. 28) ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಉನ್ನತ ಮಟ್ಟದ ದೂರವಾಣಿ ಸಂಭಾಷಣೆಯಲ್ಲಿ, ಯಾವುದೇ ಅಧಿಕೃತ ಸರ್ಕಾರಿ ಹುದ್ದೆ ಹೊಂದಿರದ ಎಲಾನ್ ಮಸ್ಕ್ ಭಾಗವಹಿಸಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು, ಇದು ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸುವ ಜೊತೆಗೆ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಇಬ್ಬರು ರಾಷ್ಟ್ರೀಯ ನಾಯಕರು ಜಾಗತಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸುತ್ತಿದ್ದಾಗ ಒಬ್ಬ ಉದ್ಯಮಿ ಯಾಕೆ ಹಾಜರಿದ್ದರು? ಈ ಸಂಭಾಷಣೆಯಲ್ಲಿ ಎಲಾನ್ ಮಸ್ಕ್ ಯಾವ ಪಾತ್ರವನ್ನು ವಹಿಸಿದರು? ಇದು ನಿಜವಾಗಿಯೂ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆಯೇ ಅಥವಾ ಇನ್ನೊಂದು 'ವ್ಯಾಪಾರ' ಕಾರ್ಯಸೂಚಿ ಇದೆಯೇ? ಎಂದು ಪ್ರಶ್ನಿಸಿದೆ.
ದೂರವಾಣಿ ಮಾತುಕತೆಯಲ್ಲಿ ಮಸ್ಕ್ ಇರುವಿಕೆಯನ್ನು ಭಾರತ ಸರ್ಕಾರ ಯಾಕೆ ಅಧಿಕೃತವಾಗಿ ಬಹಿರಂಗಪಡಿಸಲಿಲ್ಲ. ಬೇರೆ ದೇಶದಿಂದ ನಾವು ಇದರ ಬಗ್ಗೆ ಮಾಹಿತಿ ತಿಳಿಯಬೇಕಾಯಿತು. ಯುದ್ಧದ ಸಮಯದಲ್ಲಿ ಟ್ರಂಪ್ ವಿವಿಧ ದೇಶಗಳ ನಾಯಕರೊಂದಿಗೆ ಮಾತನಾಡಿದರು, ಆದರೆ ಯಾವುದೇ ಉದ್ಯಮಿ ಆ ಯಾವುದೇ ಕರೆಗಳಲ್ಲಿ ಇರಲಿಲ್ಲ. ಮೋದಿಯೊಂದಿಗಿನ ಕರೆಯಲ್ಲಿ ಮಾತ್ರ ಇದ್ದರು ಎಂದು ಕಾಂಗ್ರೆಸ್ ಕೇಳಿದೆ.
ಇನ್ನೂ ಅಮೆರಿಕಾದ ಶ್ವೇತಭವನ, ಟ್ರಂಪ್ ಮತ್ತು ಮೋದಿಯವರ ನಡುವಿನ ಮಾತುಕತೆಯನ್ನು ಉತ್ಪಾದಕ ಎಂದು ಬಣ್ಣಿಸಿದೆ. ಆದರೆ ಯಾರಿಗೆ ಉತ್ಪಾದಕ? ಈ ಬಗ್ಗೆ ಕೇಂದ್ರ ಸರ್ಕಾರ ದೇಶದ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ.  

ದಿ ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದ್ದೇನು? 

ಉದ್ಯಮಿ ಎಲಾನ್ ಮಸ್ಕ್ ಅಧ್ಯಕ್ಷ ಟ್ರಂಪ್ ಮತ್ತು ಭಾರತದ ಪ್ರಧಾನಿ ಮೋದಿ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಭಾಗವಹಿಸಿದ್ದರು. ಇದು ಯುದ್ಧಕಾಲದ ಬಿಕ್ಕಟ್ಟಿನ ಸಂದರ್ಭದಲ್ಲಿ ಇಬ್ಬರು ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಮಾತುಕತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಭಾಗವಹಿಸುವಿಕೆ ಅಸಾಮಾನ್ಯ ನೋಟ ಎಂದು ಹೆಸರು ಬಹಿರಂಗಪಡಿಸದೇ ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ (ಏಜೆನ್ಸೀಸ್).