ರಾಹುಲ್ ಗಾಂಧಿ ಮತ್ತು ಕಿರಣ್ ರಿಜಿಜು 
ದೇಶ

ದಿಮಾಗಿ ನಕ್ಸಲರನ್ನು ಮುಗಿಸುವುದೇ ಮುಂದಿನ ಗುರಿ: ಪ್ರಧಾನಿಯನ್ನು ಡಿಬೆಟ್​ಗೆ ಕರೆದ ರಾಹುಲ್ ಗಾಂಧಿಗೆ ಕಿರಣ್ ರಿಜಿಜು ತಿರುಗೇಟು | Kiren Rijiju

ದೇಶ ವಿರೋಧಿ ಚಟುವಟಿಕೆ ಮತ್ತು ವಿದೇಶಿ ಶಕ್ತಿಗಳೊಂದಿಗಿನ ಸಂಪರ್ಕದ ಆರೋಪಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಚರ್ಚೆಗೆ ಆಹ್ವಾನಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.

ನವದೆಹಲಿ: ದೇಶ ವಿರೋಧಿ ಚಟುವಟಿಕೆ ಮತ್ತು ವಿದೇಶಿ ಶಕ್ತಿಗಳೊಂದಿಗಿನ ಸಂಪರ್ಕದ ಆರೋಪಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಚರ್ಚೆಗೆ ಆಹ್ವಾನಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ರಾಹುಲ್ ಗಾಂಧಿಯವರ ಎಕ್ಸ್​ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಕಿರಣ್​ ರಿಜಿಜು, ರಾಹುಲ್ ಜೀ, ಸಶಸ್ತ್ರ ಮಾವೋವಾದಿಗಳನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಮೋದಿ ಜೀ ಅವರಿಗೆ ಧನ್ಯವಾದ ತಿಳಿಸಿ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಎಡಪಂಥೀಯ ಉಗ್ರವಾದ ಮತ್ತು ನಕ್ಸಲಿಸಂ ಅನ್ನು ಭಾರತದ ಅತ್ಯಂತ ದೊಡ್ಡ ಆಂತರಿಕ ಭದ್ರತಾ ಬೆದರಿಕೆ ಎಂದು ಬಣ್ಣಿಸಿದ್ದರು. ದಿಮಾಗಿ ನಕ್ಸಲರನ್ನು ಮುಗಿಸುವುದೇ ನಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ.

ಪ್ರಧಾನಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು

ಕಾಡಿನಲ್ಲಿ ಸಶಸ್ತ್ರ ಹಿಡಿದಿದ್ದ ನಕ್ಸಲರು ನಿರ್ಮೂಲನೆಯಾದ್ರೂ, ದೇಶದಲ್ಲಿ ಹಲವು ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ದಿಮಾಗಿ ನಕ್ಸಲರು ನುಸುಳಿದ್ದಾರೆ ಎಂಬ ಪ್ರಧಾನಿ ಮೋದಿ ಮಾತಿಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ದೇಶವಿರೋಧಿ ಯಾರು ಮತ್ತು ವಿದೇಶಿ ಶಕ್ತಿಗಳ ಕಂಟ್ರೋಲ್​ನಲ್ಲಿ ಇರುವವರು ಯಾರು ಎಂಬುದರ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಎಕ್ಸ್‌ನಲ್ಲಿ ಕಿಡಿಕಾರಿರುವ ರಾಹುಲ್ ಗಾಂಧಿ, ಆತ್ಮೀಯ ಸಿಎಆರ್​ಪಿಎಫ್​ನವರೇ, ನಿಮ್ಮ ಮುಖಗಳೇ ಎಲ್ಲವನ್ನೂ ಹೇಳುತ್ತಿದ್ದವು. ಪ್ರಧಾನಿಯವರ ಸುಳ್ಳುಗಳನ್ನು ನೀವು ನಂಬಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ. ನನ್ನ ಸವಾಲು ಇನ್ನೂ ಹಾಗೆಯೇ ಉಳಿದಿದೆ. ದೇಶವಿರೋಧಿ ಯಾರು ಮತ್ತು ವಿದೇಶಿ ಶಕ್ತಿಗಳ ಹತೋಟಿಯಲ್ಲಿ ಇರುವವರು ಯಾರು ಎಂಬುದರ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಲಿ. ಯಾವಾಗ, ಎಲ್ಲಿಯಾದರೂ ಸರಿ ಎಂದು ಓಪನ್ ಚಾಲೆಂಜ್​ ಹಾಕಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

ನ.08ರಂದು ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯ ಕರಣ್‌ಪುರದಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನಕ್ಸಲರ ವಿರುದ್ಧದ ಹೋರಾಟದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಆದರೆ, ಅಪಾಯ ಇಲ್ಲಿಗೆ ಮುಗಿದಿಲ್ಲ. ನಕ್ಸಲರ ಪ್ರಭಾವ ಕಡಿಮೆಯಾಗಿದ್ದರೂ, 'ದಿಮಾಗಿ ನಕ್ಸಲರು' ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ ನುಸುಳಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಸೋಲಿಸುವ ಮೂಲಕ ದೇಶದ ಭದ್ರತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದರು (ಏಜೆನ್ಸೀಸ್).