Jabalpur electrocution: ದಸರಾ ಮೆರವಣಿಗೆ ವೇಳೆ 11 ಕೆವಿ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದು, ಐದರಿಂದ ಏಳು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಮಜೋಲಿ ಪ್ರದೇಶದಲ್ಲಿ ನಡೆದಿದೆ.
ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಂಘಟನಾ ಸಮಿತಿಯ ಸದಸ್ಯರು, ಸಿವಿಲ್ ಲೈನ್ಸ್ ಪ್ರದೇಶದ ಮೂರ್ತಿ ಸೇರಿದಂತೆ ಹಲವು ಮೂರ್ತಿಗಳನ್ನು ವಿಸರ್ಜನೆಗಾಗಿ ನರೇಲಾ ಕೆರೆಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಮೆರವಣಿಗೆ 11 ಕೆವಿ ವಿದ್ಯುತ್ ತಂತಿಗಳ ಕೆಳಗೆ ಹಾದುಹೋಗಿದ್ದು, ತಂತಿಗಳ ಸಂಪರ್ಕದಿಂದ ವಿದ್ಯುತ್ ಆಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಜೋಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಪೂರ್ವಾ ಚೌರಾಸಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಐದರಿಂದ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿದ್ಯುತ್ ತಂತಿಗಳನ್ನು ಎತ್ತರಕ್ಕೆ ಏರಿಸುವ ಅಥವಾ ಅವುಗಳ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಈ ಹಿಂದೆಯೇ ಶಾಂತಿ ಸಮಿತಿ ಸಭೆಯಲ್ಲಿ ಚರ್ಚೆಯಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಠಾಣಾಧಿಕಾರಿ, ಸಭೆಯಲ್ಲಿ ಜೂನಿಯರ್ ಎಂಜಿನಿಯರ್ ಭಾಗವಹಿಸಿದ್ದರು. ಈ ಹಿಂದೆ ಕೈಗೊಂಡ ಕ್ರಮದಂತೆ ವಿದ್ಯುತ್ ತಂತಿಗಳನ್ನು ಎತ್ತರಕ್ಕೆ ಏರಿಸುವುದಾಗಿ ಅವರು ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಪ್ರಕರಣದಲ್ಲಿ ಆಡಳಿತವು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದು ಠಾಣಾಧಿಕಾರಿ ಹೇಳಿದ್ದಾರೆ. (ಏಜೆನ್ಸೀಸ್)