Election Commission | ಟಿಎಂಸಿ ಪ್ರಶ್ನೆಗಳಿಗೆ ಸಾಕ್ಷಿ ಸಮೇತ ಉತ್ತರ ನೀಡಿದ ಚುನಾವಣಾ ಆಯೋಗ
Election Commission: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದ ಸ್ಟ್ರಾಂಗ್ ರೂಮ್ ಆವರಣದಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ನಾಯಕರಾದ ಶಶಿ ಪಂಜಾ ಮತ್ತು ಕುನಾಲ್ ಘೋಷ್ ಇವಿಎಂ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿ ಮತ ಎಣಿಕೆ ಕೇಂದ್ರದ ಹೊರಗೆ ಧರಣಿ ನಡೆಸಿದ್ದಾರೆ.
ತಮ್ಮ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿಯಿಲ್ಲದೆ ಮತಪೆಟ್ಟಿಗೆಗಳನ್ನು ತೆರೆಯುವ ಅಥವಾ ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಟಿಎಂಸಿ ನಾಯಕರು, ಕೇಂದ್ರದೊಳಗೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಕೆಲಸ ಮಾಡುತ್ತಿರುವುದು ಅನುಮಾನಾಸ್ಪದವಾಗಿದೆ ಎಂದು ದೂರಿದರು. ಇದೇ ಸಮಯದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಿದ್ದು ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.
ಈ ಗಂಭೀರ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗವು, ಇವಿಎಂ ಭದ್ರತೆಯ ಕುರಿತಾದ ಎಲ್ಲಾ ಸಂಶಯಗಳನ್ನು ತಳ್ಳಿಹಾಕಿದೆ. ಖುದಿರಾಮ್ ಅನುಶೀಲನ್ ಕೇಂದ್ರದೊಳಗೆ ಏಳು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಹೊಂದಿರುವ ಸ್ಟ್ರಾಂಗ್ ರೂಮ್‌ಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಅಭ್ಯರ್ಥಿಗಳು ಮತ್ತು ವೀಕ್ಷಕರ ಸಮ್ಮುಖದಲ್ಲೇ ಅವುಗಳನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಟುವಟಿಕೆಗಳು ಇವಿಎಂಗಳಿಗೆ ಸಂಬಂಧಿಸಿದ್ದಲ್ಲ, ಬದಲಾಗಿ ಅಂಚೆ ಮತಪತ್ರಗಳನ್ನು (Postal Ballots) ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕಿಸುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಆಯೋಗ ವಿವರಿಸಿದೆ. ಈ ಕೆಲಸವು ಇವಿಎಂ ಇರುವ ಕೊಠಡಿಗಳ ಹೊರಗಿನ ಕಾರಿಡಾರ್‌ನಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕ್ರಿಯೆಯ ಕುರಿತು ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ಇಮೇಲ್ ಮೂಲಕ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ ಟಿಎಂಸಿ ಮತ್ತು ಬಿಜೆಪಿ ನಾಯಕರಿಗೆ ಸ್ಥಳದಲ್ಲೇ ಅಧಿಕಾರಿಗಳು ಭದ್ರತಾ ಶಿಷ್ಟಾಚಾರಗಳನ್ನು ಮತ್ತು ಅಂಚೆ ಮತಪತ್ರಗಳ ವಿಂಗಡಣೆಯ ಕಾರ್ಯವಿಧಾನವನ್ನು ಸವಿಸ್ತಾರವಾಗಿ ವಿವರಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಆರೋಪವೇನು..?
ಮತಯಂತ್ರಗಳಲ್ಲಿ ಅಕ್ರಮ ಅಥವಾ ದುರುಪಯೋಗ ನಡೆಯಬಹುದು ಎಂಬ ಶಂಕೆ ವ್ಯಕ್ಯಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಕ್ಷಿಣ ಕೋಲ್ಕತ್ತಾದ ಸಖಾವತ್ ಸ್ಮಾರಕ ಶಾಲೆಯಲ್ಲಿರುವ ಸ್ಟ್ರಾಂಗ್ ರೂಮ್‌ಗೆ ಹಠಾತ್ ಭೇಟಿ ನೀಡಿದರು.
ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ, ಮತಯಂತ್ರಗಳಲ್ಲಿ ಅಕ್ರಮ ಎಸಗಲು ಅಥವಾ ಫಲಿತಾಂಶವನ್ನು ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದರೆ, ಇದನ್ನು ಸಾವು-ಬದುಕಿನ ಹೋರಾಟವಾಗಿ ಪರಿಗಣಿಸುತ್ತೇನೆ, ಹೋರಾಟವೇ ನನ್ನ ಬದುಕು ಎಂದರು. ಆರಂಭದಲ್ಲಿ ಕೇಂದ್ರ ಪಡೆಗಳು ತಮ್ಮನ್ನು ತಡೆದವು, ಒಬ್ಬ ಅಭ್ಯರ್ಥಿಯಾಗಿ ತಮಗೆ ಸ್ಟ್ರಾಂಗ್ ರೂಮ್‌ವರೆಗೆ ಹೋಗುವ ಕಾನೂನಾತ್ಮಕ ಹಕ್ಕಿದೆ ಎಂದು ಪ್ರತಿಪಾದಿಸಿ ಒಳಗೆ ಪ್ರವೇಶಿಸಿರುವುದಾಗಿ ದೀದಿ ತಿಳಿಸಿದರು.
ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನದವರೆಗೆ ಸ್ಟ್ರಾಂಗ್ ರೂಮ್‌ಗಳ ಬಳಿ ಹಗಲು-ರಾತ್ರಿ ಕಾವಲು ಕಾಯುವಂತೆ ಮಮತಾ ಬ್ಯಾನರ್ಜಿ ತನ್ನ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಯಂತ್ರಗಳನ್ನು ಎಣಿಕೆ ಕೇಂದ್ರಗಳಿಗೆ ಸ್ಥಳಾಂತರಿಸುವ ಸಮಯದಲ್ಲಿ ಅವುಗಳನ್ನು ಬದಲಿಸುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ದೀದಿ, ಈ ಬಗ್ಗೆ ತೀವ್ರ ನಿಗಾ ಇಡುವಂತೆ ಅಭ್ಯರ್ಥಿಗಳಿಗೆ ಮತ್ತು ಏಜೆಂಟರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲೂ ಎಕ್ಸಿಟ್ ಪೋಲ್‌ಗಳು ಸುಳ್ಳಾಗಿದ್ದವು, ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಜಯಗಳಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).